ಮುಂಡಗೋಡ ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯ ತುಂಬಿ ಹರಿಯುತ್ತಿರುವ ದೃಶ್ಯ
ಹಾನಗಲ್: ಧರ್ಮಾ ನದಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಮಳಗಿ ಸಮೀಪದ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಮೂಲಕ 210 ಕ್ಯೂಸೆಕ್ ನೀರು ಹರಿಯುತ್ತಿದೆ.
8650 ಕ್ಯೂಸೆಕ್ (29 ಅಡಿ) ಸಾಮರ್ಥ್ಯದ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಜಲಾಶಯದ ಹೆಚ್ಚುವರಿ ನೀರು ಕೋಡಿ ಮೂಲಕ ಹರಿಯುವ ರಮಣೀಯ ದೃಶ್ಯ ಜನರನ್ನು ಆಕರ್ಷಿಸುತ್ತಿದೆ.
ಧರ್ಮಾ ಜಲಾಶಯ ತುಂಬಿ ಹರಿದರೆ ಹಾನಗಲ್ ಕೃಷಿ ಕ್ಷೇತ್ರಕ್ಕೆ ಸಮೃದ್ಧಿಯ ಸಂಕೇತ. ನಾಟಿ ಭತ್ತ ಕೃಷಿಯ ಕ್ಷೇತ್ರ ಹೆಚ್ಚಿಸುವ ಉದ್ದೇಶದಿಂದ ನಿರ್ಮಾಣಗೊಂಡ ಧರ್ಮಾ ಜಲಾಶಯ ತಾಲ್ಲೂಕಿನ 7692 ಹೆಕ್ಟರ್ ಕೃಷಿ ಭೂಮಿಯ ನೀರಾವರಿ ಆಸರೆಯಾಗಿದೆ. ಸದ್ಯ ತಾಲ್ಲೂಕಿನಲ್ಲಿ ಭತ್ತ ನಾಟಿ ಮಾಡುವ ಸಮಯ ಇದೇ ವೇಳೆಗೆ ಜಲಾಶಯದ ಹೆಚ್ಚುವರಿ ನೀರು ಧರ್ಮಾ ಕಾಲುವೆಗೆ ಸೇರಿ ನೀರು ಹರಿದು ಬರುತ್ತಿರುವುದು ಅನುಕೂಲವಾಗುತ್ತಿದೆ ಎಂದು ಧರ್ಮಾ ಕಾಲುವೆ ಭಾಗದ ಭತ್ತ ಬೆಳೆಯುವ ರೈತರು ಸಂತಸ ವ್ಯಕ್ತ ಪಡಿಸಿದ್ದಾರೆ.
ಶ್ರೀಂಗೇರಿ ಪಿಕಪ್: ಜಲಾಶಯದಿಂದ ಕೋಡಿ ಬೀಳುವ ಹೆಚ್ಚಿನ ನೀರು ಧರ್ಮಾ ನದಿ ಮೂಲಕ 8 ಕಿ.ಮೀ ಅಂತರದ ಶ್ರೀಂಗೇರಿ ಪಿಕಪ್ ಬಳಸಿಕೊಂಡು ಧರ್ಮಾ ಕಾಲುವೆ ಸೇರುತ್ತದೆ. 30 ಕಿ.ಮೀ ಉದ್ದದ ಮುಖ್ಯ ಕಾಲುವೆ ಮತ್ತು ಒಟ್ಟು 35 ಕಿ.ಮೀ ವ್ಯಾಪ್ತಿಯ 6 ಉಪ ಕಾಲುವೆಗಳ ಮೂಲಕ ನೀರು ಹರಿಯುತ್ತದೆ.
ಕಾಲುವೆ ವ್ಯಾಪ್ತಿಯ 96 ಕೆರೆಗಳನ್ನು ತುಂಬಿಸುವುದಲ್ಲದೆ ಸಮೀಪದ ತೋಟ, ಕೃಷಿ ಜಮೀನುಗಳಿಗೆ ಈ ಕಾಲುವೆ ನೀರುಣಿಸುತ್ತದೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಕಾರಣವಾಗುತ್ತದೆ. ಜಲಾಶಯ ಭರ್ತಿಯಾಗುತ್ತಿದ್ದಂತೆ ಕಾಲುವೆಯಲ್ಲಿ ನೀರಿನ ಹರಿವು ಉಂಟಾಗಿದೆ. ಇದೇ ರೀತಿ ಕೋಡಿ ನೀರು ಹರಿಯುತ್ತಿದ್ದರೆ, ಕಾಲುವೆಯ ಕೊನೆಯ ಭಾಗದ ಜಕ್ಕನಾಯಕನಕೊಪ್ಪ, ನೆಲ್ಲಿಬೀಡ, ಶಂಕ್ರಿಕೊಪ್ಪ, ಆಡೂರ, ನರೇಗಲ್, ಸಿಂಗಾಪೂರ ಗ್ರಾಮಗಳ ವ್ಯಾಪ್ತಿಯ ಸುಮಾರು 50 ಕೆರೆಗಳು ಕೂಡ ತುಂಬಿಕೊಳ್ಳಲಿವೆ ಎಂದು ಧರ್ಮಾ ಪ್ರಾಜೆಕ್ಟ್ ಎಇಇ ಭಕ್ತಪ್ರಹ್ಲಾದ ಶೆಟ್ಟಿ ತಿಳಿಸಿದ್ದಾರೆ.
9700 ಹೆಕ್ಟೇರ್ ಭತ್ತ ನಾಟಿ
ತಾಲ್ಲೂಕಿನಲ್ಲಿ ಜುಲೈ ಮೊದಲ ವಾರದಿಂದ ಭತ್ತ ನಾಟಿ ಕಾರ್ಯ ಆರಂಭಗೊಂಡು ಆಗಸ್ಟ್ ತನಕ ನಡೆಯುತ್ತದೆ. ಒಟ್ಟು 9700 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ನಡೆಯುತ್ತದೆ. ಇದರಲ್ಲಿ ಧರ್ಮಾ ಕಾಲುವೆ ವ್ಯಾಪ್ತಿಯ 6100 ಹೆಕ್ಟರ್ ಭೂಮಿಯಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಇನ್ನುಳಿದ ಕ್ಷೇತ್ರದಲ್ಲಿ ವರದಾ ನದಿ ದಂಡೆ ಮತ್ತು ಇತರ ಜಲಮೂಲಗಳನ್ನು ಆಶ್ರಯಿಸಿಕೊಂಡು ಭತ್ತ ನಾಟಿ ಮಾಡುತ್ತಾರೆ ಎಂದು ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.