ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ-ಮುನವಳ್ಳಿ ಗ್ರಾಮದಲ್ಲಿರುವ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಜಂಗೀ ಬಯಲು ಕುಸ್ತಿ ಪಂದ್ಯಾವಳಿ ಜ.23ರಿಂದ 30ರ ವರೆಗೆ ಭಕ್ತ ಸಮೂಹದ ನಡುವೆ ಜರುಗಲಿದೆ.
ಜಾತ್ರಾ ಮಹೋತ್ಸವ ಮಹಾತ್ಮಾ ಗಾಂಧೀಜಿ ಅವರ ತತ್ವದಂತೆ ಪ್ರಾಣಿ ಹಿಂಸೆ ತಡೆಯುವ ಮೂಲಕ ಸಾತ್ವಿಕ ಪದ್ದತಿಯಿಂದ ಆರಾಧನೆಗೈದು ಜಾತ್ರೆ ಜರುಗಲಿದೆ. ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, ವಾರದ ಸಂತೆ ನಡೆಯಲಿದೆ. ಜ.25ರಂದು ದುರ್ಗಾದೇವಿ ಮೆರವಣಿಗೆ ಬಂಕಾಪುರದಿಂದ ಆರಂಭವಾಗಿ ಮುನವಳ್ಳಿ ಮೂಲಕ ದೇವಿ ದೇವಸ್ಥಾನಕ್ಕೆ ಆಗಮಿಸಲಿದೆ. ಜ.26ರಂದು ಹುಣ್ಣಿಮೆ ಸಂಭ್ರಮ, ಡಿಳ್ಳು ಮೇಳ ಕಾರ್ಯಕ್ರಮ ಜರುಗಲಿದೆ.
ಜ.27ರಂದು ಹಾವೇರಿ ಪೃಥ್ವಿ ನೃತ್ಯಲೋಕ ಹಾಗೂ ಬಂಕಾಪುರದ ಜಾನಪದ ಕಲಾವಿದ ಜಗದೀಶ ಹುರಳಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜ.28ರಂದು ಕೊತಬಾಳದ ಅರುಣೋದಯ ಜಾನಪದ ಕಲಾತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ, ಜ.29ರಂದು ಹುಬ್ಬಳ್ಳಿ ಕಾಡಸಿದ್ದೇಶ್ವರ ಕಲಾ ಸಂಘದಿಂದ ‘ಶೆಟ್ಟಿಯ ಚೆಲ್ಲಾಟ ಸಂಗವ್ವನ ಹಾರಾಟ’ ಹಾಸ್ಯ ಭರಿತ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜ.30 ರಂದು ವಾರದ ಸಂತೆ ನಡೆಯಲಿದೆ.
ಅರಳೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಕೆಂಡದಮಠದ ಶಿದ್ದಯ್ಯ ಮಹಾದೇವಸ್ವಾಮೀಜಿ, ಸದಾಶಿಪೇಟೆ ಮಲ್ಲಿಕಾರ್ಜುನ ಸ್ವಾಮೀಜಿ, ಶಿವದೇವ ಶರಣರು ಸಾನ್ನಿಧ್ಯ ವಹಿಸುವರು. ಶಾಸಕ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಹಾವೇರಿ ಎಸ್.ಬಿ.ಅಂಶುಕುಮಾರ ಪಾಲ್ಗೊಳ್ಳುವರು.
ರಾಜ್ಯಮಟ್ಟದ ಕುಸ್ತಿ
ರಾಜ್ಯ ಮಟ್ಟದ ಬಯಲು ಜಂಗೀ ಕುಸ್ತಿ ಜ.27ರಿಂದ ಜ.29ರವರೆಗೆ ನಡೆಯಲಿದೆ. ಕೊಲ್ಹಾಪುರ ಸಾಂಗ್ಲಿ ಮೀರಜ್ ಮಂಗಳವಾಡ ವಿಜಯಪುರ ಇಂಡಿ ಬೆಳಗಾವಿ ಸೇರಿದಂತೆ ರಾಜ್ಯ ಮಟ್ಟದ ಕುಸ್ತಿ ಪಟುಗಳಿಂದ ಜಂಗೀ ಕುಸ್ತಿಗಳು ಜರುಗಲಿವೆ. ಕುಸ್ತಿ ಪಟುಗಳಿಗೆ ವಸತಿ ಉಪಹಾರ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘಟಕರು ಹೇಳುತ್ತಾರೆ. ಫೆಬ್ರುವರಿ 3ರಂದು ತೋಪಿನ ದುರ್ಗಾದೇವಿ ಮೂರ್ತಿ ಮೆರವಣಿಗೆ ಮುನವಳ್ಳಿಯಿಂದ ಬಂಕಾಪುರದವರೆಗೆ ವಿವಿಧ ವಾಧ್ಯವೈಭವದೊಂದಿಗೆ ನಡೆಯಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.