ADVERTISEMENT

ಚುನಾವಣೆ: ನೀತಿಸಂಹಿತೆ ತಂಡ ರಚನೆ

ಬ್ಯಾನರ್, ಪೋಸ್ಟರ್ ಹಾಗೂ ಹೋಲ್ಡಿಂಗ್ಸ್ ತೆರವಿಗೆ ಡಿ.ಸಿ ಆದೇಶ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 14:47 IST
Last Updated 30 ಸೆಪ್ಟೆಂಬರ್ 2020, 14:47 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿಸಂಹಿತೆ ಜಾರಿಯಲ್ಲಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಬಂಟಿಂಗ್, ಬ್ಯಾನರ್, ಪೋಸ್ಟರ್, ಹೋಲ್ಡಿಂಗ್ಸ್ ಇತ್ಯಾದಿಗಳನ್ನು ತೆರವುಗೊಳಿಸಿ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ನೀಡಿದ್ದಾರೆ.

ಐ.ಬಿ. ವಶಕ್ಕೆ ಪಡೆಯಿರಿ:ಆಯಾ ತಾಲ್ಲೂಕುವ್ಯಾಪ್ತಿಯಲ್ಲಿ ಬರುವ ನಿರೀಕ್ಷಣಾ ಮಂದಿರಗಳನ್ನು ತಮ್ಮ ವಶಕ್ಕೆ ಪಡೆಯಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ 1000 ಮೇಲ್ಪಟ್ಟ ಮತದಾರರನ್ನು ಹೊಂದಿರುವ ಮತಗಟ್ಟೆಗಳ ಪೈಕಿ ಹೆಚ್ಚುವರಿ ಮತಗಟ್ಟೆಗಳನ್ನು ರಚಿಸಬೇಕು. ಮತಗಟ್ಟೆಗಳ ಸೌಕರ್ಯಗಳ ಕುರಿತಂತೆ (ಎ.ಎಂ.ಎಫ್) ಸ್ಥಾನಿಕ ಪರಿಶೀಲನೆ ನಡೆಸಿ ಮತಗಟ್ಟೆಗಳ ಸುಸ್ಥಿತಿ ಬಗ್ಗೆ ವರದಿ ಮಾಡುವಂತೆ ಸೂಚಿಸಿದ್ದಾರೆ.

ನಿಗಮ, ಮಂಡಳಿ ಹಾಗೂ ಎಪಿಎಂಸಿ ಅಧ್ಯಕ್ಷ/ ಉಪಾಧ್ಯಕ್ಷರು ಉಪಯೋಗಿಸುತ್ತಿರುವ ಸರ್ಕಾರಿ ವಾಹನಗಳನ್ನು ತಕ್ಷಣದಿಂದ ತಮ್ಮ ವಶಕ್ಕೆ ಪಡೆದುಕೊಳ್ಳಬೇಕು. ಮತದಾನಕ್ಕಾಗಿ ಪ್ರತಿ ಮತಗಟ್ಟೆಗೆ ಎರಡರಂತೆ ಮತಪೆಟ್ಟಿಗೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದಾರೆ.

ADVERTISEMENT

ತಂಡ ರಚನೆ:ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲೆಯ ಏಳು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ತಾಲ್ಲೂಕು ಮಟ್ಟದ ಮಾದರಿ ನೀತಿಸಂಹಿತೆ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಿಯೋಜಿತ ಪ್ರತಿ ತಂಡಕ್ಕೆ ಒಬ್ಬ ವಿಡಿಯೊಗ್ರಾಫರ್ ನಿಯೋಜಿಸಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಬೇಕು. ರಾಜಕೀಯ ಸಭೆ, ಸಮಾರಂಭ ಇತರ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಿ ಪೂರ್ಣ ಚಿತ್ರೀಕರಣಗೊಳಿಸಿ ಆಯೋಗದ ವೀಕ್ಷಕರಿಗೆ ಕಳುಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.