ADVERTISEMENT

ದಾಖಲೆ ತಿದ್ದುಪಡಿ: ₹3.14 ಕೋಟಿ ವಂಚನೆ

ನಿವೃತ್ತ ಪ್ರಾಂಶುಪಾಲ ಸೇರಿದಂತೆ 6 ಮಂದಿ ವಿರುದ್ಧ ಎಫ್‌ಐಆರ್‌: ಅಧಿಕಾರ ದುರ್ಬಳಕೆಯ ಆರೋಪ

ಸಿದ್ದು ಆರ್.ಜಿ.ಹಳ್ಳಿ
Published 21 ಜೂನ್ 2022, 4:59 IST
Last Updated 21 ಜೂನ್ 2022, 4:59 IST
ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಹೊರನೋಟ   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಹೊರನೋಟ   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಹಾವೇರಿ:ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸರ್ಕಾರಿ ನೌಕರರನ್ನು ಅಮಾನತು ಮಾಡಿದ ಬೆನ್ನಲ್ಲೇ 6 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದು ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

15 ವರ್ಷಗಳ ಅವಧಿಯಲ್ಲಿ (2007ರಿಂದ 2022)ಅಧಿಕಾರ ದುರ್ಬಳಕೆ ಮತ್ತು ಕಾಲೇಜಿನ ದಾಖಲೆಗಳನ್ನು ತಿದ್ದುಪಡಿ ಮಾಡುವ ಮೂಲಕ ಒಟ್ಟು ₹3.14 ಕೋಟಿಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪದಡಿನಿವೃತ್ತ ಪ್ರಾಂಶುಪಾಲ ಡಾ.ಕೆ.ಬಿ. ಪ್ರಕಾಶ್‌ ಹಾಗೂ ಐವರು ಸರ್ಕಾರಿ ನೌಕರರ ವಿರುದ್ಧ ನಗರದ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಆಂತರಿಕ ತನಿಖೆ:

ADVERTISEMENT

‘ನಾನು ಪ್ರಾಚಾರ್ಯರ ಹುದ್ದೆಯ ಪ್ರಭಾರವನ್ನು ತೆಗೆದುಕೊಂಡ ನಂತರ ನಮ್ಮ ಕಾಲೇಜಿನ ಲೆಕ್ಕ ಪತ್ರಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದಾಗ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ವ್ಯತ್ಯಾಸ ಇರುವುದು ಕಂಡು ಬಂದಿತು. ನಂತರ ‘ಆಂತರಿಕ ತನಿಖಾ ಸಮಿತಿ’ ರಚಿಸಿ ಪರಿಶೀಲನೆ ನಡೆಸಿದಾಗ ಹಣ ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದಿದೆ’ ಎಂದು ಪ್ರಾಂಶುಪಾಲ ಡಾ.ಜಗದೀಶ ಕೋರಿ ದೂರಿನಲ್ಲಿ ತಿಳಿಸಿದ್ದಾರೆ.

₹77.56 ಲಕ್ಷ ದುರುಪಯೋಗ:

2010ರಿಂದ 2022ರವರೆಗೆ ಪ್ರಾಂಶುಪಾಲರಾಗಿದ್ದ ಡಾ.ಕೆ.ಬಿ.ಪ್ರಕಾಶ್‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ಕಚೇರಿ ಸಿಬ್ಬಂದಿಯೊಂದಿಗೆ ಮಿಲಾಪಿಯಾಗಿ ಕಾಲೇಜಿನ ಹಣ ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ನಗದು ವಿಭಾಗ ಮತ್ತು ಉಗ್ರಾಣ ಮತ್ತು ಖರೀದಿ ವಿಭಾಗದ ಕಚೇರಿ ಅಧೀಕ್ಷಕರಾಗಿ ಕೆಲಸ ಮಾಡಿರುವ ಎಚ್‌.ವಾಸುದೇವ ಅವರು ಸರ್ಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿ, ಕಚೇರಿ ಸಿಬ್ಬಂದಿಯೊಂದಿಗೆ ಸೇರಿಕೊಂಡು ₹77.56 ಲಕ್ಷ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಬ್ಬಂದಿಯೊಂದಿಗೆ ಮಿಲಾಪಿ:

ಪರೀಕ್ಷಾ ವಿಭಾಗ ಮತ್ತು ನಗದು ವಿಭಾಗದಲ್ಲಿ ಕೆಲಸ ಮಾಡಿರುವ ಕಚೇರಿ ಅಧೀಕ್ಷಕ ಗುರಪ್ಪ ಸುಂಕದವರ ಅವರು ಸರ್ಕಾರಿ ದಾಖಲೆ ತಿದ್ದುಪಡಿ ಮಾಡಿ, ಕಚೇರಿ ಸಿಬ್ಬಂದಿಯೊಂದಿಗೆ ಸೇರಿಕೊಂಡು ₹74.96 ಲಕ್ಷ ದುರುಪಯೋಗ ಪಡಿಸಿಕೊಂಡಿದ್ದಾರೆ. ಪ್ರವೇಶ ವಿಭಾಗದ ನಿರ್ವಾಹಕರಾಗಿ ಕೆಲಸ ಮಾಡಿರುವ ಎಫ್‌ಡಿಎ ಜಯಮ್ಮ ಕಾಚೇರ ಅವರು ದಾಖಲೆ ತಿದ್ದುಪಡಿ ಮಾಡಿ, ಗುರಪ್ಪ ಸುಂಕದ ಅವರೊಂದಿಗೆ ಮಿಲಾಪಿಯಾಗಿ ₹1.42 ಕೋಟಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ಲೆಕ್ಕಪತ್ರಗಳ ಅಸಮರ್ಪಕ ನಿರ್ವಹಣೆ:

2016ರಿಂದ 2022ರವರೆಗೆ ಪರೀಕ್ಷಾ ವಿಭಾಗದ ನಿರ್ವಾಹಕರಾಗಿ ಕೆಲಸ ಮಾಡುತ್ತಾ ಬಂದಿರುವ ಎಸ್‌ಡಿಎ ಅನಿಲಕುಮಾರ ಕಟಿಗಾರ ಅವರು ಗುರಪ್ಪ ಸುಂಕದ ಅವರೊಂದಿಗೆ ಮಿಲಾಪಿಯಾಗಿ ₹9 ಲಕ್ಷ ಹಣದ ಬಗ್ಗೆ ಸರಿಯಾಗಿ ಲೆಕ್ಕಪತ್ರಗಳನ್ನು ನಿರ್ವಹಿಸದೇ ದುರುಪಯೋಗಪಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

***

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದೇವೆ. ದಾಖಲೆ ಪರಿಶೀಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ
– ಸಂತೋಷ ಪಾಟೀಲ, ಇನ್‌ಸ್ಪೆಕ್ಟರ್‌, ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.