ADVERTISEMENT

ರಾಣೆಬೆನ್ನೂರು|ಆಸ್ಪತ್ರೆಗೆ ನುಗ್ಗಿ ವೈದ್ಯನ ಮೇಲೆ ಹಲ್ಲೆ: ದೂರು ಪ್ರತಿದೂರು ದಾಖಲು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 14:25 IST
Last Updated 22 ಸೆಪ್ಟೆಂಬರ್ 2025, 14:25 IST
   

ರಾಣೆಬೆನ್ನೂರು: ಇಲ್ಲಿಯ ‘ಗುರು ಕ್ಲಿನಿಕ್‌’ನಲ್ಲಿ ಸೆ. 20ರಂದು ರಾತ್ರಿ ಗಲಾಟೆ ನಡೆದಿದ್ದು, ಈ ಸಂಬಂಧ ರಾಣೆಬೆನ್ನೂರು ಶಹರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

‘ರಾಣೆಬೆನ್ನೂರಿನ ಮಕ್ಸೂದ್ ಮೊಮೀನ್, ಸೈಯದ್ ಅಹ್ಮದ್ ಮಕಾಂದಾರ, ಸೈಯದ್ ಹೊನ್ನಾಳಿ, ಜಾಫರ್ ಸಾದಿಕ್ಕಿಲ್ಲೇದಾರ, ಅಬ್ದುಲ್‌ ಮುನಾಫ್ ಮೊಮೀನ್ ಸೇರಿದಂತೆ ಸುಮಾರು 30 ಮಂದಿ ಕ್ಲಿನಿಕ್‌ಗೆ ನುಗ್ಗಿ ಗಲಾಟೆ ಮಾಡಿ ನನಗೆ ಹೊಡೆದಿದ್ದಾರೆ. ನನ್ನ ಎಲೆಕ್ಟ್ರಿಕ್‌ ಬೈಕ್‌ ಸಹ ಜಖಂಗೊಳಿಸಿದ್ದಾರೆ’ ಎಂದು ಆರೋಪಿಸಿ ವೈದ್ಯ ಡಾ. ಗುರುಮೂರ್ತಯ್ಯ ಗಂಗಾಧರಯ್ಯ ರಾಚೋಟಿಮಠ ಎಂಬುವವರು ದೂರು ನೀಡಿದ್ದಾರೆ.

ಪ್ರತಿದೂರು ನೀಡಿರುವ ಮಹ್ಮದ ಜಾಫರ್ ಖಲೀಲ ಅಹ್ಮದ್ ಮೊಮೀನ್, ‘ನನ್ನ ಪತ್ನಿಯ ಅಕ್ಕನ ಮಗನಿಗೆ ಆರೋಗ್ಯ ಸಮಸ್ಯೆಯಿತ್ತು. ಚಿಕಿತ್ಸೆಗೆಂದು ಆತನನ್ನು ಕೋಟೆ ಓಣಿಯ ಖಿಲ್ಲಾ ಮಸೀದಿ ಬಳಿಯ ಗುರು ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದೆ. ವೈದ್ಯ ಡಾ. ಗುರುಮೂರ್ತಯ್ಯ, ‘ನೀವು 10–20 ಮಕ್ಕಳನ್ನು ಮಾಡಿಕೊಳ್ಳುತ್ತೀರಾ’ ಎಂಬುದಾಗಿ ಹೇಳಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಇಬ್ಬರಿಂದಲೂ ದೂರು ಪಡೆದಿರುವ ಪೊಲೀಸರು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಘಟನೆ ವಿವರ: ‘ಮಹ್ಮದ ಜಾಫರ್ ಮೊಮೀನ್ ಅವರು ಅಕ್ಕನ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚು ಮಕ್ಕಳು ಇರುವ ಬಗ್ಗೆ ಮಾತನಾಡಿದ್ದ ವೈದ್ಯ, ಜನಸಂಖ್ಯೆ ನಿಯಂತ್ರಣದ ಬಗ್ಗೆ ಚರ್ಚಿಸಿದ್ದರು. ಕುಟುಂಬ ಯೋಜನೆ ಬಗ್ಗೆಯೂ ಮಾಹಿತಿ ನೀಡಿದ್ದರು. ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿತ್ತು. ಆಗ ಜಾಫರ್, ‘ಇಸ್ಲಾಂ ಧರ್ಮದ ಬಗ್ಗೆ ಅಗೌರವವಾಗಿ ಮಾತನಾಡುತ್ತೀರಾ?’ ಎಂಬುದಾಗಿ ಜಗಳ ತೆಗೆದಿದ್ದರು’ ಎಂದು ಪೊಲೀಸರು ಹೇಳಿದರು.

‘ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಸುಮಾರು 30 ಮಂದಿ ಸ್ಥಳಕ್ಕೆ ಬಂದಿದ್ದರು. ಕ್ಲಿನಿಕ್‌ಗೆ ನುಗ್ಗಿ ಗಲಾಟೆ ಮಾಡಿದರು. ವೈದ್ಯ ಗುರುಮೂರ್ತಯ್ಯ ಮೇಲೂ ಹಲ್ಲೆ ಮಾಡಿದರು. ಕ್ಲಿನಿಕ್‌ ಹೊರಗಿದ್ದ ಬೈಕ್‌ ಸಹ ಜಖಂಗೊಳಿಸಿದರು. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ವೈದ್ಯರನ್ನು ರಕ್ಷಿಸಿ ಕರೆತರಲಾಯಿತು. ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.