ಹಾವೇರಿ: ಉತ್ತರ ಕರ್ನಾಟಕದ ಸಾಂಪ್ರದಾಯಕ ಆಹಾರವಾದ ರೊಟ್ಟಿ ತಯಾರಿಗೆ ಬೇಕಿರುವ ಜೋಳದ ದಾಸ್ತಾನು ಖಾಲಿಯಾಗುತ್ತಿದ್ದು, ಇದೊಂದು ತಿಂಗಳು ಮಾತ್ರ ಜಿಲ್ಲೆಯಲ್ಲಿ ಜೋಳ ವಿತರಣೆಯಾಗಲಿದೆ. ಮುಂದಿನ ತಿಂಗಳಿನಿಂದ ಜೋಳದ ಬದಲು ಅಕ್ಕಿ ವಿತರಣೆ ಯಥಾಪ್ರಕಾರ ಮುಂದುವರಿಯಲಿದೆ.
ಜಿಲ್ಲೆಯಲ್ಲಿರುವ ಪಡಿತರ ಚೀಟಿದಾರರಿಗೆ ಹಲವು ತಿಂಗಳಿನಿಂದ ಅಕ್ಕಿಯ ಜೊತೆಗೆ ಜೋಳವನ್ನು ವಿತರಣೆ ಮಾಡಲಾಗುತ್ತಿದೆ. ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ್ದ ಜೋಳದ ದಾಸ್ತಾನು ಖಾಲಿ ಆಗುತ್ತಿರುವುದರಿಂದ, ಫೆಬ್ರುವರಿಯಿಂದ ಪಡಿತರ ಚೀಟಿದಾರರಿಗೆ ಜೋಳ ಲಭ್ಯವಾಗುವುದಿಲ್ಲವೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಪಡಿತರ ವಿತರಣೆ ಸಂದರ್ಭದಲ್ಲಿ ಕಳಪೆ ಜೋಳ ಪೂರೈಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಜನರು, ಗುಣಮಟ್ಟದ ಜೋಳ ನೀಡುವಂತೆ ಆಗ್ರಹಿಸಿದ್ದರು. ಆದರೆ, ಸರ್ಕಾರದ ಗೋದಾಮುಗಳಿಂದ ಸರಬರಾಜು ಆಗಿದ್ದ ಜೋಳದಲ್ಲಿಯೇ ನುಶಿ ಕಂಡುಬಂದಿತ್ತು. ಈಗ, ಜೋಳದ ದಾಸ್ತಾನು ಸಂಪೂರ್ಣ ಖಾಲಿ ಆಗಿರುವುದರಿಂದ ಅಕ್ಕಿ ನೀಡುವುದು ಅನಿವಾರ್ಯವಾಗಿದೆ.
‘ಪಡಿತರ ಚೀಟಿದಾರರ ಸಂಖ್ಯೆಗೆ ತಕ್ಕಷ್ಟು ಜೋಳ ಲಭ್ಯವಿಲ್ಲ’ ಎಂಬ ಕಾರಣಕ್ಕೆ ಧಾರವಾಡ ಜಿಲ್ಲೆಯಲ್ಲಿ ಜೋಳ ವಿತರಣೆಯನ್ನು ಜನವರಿಯಿಂದಲೇ ಬಂದ್ ಮಾಡಲಾಗಿದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಜನವರಿ ತಿಂಗಳ ಬೇಡಿಕೆಗೆ ತಕ್ಕಷ್ಟು ಜೋಳ ಪೂರೈಕೆ ಆಗಿದೆ. ಹೀಗಾಗಿ, ಜನವರಿ ತಿಂಗಳು ಮಾತ್ರ ಹಾವೇರಿ ಜಿಲ್ಲೆಯಲ್ಲಿ ಜೋಳ ವಿತರಣೆ ಆಗಲಿದೆ.
‘ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಈ ಹಿಂದೆ ಅಕ್ಕಿಯನ್ನಷ್ಟೇ ನೀಡಲಾಗುತ್ತಿತ್ತು. ಜನರ ಒತ್ತಾಯದ ಮೇರೆಗೆ ಜೋಳ, ರಾಗಿ ಹಾಗೂ ಇತರೆ ಸ್ಥಳೀಯ ಉತ್ಪನ್ನಗಳನ್ನು ನೀಡಲು ತೀರ್ಮಾನಿಸಲಾಗಿದೆ. ಅದರಂತೆ, ಹಾವೇರಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ 3 ಕೆ.ಜಿ ಅಕ್ಕಿ ಹಾಗೂ 2 ಕೆ.ಜಿ. ಜೋಳ ವಿತರಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಜೋಳದ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸಬಾರದೆಂದು, ಸರ್ಕಾರವೇ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಮಾಡಿತ್ತು. ಬಳ್ಳಾರಿ, ಕಂಪ್ಲಿ ಹಾಗೂ ಇತರೆಡೆ ಗೋದಾಮುಗಳಲ್ಲಿ ಜೋಳ ದಾಸ್ತಾನು ಮಾಡಲಾಗಿತ್ತು. ಅಲ್ಲಿಂದಲೇ ಹಾವೇರಿ ಜಿಲ್ಲೆಗೆ ಜೋಳ ಪೂರೈಕೆ ಆಗುತ್ತಿತ್ತು. ಈಗ, ಗೋದಾಮಿನಲ್ಲಿಯೇ ಜೋಳ ಖಾಲಿ ಆಗಿದೆ. ಹೀಗಾಗಿ, ಫೆಬ್ರುವರಿ ತಿಂಗಳಿನಿಂದ ಪಡಿತರ ಚೀಟಿದಾರರಿಗೆ ಅಕ್ಕಿ ಮಾತ್ರ ವಿತರಿಸಲಾಗುವುದು’ ಎಂದು ತಿಳಿಸಿದರು.
ಕೆಲ ತಿಂಗಳು ಬಿಟ್ಟು ಪುನಃ ಜೋಳ: ‘ಜೋಳದ ದಾಸ್ತಾನು ಖಾಲಿ ಆಗಿದ್ದರಿಂದ, ಸದ್ಯಕ್ಕೆ ವಿತರಣೆ ಬಂದ್ ಮಾಡಲಾಗುವುದು. ಹಿಂಗಾರು ಹಂಗಾಮು ಮುಗಿದ ನಂತರ ಪುನಃ ಜೋಳದ ಖರೀದಿ ಆರಂಭವಾಗಲಿದೆ. ಬಳಿಕವೇ ಜೋಳ ವಿತರಣೆ ಶುರುವಾಗಲಿದೆ’ ಎಂದು ಅಧಿಕಾರಿ ಹೇಳಿದರು.
2 ಕೆ.ಜಿ. ವಿತರಣೆಯಗುತ್ತಿದ್ದ ಜೋಳ ಮುಂದಿನ ತಿಂಗಳಿನಿಂದ 5 ಕೆ.ಜಿ ಅಕ್ಕಿ ಕೆಲ ತಿಂಗಳ ನಂತರ ಪುನಃ ಜೋಳ ವಿತರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.