ADVERTISEMENT

ಬ್ಯಾಡಗಿ: ಅಭಿವೃದ್ಧಿಯತ್ತ ಸಾಗಿದ ಶಿಡೇನೂರ ಅವಳಿ ಗ್ರಾಮ

ಪ್ರಮೀಳಾ ಹುನಗುಂದ
Published 31 ಮಾರ್ಚ್ 2024, 5:09 IST
Last Updated 31 ಮಾರ್ಚ್ 2024, 5:09 IST
ಬ್ಯಾಡಗಿ ತಾಲ್ಲೂಕು ಶಿಡೇನೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನವನ್ನು ₹ 1 ಕೋಟಿ ವೆಚ್ಚದಲ್ಲಿ ಪ್ರಾಚ್ಯ ವಸ್ತು ಇಲಾಖೆ ಅಭಿವೃದ್ಧಿ ಪಡಿಸಿದೆ
ಬ್ಯಾಡಗಿ ತಾಲ್ಲೂಕು ಶಿಡೇನೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನವನ್ನು ₹ 1 ಕೋಟಿ ವೆಚ್ಚದಲ್ಲಿ ಪ್ರಾಚ್ಯ ವಸ್ತು ಇಲಾಖೆ ಅಭಿವೃದ್ಧಿ ಪಡಿಸಿದೆ   

ಬ್ಯಾಡಗಿ: ತಾಲ್ಲೂಕಿನ ಅವಳಿ ಗ್ರಾಮಗಳಲ್ಲಿ ಒಂದಾದ ಹೊಸ ಶಿಡೇನೂರ ಬ್ಯಾಡಗಿ ಪಟ್ಟಣದಿಂದ ಆರು ಕಿ.ಮೀ ದೂರದಲ್ಲಿದೆ. 6 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಮೊರಾರ್ಜಿ ದೇಸಾಯಿ ವಸತಿಯುತ ಪ್ರೌಢಶಾಲೆ ಸೇರಿದಂತೆ ಮೂರು ಪ್ರೌಢಶಾಲೆಗಳು, ಮೆಟ್ರಿಕ್‌ ನಂತರದ ಹಾಸ್ಟೆಲ್‌ ಹೊಂದಿರುವ ಪದವಿ ಪೂರ್ವ ಕಾಲೇಜು ಹೊಂದಿದೆ. ಸಾವಿರಾರು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಹಳೆ ಶಿಡೇನೂರ ಗ್ರಾಮದಲ್ಲಿ ಹೊಸದಾಗಿ ಮುಕ್ತೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ. ಮೂರಕ್ಕೂ ಹೆಚ್ಚು ಸಿಮೆಂಟ್‌ ಇಟ್ಟಿಗೆ ತಯಾರಿಸುವ ಯೂನಿಟ್‌ಗಳು ಕಾರ್ಯ ಆರಂಭಿಸಿವೆ. ‘ಶಿಡೆಯನೂರು’ ಎಂದು ಈ ಗ್ರಾಮಕ್ಕೆ ಪ್ರಾಚೀನ ಶಾಸನದಲ್ಲಿ ಉಲ್ಲೇಖವಿದ್ದು, ಬಳಿಕ ಶಿಡೇನೂರು ಎಂದು ಪರಿವರ್ತನೆಗೊಂಡಿದೆ. ಹೊಸ ಶಿಡೇನೂರ ಸೊರಬ ಗಜೇಂದ್ರಗಡ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದರೆ ಹಳೆ ಶಿಡೇನೂರ ರಸ್ತೆಯಿಂದ ಒಂದೂವರೆ ಕಿ.ಮೀ ದೂರದಲ್ಲಿದೆ. ಹೊಸ ಶಿಡೇನೂರ ಹಾಗೂ ಹಳೆ ಶಿಡೇನೂರ ಗ್ರಾಮಗಳ ಸಮ್ಮಿಲನದಿಂದ ‘ಶಿಡೇನೂರ’ ಎಂದಾಗಿದೆ. ಅರೆ ಮಲೆನಾಡು ಪ್ರದೇಶವಾಗಿದ್ದರಿಂದ ಭತ್ತ, ಕಬ್ಬು ಹಾಗೂ ಅಡಿಕೆ ಇಲ್ಲಿಯ ಪ್ರಮುಖ ಬೆಳೆಗಳಾಗಿದ್ದವು. ಕ್ರಮೇಣ ಮಳೆ ಬೀಳುವ ಪ್ರಮಾಣ ಕ್ಷೀಣಿಸುತ್ತಿದ್ದಂತೆ ಹತ್ತಿ ಹಾಗೂ ಗೋವಿನ ಜೋಳದತ್ತ ರೈತರ ಚಿತ್ತ ಹರಿಯಿತು. ತುಂಗಭದ್ರಾ ನದಿ ತೀರದಿಂದ ಆಣೂರು ಗ್ರಾಮದ ದೊಡ್ಡ ಕೆರೆ ತುಂಬಿಸಿ, ಅಲ್ಲಿಂದ ತಾಲ್ಲೂಕಿನ ವಿವಿಧ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ ಕೈಗೆತ್ತಿಕೊಂಡಿದೆ.

ಈ ಯೋಜನೆಗೆ ಉದ್ಘಾಟನೆಯ ಭಾಗ್ಯ ದೊರೆತರೂ ಕಳಪೆ ಕಾಮಗಾರಿ ಹಾಗೂ ಗುಣಮಟ್ಟವಿಲ್ಲದ ಪೈಪ್‌ಗಳ ಅಳವಡಿಕೆಯಿಂದ ಕೆರೆಗಳಿಗೆ ನೀರು ಹರಿಯಲೇ ಇಲ್ಲ. ಪರಿಣಾಮವಾಗಿ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಕೆರೆಗಳ ಒಡಲು ಬರಿದಾಗಿದೆ. ಇದರಿಂದಾಗಿ ಜನ–ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳದೇ ಜನರ ನಿರೀಕ್ಷೆ ಹುಸಿಯಾಗಿದೆ. ತಾಲ್ಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಬೃಹತ್‌ ಯೋಜನೆಯ ಹೋರಾಟಕ್ಕೆ ಇಲ್ಲಿಂದಲೇ ಚಾಲನೆ ದೊರೆತಿತ್ತು ಎಂದು ರೈತ ಮುಖಂಡ ಕಿರಣ ಗಡಿಗೋಳ ಹೇಳಿದರು.

ADVERTISEMENT

ಇತಿಹಾಸ : ಶಿಡೇನೂರ ಗ್ರಾಮ ಈ ಹಿಂದೆ ಬನವಾಸಿ 12 ಸಾವಿರಕ್ಕೆ ಸೇರಿದ ಸಾತ್ತಳ್ಳಿಗೆ-70 ಕಂಪನದಲ್ಲಿತ್ತು ಎಂದು ಎರಡು ಶಿಲಾ ಶಾಸನಗಳಲ್ಲಿ ಉಲ್ಲೇಖವಿದೆ. ಬಾದಾಮಿ ಚಾಲುಕ್ಯ ಇಮ್ಮಡಿ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ ವೀರಗಲ್ಲು ಸಿಂಗವಡ್ಡಗಿ ರಾಪಮ್ಮನು ಶಿರಿವಾಳ ಮಾಡಿದನೆಂದು ಹೇಳಿದರೆ, ಇಮ್ಮಡಿ ಕೀರ್ತಿವರ್ಮನ ಕಾಲಕ್ಕೆ ಸೇರಿದ ಶಾಸನ ಚಾಲುಕ್ಯ ರಾಜ್ಯ ಕೆಡುವಾಗ ದೋಸಿ ಹಾಗೂ ಪೊಲಗಿಲ್ಲಿಯರು ಹೋರಾಡುತ್ತ ಮಡಿದ ವಿಷಯವನ್ನು ಪ್ರಸ್ತಾಪಿಸಿದೆ. ಕಲ್ಮೇಶ್ವರ ಗುಡಿಯ ಬಳಿ ಇರುವ ರಾಷ್ಟ್ರಕೂಟ ಅರಸು ದೃವನ ಕಾಲಕ್ಕೆ ಸೇರಿದ ವೀರಗಲ್ಲು ಶಾಸನ ಮಾರಕ್ಕರಸನು ಬನವಾಸಿ 12 ಸಾವಿರ ಆಳುತ್ತಿದ್ದು, ವಿನವತಿ ಅಬ್ಬೆ ಶಿಡೇನೂರ ಗ್ರಾಮವನ್ನು ಆಳುತ್ತಿದ್ದಾಗ ನಡೆದ ಕಾಳಗದಲ್ಲಿ ಮಡಿದ ವೀರರ ಸಲುವಾಗಿ ನಿಲ್ಲಿಸಿದ ಸ್ಮಾರಕವಾಗಿದೆ.

ಬ್ಯಾಡಗಿ ತಾಲ್ಲೂಕು ಶಿಡೇನೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನವನ್ನು ₹ 1ಕೋಟಿ ವೆಚ್ಚದಲ್ಲಿ ಪ್ರಾಚ್ಯ ವಸ್ತು ಇಲಾಖೆ ಅಭಿವೃದ್ಧಿ ಪಡಿಸಿದೆ

ಕಲ್ಯಾಣ ಚಾಲುಕ್ಯ ಅರಸ ಇಮ್ಮಡಿ ಜಯಸಿಂಹನ ಕಾಲದ ಕ್ರಿ.ಶ 1,015 ರ ಶಾಸನ ಕಾಟಿಮಯ್ಯನು ಬನವಾಸಿ ಆಳುವಾಗ ರಾವಣರಸಯ್ಯ ಸಾತ್ತಳಿಗೆ–70 ಆಳುತ್ತಿದ್ದಾಗ ಪೇರ್ಗಡೆ ಚಾವುಂಡರಾಯನು ಮೂಲ ಸ್ಥಾನದ ಕಲಿದೇವರ ಗುಡಿ ನಿರ್ಮಿಸಲು ಊರ ಹಲವಾರು ಗೌಡರು ಈ ದೇವರಿಗೆ ಭೂದಾನ ಮಾಡಿದ ಅಂಶವನ್ನು ತಿಳಿಸುತ್ತದೆ. ಈ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನದ ಬಳಿ ಇದ್ದ ಶಿಡೇನೂರ ಗ್ರಾಮ ಈ ಹಿಂದೆ ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರ ಒಡೆತನಕ್ಕೆ ಒಳಪಟ್ಟಿತ್ತು. ಮಹಾ ಮಾರಿ ಕಾಯಿಲೆಯಿಂದ ಸಾವು ನೋವು ಸಂಭವಿಸಿದ ಬಳಿಕ ಅದನ್ನು ಹಳೆ ಶಿಡೇನೂರ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಹೀಗಾಗಿ ಪ್ರಾಚೀನ ದೇವಸ್ಥಾನ ಊರ ಹೊರಗಿದೆ ಎನ್ನಲಾಗಿದೆ.

ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹೊಂಡದ ಅಭಿವೃದ್ಧಿ ಆಗಬೇಕಾಗಿದೆ

ವೀರಭದ್ರೇಶ್ವರ ದೇವಸ್ಥಾನ ಪುನರ್ನಿಮಾಣ

ಪ್ರಾಚೀನ ವೀರಭದ್ರೇಶ್ವರ ದೇವಸ್ಥಾನವನ್ನು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ₹ 1 ಕೋಟಿ ವೆಚ್ಚದಲ್ಲಿ ಪುನರ್‌ ನಿರ್ಮಾಣ ಮಾಡಿದ್ದು ಸುತ್ತಲೂ ತಂತಿ ಬೇಲಿ ನಿರ್ಮಿಸಿ ಗೇಟ್‌ ಅಳವಡಿಸಲಾಗಿದೆ. ಪಕ್ಕದ ಚಿಕ್ಕ ಹೊಂಡ ಒಣಗಿ ಹೋಗಿದ್ದು ಸುತ್ತಲೂ ಪಿಚ್ಚಿಂಗ್‌ ಮಾಡಿ ನೀರು ಸಂಗ್ರಹ ಮಾಡಬೇಕಿದೆ. ಹೂ–ಗಿಡಗಳನ್ನು ಬೆಳೆಸಿ ಉದ್ಯಾನವಾಗಿ ಅಭಿವೃದ್ಧಿಪಡಿಸಬೇಕಾಗಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪರಮೇಶಗೌಡ ತೆವರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.