ADVERTISEMENT

ಹಾವೇರಿ ಜಿಲ್ಲೆಯಲ್ಲಿ 2.93 ಲಕ್ಷ ರಾಷ್ಟ್ರಧ್ವಜ ವಿತರಣೆ

ಪ್ರತಿ ಮನೆಗಳ ಮೇಲೂ ತಿರಂಗಾ ಹಾರಿಸಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 14:35 IST
Last Updated 12 ಆಗಸ್ಟ್ 2022, 14:35 IST
ಹಾವೇರಿಯ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಜಿಲ್ಲೆಗೆ ಪೂರೈಕೆಯಾದ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇದ್ದಾರೆ  
ಹಾವೇರಿಯ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಜಿಲ್ಲೆಗೆ ಪೂರೈಕೆಯಾದ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇದ್ದಾರೆ     

ಹಾವೇರಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಆಗಸ್ಟ್ 13ರ ಶನಿವಾರದಿಂದ ಆಗಸ್ಟ್ 15ರ ಸೋಮವಾರದವರೆಗೆ ಮೂರು ದಿನ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪ್ರತಿ ಮನೆ ಹಾಗೂ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 3.67 ಲಕ್ಷ ಮನೆಗಳಿದ್ದು, ಈ ಪೈಕಿ ಶೇ 80ರಷ್ಟು ಅಂದರೆ 2.93 ಲಕ್ಷ ಮನೆಗಳ ಮೇಲೆ ಧ್ವಜ ಹಾರಿಸುವ ಗುರಿ ಹೊಂದಲಾಗಿದೆ. ಈ ಕುರಿತಂತೆ ಧ್ವಜಗಳನ್ನು ಸಿದ್ಧಪಡಿಸುವಿಕೆ, ವಿತರಣೆಗೆ ಅಧಿಕಾರಿಗಳನ್ನು ನಿಯೋಜಿಸಿ ಹಂಚಿಕೆ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಧ್ವಜಕ್ಕೆ ₹22 ದರ ನಿಗದಿಪಡಿಸಲಾಗಿದೆ ಎಂದರು.

ಜಿಲ್ಲೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1.23 ಲಕ್ಷ ಧ್ವಜಗಳು ಪೂರೈಕೆಯಾಗಿವೆ. ಸ್ವ–ಸಹಾಯ ಸಂಘಗಳಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಲಕ್ಷ ಧ್ವಜಗಳನ್ನು ತಯಾರಿಸಲಾಗಿದೆ. ಇತರ ಸಂಘ-ಸಂಸ್ಥೆಗಳಿಂದ 40 ಸಾವಿರ, ಅಂಚೆ ಇಲಾಖೆಯಿಂದ 30 ಸಾವಿರ, ಶಾಲಾ-ಕಾಲೇಜು ವಿವಿಧ ಇಲಾಖೆಯಿಂದ 1,550 ಧ್ವಜಗಳು ಸೇರಿದಂತೆ 2,94,550 ಧ್ವಜಗಳು ವಿತರಣೆಗೆ ಕ್ರಮವಹಿಸಲಾಗಿದೆ ಎಂದರು.

ADVERTISEMENT

ಆಗಸ್ಟ್ 13ರಂದು ಪುರಸಿದ್ಧೇಶ್ವರ ದೇವಾಲಯದಿಂದ ಗಾಂಧಿ ವೃತ್ತದವರೆಗೆ, ಆಗಸ್ಟ್ 14ರಂದು ಜಿ.ಎಚ್.ಕಾಲೇಜಿನಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ, ಆಗಸ್ಟ್ 15ರಂದು ಮೈಲಾರ ಮಹದೇವ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ಲಾಸ್ಟಿಕ್ ಧ್ವಜ ನಿಷೇಧ:

‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಅಂಗವಾಗಿ ಖಾದಿ ಅಥವಾ ಪಾಲಿಸ್ಟರ್ ಧ್ವಜಗಳನ್ನು ಮಾತ್ರ ಬಳಸಬೇಕು. ಪ್ಲಾಸ್ಟಿಕ್ ಧ್ವಜಗಳನ್ನು ಬಳಸುವಂತಿಲ್ಲ. ವಾಹನಗಳ ಮೇಲೆ ಧ್ವಜ ಹಾರಿಸುವಂತಿಲ್ಲ ಹಾಗೂ ಮನುಷ್ಯನ ದೇಹದ ಕೆಳಭಾಗದಲ್ಲಿ ರಾಷ್ಟ್ರಧ್ವಜ, ಚಿನ್ಹೆಗಳನ್ನು ಬಳಸುವಂತಿಲ್ಲ. ಮನೆ– ಮನೆ ಧ್ವಜಾರೋಹಣ ನಂತರ ಧ್ವಜವನ್ನು ಇಳಿಸಿ, ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ರಸ್ತೆಯಲ್ಲಿ, ಚರಂಡಿ, ಕಸದ ತೊಟ್ಟಿಯಲ್ಲಿ ಎನಿಸುವಂತಿಲ್ಲ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಶಾಲೆ, ಕಾಲೇಜು, ಸರ್ಕಾರಿ ಕಚೇರಿ ಕಟ್ಟಡ, ಅಂಗನವಾಡಿ, ಪಂಚಾಯಿತಿ ಕಟ್ಟಡಗಳಲ್ಲಿ ಮೂರು ದಿನ ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡುವುದು, ಸಂಜೆ ಸೂರ್ಯಾಸ್ತಕ್ಕೆ ಮುನ್ನ ಧ್ವಜ ಇಳಿಸುವುದು ಕಡ್ಡಾಯ. ಸಾರ್ವಜನಿಕರು ಮನೆಗಳ ಮೇಲೆ ಹಾರಿಸುವ ಧ್ವಜವನ್ನು ಪ್ರತಿನಿತ್ಯ ಸಂಜೆ ಧ್ವಜ ಇಳಿಸುವ ಅಗತ್ಯವಿಲ್ಲ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ ಗಿರೀಶ ಸ್ವಾದಿ ಇದ್ದರು.

ದೇವರಾಜ ಅರಸು ಜಯಂತಿ:ಪ್ರಶಸ್ತಿ ನೀಡಲು ಸಮಿತಿ ರಚನೆ

ಹಾವೇರಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆಯನ್ನು ಆಗಸ್ಟ್ 20 ರಿಂದ 22ರವರೆಗೆ ಮೂರು ದಿನಗಳ ಕಾಲ ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಗುವುದು. ಹಿಂದುಳಿದ ವರ್ಗಗದ ಸಮಾಜದ ಏಳಿಗೆಗಾಗಿ ಶ್ರಮಿಸಿದ ಒಬ್ಬರನ್ನು ಆಯ್ಕೆ ಮಾಡಿ ₹50 ಸಾವಿರ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದರು.

ಪ್ರಶಸ್ತಿ ನೀಡುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ₹50 ಸಾವಿರ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅರ್ಜಿಗಳನ್ನು ಹಿಂದುಳಿದ ವರ್ಗಗಳ ಇಲಾಖೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ಅರ್ಜಿ ಹೊರತಾಗಿಯೂ ಸಮಿತಿಯು ಈ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ಕೊಡಬಹುದು ಎಂದರು.

ವಸ್ತು ಪ್ರದರ್ಶನ ಮಳಿಗೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡಿ.ದೇವರಾಜ ಅರಸು ಅವರ ಹಾಗೂ ಎಲ್.ಜಿ.ಹಾವನೂರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲು ಉದ್ದೇಶಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.