ADVERTISEMENT

ಮಾದಕ ದ್ರವ್ಯ ದುಷ್ಪರಿಣಾಮ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 16:23 IST
Last Updated 6 ಜನವರಿ 2024, 16:23 IST
ರಾಣೆಬೆನ್ನೂರಿನ ನಗರ, ಗ್ರಾಮೀಣ ಮತ್ತು ಸಂಚಾರಿ ಠಾಣೆ, ರೋಟರಿ, ಇನ್ನರ್‌ವೀಲ್‌ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ ಮಾದಕ ದ್ರವ್ಯ ದುಷ್ಪರಿಣಾಮಗಳ ಜಾಗೃತಿ ಜಾಥಾಕ್ಕೆ ಡಿವೈಎಸ್‌ಪಿ ಡಾ.ಗಿರೀಶ ಬೋಜಣ್ಣನವರ ಚಾಲನೆ ನೀಡಿದರು. 
ರಾಣೆಬೆನ್ನೂರಿನ ನಗರ, ಗ್ರಾಮೀಣ ಮತ್ತು ಸಂಚಾರಿ ಠಾಣೆ, ರೋಟರಿ, ಇನ್ನರ್‌ವೀಲ್‌ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ ಮಾದಕ ದ್ರವ್ಯ ದುಷ್ಪರಿಣಾಮಗಳ ಜಾಗೃತಿ ಜಾಥಾಕ್ಕೆ ಡಿವೈಎಸ್‌ಪಿ ಡಾ.ಗಿರೀಶ ಬೋಜಣ್ಣನವರ ಚಾಲನೆ ನೀಡಿದರು.    

ರಾಣೆಬೆನ್ನೂರು: ಇಲ್ಲಿನ ಹೆಸ್ಕಾಂ ಗಣೇಶ ದೇವಸ್ಥಾನದ ಆವರಣದಲ್ಲಿ ನಗರ, ಗ್ರಾಮೀಣ ಮತ್ತು ಸಂಚಾರಿ ಠಾಣೆ, ರೋಟರಿ, ಇನ್ನರ್‌ವೀಲ್‌ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಮಾದಕ ದ್ರವ್ಯ ದುಷ್ಪರಿಣಾಮಗಳ ಜಾಗೃತಿ ನಡಿಗೆ ಏರ್ಪಡಿಸಲಾಗಿತ್ತು.

ಜಾಥಾ ಹೆಸ್ಕಾಂ ಗಣೇಶ ದೇವಸ್ಥಾನದಿಂದ ಪ್ರಾರಂಭವಾಗಿ ಹಳೇ ರಾಷ್ಟ್ರೀಯ ಹೆದ್ದಾರಿ ಮೂಲಕ ಬಸ್‌ ನಿಲ್ದಾಣ, ಕೋರ್ಟ ವೃತ್ತ, ಮೇಡ್ಲೇರಿ ವೃತ್ತ, ಅಂಚೆ ಕಚೇರಿ ವೃತ್ತದ ಮೂಲ ಅಶೋಕನಗರದ ನಗರ ಠಾಣೆ ಬಳಿ ಅಂತ್ಯ ಗೊಂಡಿತು.

ಬಸ್‌ ನಿಲ್ದಾಣದ ಬಳಿ ಜಾಥಾ ಆಗಮಿಸಿದಾಗ ಮಾನವ ಸರಪಳಿ ನಿರ್ಮಿಸಿ ಮಾದಕ ದ್ರವ್ಯ ಹಾಗೂ ಮಾರಾಟದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ADVERTISEMENT

ಡಿವೈಎಸ್‌ಪಿ ಡಾ.ಗಿರೀಶ ಬೋಜಣ್ಣನವರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವು ಮಾದಕ ದ್ರವ್ಯ, ವಸ್ತುಗಳ ದುಷ್ಪರಿಣಾಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಹಕರಿಸಬೇಕು. ಮಾದಕ ವಸ್ತುಗಳ ಸೇವನೆಯು ಅತಿ ಹತ್ತಿರದ ಸ್ನೇಹಿತರ ಪ್ರಲೋಭನೆಗೆ ಒಳಗಾಗಿ ಆರಂಭವಾಗಿ ನಂತರ ಚಟವಾಗಿ ಪರಿಣಮಿಸುತ್ತದೆ. ಇದರಿಂದ ವ್ಯಕ್ತಿಯ ಸಮಸ್ಯೆಯೊಂದಿಗೆ ಕುಟುಂಬಕ್ಕೂ ಮಾರಕವಾಗಿ ಪರಿಣಮಿಸುತ್ತದೆ ಎಂದರು.

ನಗರ ಠಾಣೆ ಸಿಪಿಐ ಡಾ.ಶಂಕರ ಅವರು ಮಾದಕ ವಸ್ತುಗಳ ಸೇವನೆಯಿಂದ ಕುಟುಂಬ ಸರ್ವನಾಶವಾಗುವುದಲ್ಲದೇ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಮಾದಕ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಜಾಲಗಳ ಪತ್ತೆಗೆ ಪ್ರತಿಯೊಬ್ಬರೂ ಸಹಕಾರವನ್ನು ಅಗತ್ಯವಾಗಿ ನೀಡಬೇಕಿದೆ. ಯುವಕರು ತಮ್ಮ ಭವಿಷ್ಯದ ಬಗ್ಗೆ ಹೆಚ್ಚಿನ ಗಮನವಿಟ್ಟು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಸುಜಿತ್ ಜಂಬಿಗಿ ಮಾತನಾಡಿದರು. ಪಿಎಸ್‌ಐಗಳಾದ ಗಡ್ಡೆಪ್ಪ ಗುಂಜಟಗಿ, ದೊಡ್ಡಮನಿ ಮತ್ತು ಪ್ರಕಾಶ.ಎಂ.ಕಟಗಿ ಸೇರಿದಂತೆ ಹಲಗೇರಿ ಮತ್ತು ಕುಮಾರಪಟ್ಟಣ ಪಿಎಸ್‌ಐ ಹಾಗೂ ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

ಶಿವಯೋಗಿ ಅಂಗಡಿ, ಗುರುಪ್ರಕಾಶ ಜಂಬಿಗಿ, ಡಾ.ನಾರಾಯಣಸಾ ಪವಾರ, ಬಾಬು ಹರಿಹರ, ಉಮೇಶ ಗುಂಡಗಟ್ಟಿ, ಜಿ.ಜಿ.ಹೊಟ್ಟಿಗೌಡ್ರ, ಬಸವರಾಜ ಕೇಲಗಾರ, ಚನ್ನಮ್ಮ ಹಡಪದ, ಇನ್ನರ್‌ವ್ಹೀಲ್‌ ಅಧ್ಯಕ್ಷೆ ಶೋಭಾ ಜಂಬಗಿ, ರಾಜೇಶ್ವರಿ ಹನಗೋಡಿಮಠ, ಸುಮಾ ಹೊಟ್ಟಿಗೌಡ್ರ, ಸಂಜನಾ ಕುರುವತ್ತಿ, ಸೊರಟೂರ, ಚಂದ್ರು ಸಣ್ಣಮನಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.