ADVERTISEMENT

₹15 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ: ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 14:24 IST
Last Updated 18 ನವೆಂಬರ್ 2022, 14:24 IST
6 ವರ್ಷ ಪೂರೈಸಿದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕಾಯಂಗೊಳಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು
6 ವರ್ಷ ಪೂರೈಸಿದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕಾಯಂಗೊಳಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು   

ಹಾವೇರಿ: ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳ ಧೋರಣೆ ಖಂಡಿಸಿ ಹಾಗೂ 6 ವರ್ಷ ಪೂರೈಸಿದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕಾಯಂಗೊಳಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಗಾಂಧಿ ತಾವರಗಿ ಮಾತನಾಡಿ,ರಾಜ್ಯದ ಎಲ್ಲ ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಿ ಅವುಗಳ ನಿರ್ವಹಣೆಗಾಗಿ ರಾಜ್ಯದಲ್ಲಿ 6182 ಸಮುದಾಯ ಆರೋಗ್ಯ ಅಧಿಕಾರಿಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಇಲಾಖೆಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಇಲಾಖೆಯ ಅಧಿಕಾರಿಗಳು ಸಮುದಾಯ ಆರೋಗ್ಯ ನೌಕರರನ್ನು ಇತರೆ ಕಾರ್ಯಗಳಿಗೆ ನಿಯೋಜಿಸುತ್ತಿರುವ ಹಿನ್ನೆಲೆ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಾರ್ಯಗಳು ಕುಂಠಿತಗೊಳ್ಳುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಸಂಚಾಲಕ ರಾಜಕುಮಾರ ಭಜಂತ್ರಿ ಮಾತನಾಡಿ, ‘ಉದ್ದೇಶಿತ ಕಾರ್ಯಕ್ಕೆ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆಯೋ ಅದೇ ಕಾರ್ಯ ಚಟುವಟಿಕೆಗಳಲ್ಲಿ ಮುಂದುವರಿಸಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕೇಂದ್ರ ಸರ್ಕಾರದ ಆದೇಶದನ್ವಯ ಹಾಗೂ ಮಾರ್ಗಸೂಚಿ ಪ್ರಕಾರ ಕಾರ್ಯಕ್ಷಮತೆ ಆಧಾರದ ಮೇಲೆ ಮಾಸಿಕ ಪ್ರೋತ್ಸಾಹಧನ ₹15 ಸಾವಿರ ಇತರೆ ರಾಜ್ಯಗಳಲ್ಲಿ ಪಾವತಿಸುತ್ತಿದೆ. ಆದರೆ, ರಾಜ್ಯದಲ್ಲಿ ಅಭಿಯಾನದ ನಿರ್ದೇಶಕರು ಮಾರ್ಗಸೂಚಿಯನ್ನು ಕಡೆಗಣಿಸಿ ಮಾಸಿಕ ಪ್ರೋತ್ಸಾಹಧನ ₹8 ಸಾವಿರ ಮಾತ್ರ ನೀಡಲಾಗುತ್ತಿದ್ದು, ಕೂಡಲೇ ಈ ತಾರತಮ್ಯ ನೀತಿಯನ್ನು ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೇಂದ್ರ ಸರ್ಕಾರ ಮಾರ್ಗಸೂಚಿಯಂತೆ ‘ಜನ ಆರೋಗ್ಯ ಸಮಿತಿ’ ರಚಿಸಿ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಈ ಸಮಿತಿಯ ಕಾರ್ಯದರ್ಶಿಯಾಗಿ ನೇಮಿಸಬೇಕು. ಆದರೆ ಇದುವರೆಗೂ ಈ ಸಮಿತಿ ಅನುಷ್ಠಾನಗೊಳಿಸಲು ಅಧಿಕೃತ ಆದೇಶ ಹೊರಡಿಸಿಲ್ಲ. ಕೂಡಲೇ ಜನ ಆರೋಗ್ಯ ಸಮಿತಿ ರಚಿಸಿ ನಿಯಮಾವಳಿ ಪ್ರಕಾರ ಮುಕ್ತ ನಿಧಿ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾರಾಯ ಎಸ್.ಐ,ಸಂಜೀವ ಗಾಜೀಗೌಡ್ರ, ವೀರೇಶ ಹುಂಬಿ, ಶಿವರಾಜ ಬ್ಯಾಲದಹಳ್ಳಿ, ಆಷ್ಪಾಖ ಅಹಮ್ಮದ, ಮಂಜುನಾಥ ದೊಡ್ಡಮನಿ, ಚನ್ನವೀರಸ್ವಾಮಿ, ಅಮೀರಖಾನ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.