ADVERTISEMENT

ದೆಹಲಿ ಸ್ಫೋಟ: ಹಾವೇರಿಯಲ್ಲೂ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 3:09 IST
Last Updated 12 ನವೆಂಬರ್ 2025, 3:09 IST
ಹಾವೇರಿ ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಮೇತ ಪೊಲೀಸರು ಮಂಗಳವಾರ ತಪಾಸಣೆ ನಡೆಸಿದರು
ಹಾವೇರಿ ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಮೇತ ಪೊಲೀಸರು ಮಂಗಳವಾರ ತಪಾಸಣೆ ನಡೆಸಿದರು   

ಹಾವೇರಿ: ದೇಶದ ರಾಜಧಾನಿ ನವದೆಹಲಿಯ ಕೆಂಪುಕೋಟೆ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದ್ದರಿಂದ ಎಚ್ಚೆತ್ತುಕೊಂಡಿರುವ ಹಾವೇರಿ ಜಿಲ್ಲಾ ಪೊಲೀಸರು, ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲ್ಲೂಕಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.

ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ಇಡೀ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಹೀಗಾಗಿ, ಹಾವೇರಿ ನಗರದ ಹಲವು ಸ್ಥಳಗಳಲ್ಲಿ ಪೊಲೀಸರು ಮಂಗಳವಾರ ಶೋಧ ನಡೆಸಿದರು. ತಾಲ್ಲೂಕು ಕೇಂದ್ರಗಳ ಪ್ರಮುಖ ಸ್ಥಳಗಳಲ್ಲಿಯೂ ಸುತ್ತಾಡಿದ ಪೊಲೀಸರು, ಪರಿಶೀಲನೆ ನಡೆಸಿದರು.

ಹಾವೇರಿ ರೈಲು ನಿಲ್ದಾಣಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಮೇತ ಭೇಟಿ ನೀಡಿದ ಪೊಲೀಸರು, ಪ್ರಯಾಣಿಕರ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದರು. ನಂತರ, ಪ್ರತಿಯೊಂದು ಸ್ಥಳದಲ್ಲಿಯೂ ಪ್ರತಿಯೊಂದು ಅನುಮಾನಾಸ್ಪದ ವಸ್ತುಗಳನ್ನು ಲೋಹ ಶೋಧಕದಿಂದ ತಪಾಸಣೆ ನಡೆಸಿದರು.

ADVERTISEMENT

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಈ ರಸ್ತೆಗಳಲ್ಲಿಯೂ ಟೋಲ್‌ಗೇಟ್ ಸಿಬ್ಬಂದಿ ಸಹಾಯದಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಹಾವೇರಿ ಜಿಲ್ಲೆಯ ಗಡಿ ಪ್ರವೇಶಿಸುವ ಸ್ಥಳಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಬಸ್‌ ನಿಲ್ದಾಣ, ಮಾರುಕಟ್ಟೆ, ತಹಶೀಲ್ದಾರ್ ಕಚೇರಿ, ಶಾಲೆ, ಕಾಲೇಜುಗಳು, ಖಾಸಗಿ ಸಂಸ್ಥೆಗಳು ಹಾಗೂ ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿಯೂ ಪೊಲೀಸರು ಮಂಗಳವಾರ ತಪಾಸಣೆ ನಡೆಸಿದರು.

ಯಾರಾದರೂ ಅನುಮಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಅಥವಾ 112ಕ್ಕೆ ಕರೆ ಮಾಡುವಂತೆ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಿದರು.

‘ನಿಯಂತ್ರಣ ಕೊಠಡಿಗೆ ಹಾಗೂ ಠಾಣೆಗಳಿಗೆ ಬರುವ ದೂರುಗಳನ್ನು ನಿರ್ಲಕ್ಷಿಸದಂತೆ, ಅನುಮಾನಾಸ್ಪದ ಕರೆಗಳಿದ್ದರೆ ತಕ್ಷಣ ಮೇಲಧಿಕಾರಿಗಳಿಗೆ ತಿಳಿಸಬೇಕು’ ಎಂದು ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ ಅವರು ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.

ಹೊರ ರಾಜ್ಯದ ನೋಂದಣಿ ಸಂಖ್ಯೆ ಇರುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ತಪಾಸಣೆಗಾಗಿ ಪೊಲೀಸರು, ಶ್ವಾನ ದಳವನ್ನೂ ಬಳಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.