ಗುತ್ತಲ: ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗಿ, ಇಲಿಜ್ವರ ಜನರಲ್ಲಿ ಆತಂಕ ಮೂಡಿಸಿದ್ದು, ಗುತ್ತಲ ಪಟ್ಟಣ ಕೂಡ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಷ್ಟರ ಮಟ್ಟಿಗೆ ಕಲುಷಿತಗೊಂಡಿದೆ. ಇದಕಕೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯಧೋರಣೆ ಕಾರಣ ಎಂದು ಪಟ್ಟಣದ ಸಾಮಾಜಿಕ ಕಾರ್ಯಕರ್ತ ಜಾವಿದ ಹಾಲಗಿ ಆರೋಪಿಸಿದ್ದಾರೆ.
ಪಟ್ಟಣದ ಹಲುವಾರು ಕಡೆಗಳಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸದ ಕಾರಣ ಚರಂಡಿಗಳು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿವೆ. ಪಟ್ಟಣದಲ್ಲಿ ವಿಪರೀತ ಸೊಳ್ಳೆಗಳ ಕಾಟಕ್ಕೆ ಜನರು ಬೇಸತ್ತು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಪಟ್ಟಣದಲ್ಲಿ ಹಲವೆಡೆ ಚರಂಡಿಗಳ ನಿರ್ಮಾಣವಾಗಿಲ್ಲ. ಸಿಸಿ ರಸ್ತೆಯಾಗಬೇಕಿದ್ದ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಖಾಲಿ ನಿವೇಶನಗಳಲ್ಲಿ ಮುಳ್ಳಿನ ಗಿಡಗಳು ಮತ್ತು ಹುಲ್ಲು ಬೆಳೆದು ಅಕ್ಕಪಕ್ಕದ ಮನೆಗಳಲ್ಲಿ ವಿಷ ಜಂತುಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಹಾವೇರಿ, ಹಾವನೂರ ಮತ್ತು ರಾಣೆಬೆನ್ನೂರ ಹಾಗೂ ನೆಗಳೂರ ಕಡೆ ಹೊಗುವ ರಸ್ತೆಯ ಅಕ್ಕಪಕ್ಕದಲ್ಲಿ ತಿಪ್ಪೆಗುಂಡಿಗಳದ್ದೆ ಕಾರುಬಾರು. ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಕಂಡು ಕಾಣದ ಹಾಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಪಟ್ಟಣದ ಜನರು ಆರೋಪಿಸುತ್ತಿದ್ದಾರೆ.
ಪೊಲೀಸ್ ಠಾಣೆಯ ಎದುರಿಗೆ ಇರುವ ಚರಂಡಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ಸಂಪೂರ್ಣ ಮುಚ್ಚಿವೆ. ಗೋಕಟ್ಟೆ ಕೆರೆಯಿಂದ ಹೊಗುವ ಹಾವನೂರ ರಸ್ತೆಯ ಎರಡು ಬದಿಯಲ್ಲಿರುವ ಚರಂಡಿಗಳು ಗಿಡಗಳಿಂದ ಮುಚ್ಚಿ ಮಾಯವಾಗಿವೆ. ಗೋಕಟ್ಟೆ ಕೆರೆ ನೀರು ಸಂಪೂರ್ಣ ಮಲಿನಗೊಂಡು, ಹಸಿರು ಬಣ್ಣಕ್ಕೆ ತಿರುಗಿದೆ. ಕೂಡಲೆ ಪಟ್ಟಣದ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಕರವೇ ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ಹಾಲೇಶ ಹಾಲಣ್ಣನವರ ಪಟ್ಟಣ ಪಂಚಾಯ್ತಿ ಅಧಿಕಾರಿಗಳನ್ನು ಆಗ್ರಹಿಸಿದರು.
‘ಪಟ್ಟಣದಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಸೊಳ್ಳೆಗಳ ನಿರ್ಮೂಲನೆಗೆ ಮೇಲಾಥಿಯನ್ ಪುಡಿಯನ್ನು ಸಿಂಪರಣೆ ಮಾಡಲಾಗಿದೆ. ಕೂಡಲೇ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಾ.ದೇವಾನಂದ ದೊಡ್ಡಮನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.