ADVERTISEMENT

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ಸದೃಢ ಜೀವನಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ: ಶಾಸಕ ನೆಹರು ಓಲೇಕಾರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 14:24 IST
Last Updated 28 ಜನವರಿ 2023, 14:24 IST
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಹಯೋಗದಲ್ಲಿ ಶನಿವಾರ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಓಟ ಸ್ಪರ್ಧೆಯ ದೃಶ್ಯ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಹಯೋಗದಲ್ಲಿ ಶನಿವಾರ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಓಟ ಸ್ಪರ್ಧೆಯ ದೃಶ್ಯ   

ಹಾವೇರಿ: ‘ಮನುಷ್ಯನಿಗೆ ಜೀವನದಲ್ಲಿ ಸಂಪತ್ತು ಗಳಿಸುವುದು ಮುಖ್ಯವಲ್ಲ, ಆರೋಗ್ಯ ಕಾಪಾಡಿಕೊಳ್ಳುವದು ಬಹುಮುಖ್ಯವಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೌಕರರಿಗಾಗಿ ಕ್ರೀಡಾಕೂಟಗಳನ್ನು ಏರ್ಪಾಡು ಮಾಡಿದೆ. ಕ್ರೀಡೆಯಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಹಯೋಗದಲ್ಲಿ ಶನಿವಾರ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ನೌಕರ ಬಳಗವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಆಯ್ಕೆಯಾಗುವದರ ಮೂಲಕ ಹಾವೇರಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವಂತೆ ಹಾರೈಸಿದರು.

ADVERTISEMENT

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಮಾಡುತ್ತಿರುವ ಸರ್ಕಾರಿ ನೌಕರರು ಆರೋಗ್ಯವಂತರಾಗಿರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿದೆ, ಸರ್ಕಾರ ಆಯೋಜನೆ ಮಾಡಿರುವ ಕ್ರೀಡಾ ಚಟುವಟಿಕೆಗಳಲ್ಲಿ ಕ್ರೀಯಾಶಿಲರಾಗಿ ಭಾಗವಹಿಸಿ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಮೃತಗೌಡ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ನೌಕರರ ವರ್ಷಪೂರ್ತಿ ಕೆಲಸದ ನಡುವೆ ಮನೋಲ್ಲಾಸಕ್ಕಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಜಿಲ್ಲಾ ಘಟಕದಿಂದ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುವುದು, ಇಲ್ಲಿಂದ ರಾಜ್ಯಮಟ್ಟದಲ್ಲಿ ಆಯ್ಕೆಯಾಗಲು ಪ್ರಯತ್ನಿಸಿ ಎಂದರು.

ಪುರುಷರಿಗೆ ಪುಟ್‍ಬಾಲ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್‌, ಬ್ಯಾಸ್ಕೆಟ್‌ಬಾಲ್‌ ಇತರೆ ಗುಂಪು ಕ್ರೀಡೆಗಳು ಹಾಗೂ ವೈಯಕ್ತಿಕ ಕ್ರೀಡೆಗಳಾದ ಚೆಸ್, ಓಟ, ಈಜು, ಗುಂಡು ಎಸೆತ ಸೇರಿದಂತೆ ಇತರ ಕ್ರೀಡೆಗಳು ಹಾಗೂ ಮಹಿಳೆಯರಿಗೆ ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್ ಇತರೆ ಗುಂಪು ಕ್ರೀಡೆಗಳ ಜೊತೆಗೆ ವೈಯಕ್ತಿಕ ಕ್ರೀಡೆಗಳಾದ ಚೆಸ್, ರನ್ನಿಂಗ್, ಈಜು, ಗುಂಡು ಎಸೆತ ಸೇರಿದಂತೆ ಇತರೆ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಿಂದ ಒಟ್ಟು 1864 ನೌಕರರು ಕ್ರೀಡಾಕೂಟಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಕಾರ್ಯದರ್ಶಿ ಎಂ.ಎಂ.ಎಣ್ಣಿ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಿರೀಶ್ ಸ್ವಾದಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ.ಬಿ.ಎಚ್, ಸಿಪಿಐ ಸುರೇಶ ಸಗರಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಚಂದ್ರಣ್ಣ ಬ್ಯಾಡಗಿ, ಕ್ರೀಡಾ ಕಾರ್ಯದರ್ಶಿ ಚಂದ್ರಕಾಂತ ಹೊಟ್ಟಿಗೌಡರ, ನವೀನ ಬೆನ್ನೂರ, ಸಾಂಸ್ಕೃತಿಕ ಕಾರ್ಯದರ್ಶಿ ಎಫ್.ಬಿ. ಮರಡೂರ, ಸಿ.ಎಂ.ರೂಡಗಿ, ಶ್ರೀಪಾದ ಬ್ಯಾಳಿಯವರ, ವಿವಿಧ ಘಟಕಗಳ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.