ADVERTISEMENT

ಹಾನಗಲ್‌: ಉದ್ದಿಮೆ ಸ್ಥಾಪಿಸಿ, ಉದ್ಯೋಗ ಸೃಷ್ಟಿಸುವೆ- ಬಿಜೆಪಿ ಅಭ್ಯರ್ಥಿ ಸಜ್ಜನರ

ಸಂದರ್ಶನ

ಸಿದ್ದು ಆರ್.ಜಿ.ಹಳ್ಳಿ
Published 27 ಅಕ್ಟೋಬರ್ 2021, 6:17 IST
Last Updated 27 ಅಕ್ಟೋಬರ್ 2021, 6:17 IST
ಶಿವರಾಜ ಸಜ್ಜನರ
ಶಿವರಾಜ ಸಜ್ಜನರ   

ಹಾನಗಲ್‌ ಕ್ಷೇತ್ರಕ್ಕೆ ನಾನು 35 ವರ್ಷಗಳಿಂದ ಅತ್ಯಂತ ಚಿರಪರಿಚಿತ. ಸಿ.ಎಂ ಉದಾಸಿ ಅವರ ಅನುಯಾಯಿ, ‘ಮಾನಸ ಪುತ್ರ’ನಾಗಿ ಈ ಕ್ಷೇತ್ರದ ಜನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ.

***

* ಜನರು ನಿಮಗೇ ಏಕೆ ಮತ ನೀಡಬೇಕು?

ADVERTISEMENT

ಹಾನಗಲ್‌ ಕ್ಷೇತ್ರಕ್ಕೆ ನಾನು 35 ವರ್ಷಗಳಿಂದ ಅತ್ಯಂತ ಚಿರಪರಿಚಿತ. ಸಿ.ಎಂ ಉದಾಸಿ ಅವರ ಅನುಯಾಯಿ, ‘ಮಾನಸ ಪುತ್ರ’ನಾಗಿ ಈ ಕ್ಷೇತ್ರದ ಜನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ರಸ್ತೆಗಳ ಅಭಿವೃದ್ಧಿ, ಶಾಲಾ–ಕಾಲೇಜುಗಳ ನಿರ್ಮಾಣ, ಬೆಳೆ ವಿಮೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಸಿ.ಎಂ.ಉದಾಸಿ ಅವರು ಮಾಡಿದ್ದಾರೆ. ನನಗೆ ಮತ ನೀಡಿದರೆ ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂಬುದು ಜನರ ನಿರೀಕ್ಷೆಯಾಗಿದೆ.

* ಉದಾಸಿ ಕುಟುಂಬಕ್ಕೆ ಟಿಕೆಟ್‌ ತಪ್ಪಿಸಿ, ಕ್ಷೇತ್ರದ ಹೊರಗಿನ ಅಭ್ಯರ್ಥಿಗೆ ಬಿಜೆಪಿ ಟಿಕೆಟ್‌ ನೀಡಿದೆ ಎಂದು ಕಾಂಗ್ರೆಸ್‌ ಆರೋಪ ಮಾಡುತ್ತಿದೆಯಲ್ಲ?

ನಾನು ಹಾವೇರಿ ಜಿಲ್ಲೆಯವನು, ಹಾನಗಲ್‌ ಕ್ಷೇತ್ರ ನನಗೆ ಅತ್ಯಂತ ಚಿರಪರಿಚಿತ. ನಾನು ಪಕ್ಷದ ಸಂಘಟನಾ ಉಸ್ತುವಾರಿ ಇದ್ದೇನೆ. ಉದಾಸಿ ಅಣ್ಣನವರ ಜೊತೆ 35 ವರ್ಷದಿಂದ ಅವರ ಕಷ್ಟ–ಸುಖಗಳಲ್ಲಿ ಜತೆಗಿದ್ದೆ. ನಾನು ಹೊರಗಿನವನಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಈ ಜಿಲ್ಲೆಯವರಲ್ಲ, ಅವರು ಹೊರಗಿನವರು. ರೊಕ್ಕ ಇದೆ ಎಂದು ಇಲ್ಲಿಗೆ ಬಂದು ರಾಜಕಾರಣ ಮಾಡುತ್ತಿದ್ದಾರೆ. ಮತ ಸೆಳೆಯಲು ಕಾಂಗ್ರೆಸ್‌ ಈ ರೀತಿಯ ಆರೋಪ ಮಾಡುತ್ತಿದೆ.

* ‘ಶುಗರ್‌ ಫ್ಯಾಕ್ಟರಿಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂಬ ಗಂಭೀರ ಆರೋಪ ನಿಮ್ಮ ವಿರುದ್ಧ 2004ರಿಂದ ಪ್ರತಿ ಚುನಾವಣೆಯಲ್ಲೂ ಕೇಳಿಬರುತ್ತಿದೆಯಲ್ಲ?

– ಕಾಂಗ್ರೆಸ್‌ನವರಿಗೆ ಹೇಳಿಕೊಳ್ಳಲೂ ಏನೂ ಇಲ್ಲ. ಚುನಾವಣೆಯಲ್ಲಿ ಗೆದ್ದು ಬಂದರೆ ಏನು ಮಾಡುತ್ತೇವೆ ಎಂಬ ಪ್ರಣಾಳಿಕೆಯನ್ನೇ ಜನರಿಗೆ ತಿಳಿಸಿಲ್ಲ. 2004, 2008, 2010ರ ಚುನಾವಣೆಗಳಲ್ಲಿ ನನ್ನ ವಿರುದ್ಧ ಆರೋಪ ಮಾಡಿದರು. ಎಲ್ಲ ಚುನಾವಣೆಗಳಲ್ಲೂ ಗೆದ್ದು ಬಂದೆ. 2018ರಲ್ಲಿ ಉದಾಸಿ ಅಣ್ಣನವರ ಮೇಲೂ ಮಾಡಿದರು. ಅವರೂ ಕೂಡ ಗೆದ್ದು ಬಂದರು. ಈ ಚುನಾವಣೆಯಲ್ಲೂ ಹಳೆಯ ಆರೋಪವನ್ನೇ ಮುಂದುವರಿಸಿದ್ದಾರೆ. ನಮ್ಮ ಮೇಲೆ 64– ತನಿಖಾ ಪ್ರಕರಣವಿದೆ, 1995ರಲ್ಲಿ ಆದ ಪ್ರಕರಣ ಇದುವರೆಗೂ ಇತ್ಯರ್ಥಗೊಂಡಿಲ್ಲ. ನಮ್ಮದು ತಪ್ಪಿದ್ದರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮನ್ನು ಜೈಲಿಗೆ ಕಳುಹಿಸಬಹುದಿತ್ತು. ಇದೊಂದು ರಾಜಕೀಯ ಪ್ರೇರಿತವಾದ ಸುಳ್ಳು ಆಪಾದನೆ ಅಷ್ಟೆ.

* ‘ಸಜ್ಜನ ಅಲ್ಲ ದುರ್ಜನ’ ಎಂದು ಸಿದ್ದರಾಮಯ್ಯ ಅವರು ನೇರವಾಗಿ ನಿಮ್ಮನ್ನು ಟಾರ್ಗೆಟ್‌ ಮಾಡುತ್ತಿದ್ದಾರಲ್ಲ?

ಈ ಚುನಾವಣೆ ಆದ ನಂತರ ನಾನು ಸಜ್ಜನನೋ ಅಥವಾ ದುರ್ಜನನೋ ಎಂಬುದು ಅವರಿಗೆ ಗೊತ್ತಾಗುತ್ತದೆ. ಸಿದ್ದರಾಮಯ್ಯನವರ ಬಾಯಿ ಮತ್ತು ಮಿದುಳಿಗೆ ಲಿಂಕ್‌ ಇಲ್ಲ ಎನಿಸುತ್ತದೆ. ಸುಳ್ಳು ಆಪಾದನೆ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದಕ್ಕೆ ಮತದಾರರು ಮರುಳಾಗುವುದಿಲ್ಲ. ಜನರು ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲಿಸಿ ಓಡಿಸಿದ್ದಾರೆ. ಇಲ್ಲಿ ಅವರ ಅಭ್ಯರ್ಥಿಯನ್ನು ಯಾವ ರೀತಿ ಗೆಲ್ಲಿಸುತ್ತಾರೋ ಗೊತ್ತಿಲ್ಲ.

* ನೀವು ಶಾಸಕರಾಗಿ ಆಯ್ಕೆಯಾದರೆ, ಹಾನಗಲ್‌ ಕ್ಷೇತ್ರಕ್ಕೆ ಸಿಗುವ ಕೊಡುಗೆ ಏನು?

ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿ ಇದ್ದಾರೆ. ಅವರು ‘ಹಾನಗಲ್‌ ಅಳಿಯ’ ಕೂಡ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲು ಸಾಧ್ಯವಿದೆ. ಏತ ನೀರಾವರಿ ಯೋಜನೆಗಳಿಂದ ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ರೈತರಿಗೆ ದೊಡ್ಡ ಅನುಕೂಲವಾಗುತ್ತಿದೆ. ಇನ್ನೂ ಕೆಲವು ಭಾಗದಲ್ಲಿ ಕೆರೆಗಳನ್ನು ತುಂಬಿಸಬೇಕಿದೆ. ಯುವಕ–ಯುವತಿಯರಿಗೆ ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡುತ್ತೇನೆ. ಗಾರ್ಮೆಂಟ್‌, ಕೃಷಿ ಪೂರಕ ಉದ್ದಿಮೆ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

*ನಿಮ್ಮ ಗೆಲುವಿಗಿರುವ ಪೂರಕ ಹಾಗೂ ಬಾಧಕ ಅಂಶಗಳೇನು?

ಬಿಜೆಪಿ ದೊಡ್ಡ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಮಳೆಗಾಲದಲ್ಲಿ ನಾಯಿಕೊಡೆ ಒಡ್ಡುವಂತೆ ಚುನಾವಣೆ ಬಂದಾಗ ಸಂಘಟನೆ ಮಾಡುವ ಪಕ್ಷ ನಮ್ಮದಲ್ಲ. ನಮ್ಮದು ನಿತ್ಯ ನಿರಂತರ. ಎಲ್ಲ ಸಮುದಾಯಗಳು ಬಿಜೆಪಿ ಜತೆ ಇವೆ.ವಿಶೇಷವಾಗಿ ಮುಸ್ಲಿಂ ಬಾಂಧವರು, ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್‌ಗೆ ಮತ ನೀಡಿ, ನೀಡಿ ಸಾಕಾಗಿದೆ ಎಂದು ಈ ಬಾರಿ ನಮಗೆ ಬೆಂಬಲ ಸೂಚಿಸುತ್ತಿದ್ದಾರೆ. ಹೀಗಾಗಿ ಎಲ್ಲವೂ ನಮಗೆ ಪ್ಲಸ್‌ ಇದೆ, ಮೈನಸ್‌ ಎಂಬುದು ಇಲ್ಲವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.