ADVERTISEMENT

ಸದಾಶಿವ ಆಯೋಗ ವರದಿ ಶಿಫಾರಸ್ಸಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 13:30 IST
Last Updated 21 ಸೆಪ್ಟೆಂಬರ್ 2022, 13:30 IST
ಶಿಗ್ಗಾವಿ ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಚೇರಿ ಮುಂದೆ ಕರ್ನಾಟಕ ರಾಜ್ಯ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯರು ಸದಾಶಿವ ಆಯೋಗದ ವರದಿ ಅಂಗೀಕರಿಸಿ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು
ಶಿಗ್ಗಾವಿ ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಚೇರಿ ಮುಂದೆ ಕರ್ನಾಟಕ ರಾಜ್ಯ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯರು ಸದಾಶಿವ ಆಯೋಗದ ವರದಿ ಅಂಗೀಕರಿಸಿ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು   

ಶಿಗ್ಗಾವಿ: ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಚೇರಿ ಮುಂದೆ ಕರ್ನಾಟಕ ರಾಜ್ಯ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯರು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಬುಧವಾರ ಧರಣಿ ಸತ್ಯಾಗ್ರಹ ನಡೆಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಝಾಂಜ್ ಮೇಳ, ಹಲಗೆ ಸೇರಿದಂತೆ ವಿವಿಧ ವಾಧ್ಯಗಳೊಂದಿಗೆ ಸಂಚರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಕ್ರಮ ಕೈಗೊಳ್ಳುವಂತೆ ಸಿಎಂಗೆ ಒತ್ತಾಯಿಸಿ ಶಿಗ್ಗಾವಿ ತಹಶೀಲ್ದಾರ್ ಶಿವಾನಂದ ರಾಣೆ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ವರದಿ ಜಾರಿಗೆ ರಾಜಕೀಯ ವ್ಯಕ್ತಿಗಳ ಇಚ್ಚಾಶಕ್ತಿ ಕಾರಣವಾಗಿದ್ದು, ಕರ್ನಾಟಕದಲ್ಲಿರುವ ಪರಿಶಿಷ್ಟರು ಏಕಸ್ವರೂಪದ ಒಂದೇ ಬಗೆ ಒಂದೇ ಭಾಷೆಯ ವರ್ಗಗಳುಳ್ಳ ಜಾತಿಗಳಾಗಿಲ್ಲ, ಅಸ್ಪೃಶ್ಯರು, ಸ್ಪೃಶರು, ಅಲೆಮಾರಿಗಳು ಸೇರಿಕೊಂಡು 101 ಪರಿಶಿಷ್ಟರ ಜಾತಿಗಳಾಗಿವೆ. ಶೋಷಿತರಲ್ಲಿಯೇ ಹಿಂದುಳಿದಿರುವ ಸೌಲಭ್ಯವಂಚಿತ ಸಮುದಾಯಗಳ ಜನಸಂಖ್ಯಾಧಾರಿತವಾಗಿ ಒಳಮೀಸಲಾತಿ ಜಾರಿಗಾಗಿ ಈಗಿರುವ ಶೇ 15ರ ಮೀಸಲಾತಿ ಹಂಚಿಕೆಯನ್ನು ಪರಿಷ್ಕರಣೆ ಮಾಡಿ ಪರಿಶಿಷ್ಟರಲ್ಲಿರುವ 101 ಜಾತಿಗಳಿಗೂ ಸಮಪಾಲು ಸಮಬಾಳು ಸಾಮಾಜಿಕ ನ್ಯಾಯಕ್ಕಾಗಿ ಸೆಕ್ಷನ್ 3 ಕಮಿಷನ್ ಎನ್‌ಕ್ವೆರಿ ಆ್ಯಕ್ಟ್ 1952, ಸೆಂಟ್ರಲ್ ಆ್ಯಕ್ಟ್ 60ರ 1952 ಅನುಚ್ಛೇದ 338ರ ಪ್ರಕಾರ 2005ರಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚನೆಗೊಂಡು ಅನುಚ್ಛೇದ 15 ಮತ್ತು 16ರ ಅಡಿಯಲ್ಲಿ ಪರಿಶೀಷ್ಟರ ಜಾತಿಗಳ ಸಂವಿಧಾನಿಕ ಸೌಲಭ್ಯಗಳಾದ ಶೈಕ್ಷಣಿಕ ಹಾಗೂ ಆರ್ಥಿಕ ತಾರತಮ್ಯಗಳ ಪರಿಶೀಲನೆ ಜವಾಬ್ದಾರಿಯನ್ನು ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ನಿರ್ವಹಿಸಿದ್ದಾರೆ.

ADVERTISEMENT

ಆಯೋಗದ ಸಮೀಕ್ಷೆ ಪ್ರಕ್ರಿಯೆಗೆ ಹಿಂದಿನ ಬಿಜೆಪಿ ಸರ್ಕಾರವು 12 ಕೋಟಿ ಅನುದಾನವನ್ನು ನೀಡಿದೆ, ಪರಿಶೀಷ್ಟರ ಮನೆ ಮನೆ ಕೌಟುಂಬಿಕ ಸಮೀಕ್ಷೆ ಹಾಗೂ ಎಲ್ಲಾ ಹಂತದ ಪರಿಶೀಲನಾ ಕಾರ್ಯನಿರ್ವಹಿಸಿದ ಆಯೋಗವು ತನ್ನ ಸುದೀರ್ಘ ವರದಿಯನ್ನು 2012ರಲ್ಲಿ ಬಿಜೆಪಿ ಸರ್ಕಾರವಿದ್ದಾಗಲೀ, ವರದಿ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

‘ಜನಾಂದೋಲನ’

ಸದಾಶಿವ ಆಯೋಗದ ವರದಿ ಕುರಿತು ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಸಾಕಷ್ಟು ಬಾರಿ ಚರ್ಚಿಸಲಾಗಿದ್ದು, ವರದಿ ಅಂಗೀಕರಿಸುವಂತೆ ಭರವಸೆ ನೀಡಲಾಗಿದೆ. ಆದರೆ ಈವರೆಗೆ ಸರ್ಕಾರದ ಕಾರ್ಯಕಲಾಪದಲ್ಲಿ ಚರ್ಚೆಗೆ ಬಂದಿಲ್ಲ. ತಕ್ಷಣ ವರದಿ ಶಿಫಾರಸ್ಸು ಮಾಡಬೇಕು. ಇಲ್ಲವಾದರೆ ಜನಾಂದೋಲನದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವದು ಎಂದು ಸಮಿತಿ ರಾಜ್ಯ ಘಟಕದ ಗೌರವಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.

ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಬೆನ್ನೂರ, ಮುಖಂಡರಾದ ಡಿ.ಎಸ್.ಮಾಳಗಿ, ಪರಮೇಶಪ್ಪ ಮೇಗಳಮನಿ, ಉಡಚಪ್ಪ ಮಾಳಗಿ, ನಿಂಗಪ್ಪ ಹರಿಜನ, ಮಾಲತೇಶ ಯಲ್ಲಾಪುರ, ಎಸ್ ಎಫ್ .ಮಣಕಟ್ಟಿ, ಸಿದ್ದಪ್ಪ ಹರಿಜನ, ಬಸವರಾಜ ಕಟ್ಟಿಮನಿ, ಭೀಮಣ್ಣ ಹೊಟ್ಟೂರ, ಶಿವಾನಂದ ಬೆಳಗಲಿ, ಹನುಮಂತಪ್ಪ ಹರಿಜನ, ಚಂದ್ರಪ್ಪ ಹರಿಜನ, ಮಲ್ಲಪ್ಪ ದೊಡ್ಡಮನಿ,ಅಶೋಕ ಮುರೆಣ್ಣವರ, ಪ್ರೇಮಾ ಕಲಕೇರಿ, ಸಂಜಯಗಾಂಧಿ ಸಂಜೀವಣ್ಣವರ, ನಾಗರಾಜ ಮಾಳಗಿ, ಹೊನ್ನಪ್ಪ ತಗಡಿನಮನಿ, ಎಸ್.ಆರ್ ರಂಗನಾಥ, ಯಲ್ಲಪ್ಪ ಅಂದಲಗಿ ಸೇರಿದಂತೆ ಸಮಿತಿ ಅನೇಕ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.