ಹಾನಗಲ್: ಮಾವು ಬೆಳೆಗೆ ಹೆಸರಾಗಿರುವ ಹಾನಗಲ್ ತಾಲ್ಲೂಕಿನಲ್ಲಿ, ‘ಮಾವು ಸಂಸ್ಕರಣಾ ಘಟಕ’ ಸ್ಥಾಪನೆಯ ವಿಚಾರ ಮರುಜೀವ ಪಡೆದುಕೊಂಡಿದೆ. ತಾಲ್ಲೂಕಿನ ಯಳವಟ್ಟಿ ಬಳಿಯ ಜಾಗದಲ್ಲಿ ಘಟಕ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ರಾಜ್ಯ ಸರ್ಕಾರಕ್ಕೆ ಅಂತಿಮ ಪ್ರಸ್ತಾವ ಸಲ್ಲಿಕೆಯಾಗಿದೆ.
ಜಿಲ್ಲೆಯಲ್ಲಿಯೇ ಅಧಿಕ ಮಾವು ಬೆಳೆಯುವ ಹಾನಗಲ್ ತಾಲ್ಲೂಕಿನಲ್ಲಿ ಮಾವು ಬೆಳೆಯ ಉತ್ತೇಜನಕ್ಕಾಗಿ ಮತ್ತು ಬೆಳೆಗಾರರ ಅನುಕೂಲಕ್ಕಾಗಿ 2021–22ನೇ ಸಾಲಿನ ಬಜೆಟ್‌ನಲ್ಲಿ ಮಾವು ಸಂಸ್ಕಾರಣಾ ಘಟಕ ನಿರ್ಮಾಣದ ಘೋಷಣೆ ಮಾಡಲಾಗಿತ್ತು.
ಇದಕ್ಕೆ ಪೂರಕವಾಗಿ ಅಂದಿನ ತೋಟಗಾರಿಕೆ ಸಚಿವರು ತಾಲ್ಲೂಕಿನ ಯಳವಟ್ಟಿ ಗ್ರಾಮ ಸಮೀಪದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಹಿಂಭಾಗದ ಕಂದಾಯ ಇಲಾಖೆಯ ಜಾಗವನ್ನು ಪರಿಶೀಲಿಸಿದ್ದರು. ಇಲಾಖೆ ಹಿರಿಯ ಅಧಿಕಾರಿಗಳೂ ಹಾಜರಿದ್ದರು. ಇದಾದ ನಂತರ, ಘಟಕ ಸ್ಥಾಪನೆ ಕೆಲಸ ಸ್ಥಗಿತಗೊಂಡಿತ್ತು. ‘ಘಟಕ ಸ್ಥಾಪನೆ ಯಾವಾಗ’ ಎಂದು ಜನರು ಪ್ರಶ್ನಿಸುತ್ತಿದ್ದರು.
ನನೆಗುದಿಗೆ ಬಿದ್ದಿದ್ದ ಮಾವು ಸಂಸ್ಕರಣಾ ಘಟಕ ಸ್ಥಾಪನೆ ನನಸಾಗುವ ಕಾಲ ಸನ್ನಿಹಿತವಾಗಿದೆ. ಘಟಕ ಸ್ಥಾಪನೆಗಾಗಿ ಸಿದ್ಧಪಡಿಸಿದ್ದ ಪ್ರಸ್ತಾವವನ್ನು ನವೆಂಬರ್ 29ರಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆಯಲ್ಲಿ ಅಧಿಕಾರಿಗಳು ಮಂಡಿಸಿದ್ದರು. ಕಾರ್ಯದರ್ಶಿ ಅವರು ಘಟಕ ನಿರ್ಮಾಣಕ್ಕೆ ಒಲುವು ತೋರಿಸಿದ್ದು, ಅಂತಿಮ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಪ್ರಸ್ತಾವಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಇದಾದ ನಂತರ ನಿರ್ಮಾಣ ಕೆಲಸಗಳು ಆರಂಭವಾಗಲಿವೆ.
ಹಾನಗಲ್ ತಾಲ್ಲೂಕಿನಲ್ಲಿ ಮಾವು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅಂದಾಜು ₹30 ಲಕ್ಷ ವೆಚ್ಚವಾಗಬಹುದು. 2025ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಿರ್ಮಾಣ ಕಾರ್ಯ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಮಾವು ಸಂಸ್ಕರಣಾ ಘಟಕ ಕೇವಲ ಮಾವು ಬೆಳೆಗೆ ಮಾತ್ರ ಸೀಮಿತವಾಗಿಲ್ಲ. ಈ ಭಾಗದ ತೋಟಗಾರಿಕೆ ಬೆಳೆಗಳಾದ ಅನಾನಸ್, ಚಿಕ್ಕು, ಪೇರಲ, ಬಾಳೆ, ಪಪ್ಪಾಯಿ, ಹಲಸು ಹಣ್ಣುಗಳ ಸಂಸ್ಕರಣೆಗೂ ಕೆಲಸ ಮಾಡಲಿದೆ.
ಹಾನಗಲ್‌ನಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಯಿಂದ ಸಮೀಪದ ಮುಂಡಗೋಡ, ಸೊರಬ, ಹಾವೇರಿ, ಶಿಗ್ಗಾವಿ, ಗದಗ, ಲಕ್ಷ್ಮೇಶ್ವರ ಮತ್ತು ದಾವಣಗೆರೆ ಭಾಗದಲ್ಲಿ ಬೆಳೆಯುವ ಮಾವು ಬೆಳೆಯ ಸಂಸ್ಕರಣೆಗೂ ಅನುಕೂಲವಾಗಲಿದೆ.
ಮಾವು ಸಂಸ್ಕರಣಾ ಘಟಕ ಬಹುದಿನಗಳ ಕನಸು. ಘಟಕ ನಿರ್ಮಾಣ ಪ್ರಕ್ರಿಯೆ ಆರಂಭವಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿಸಿದೆ. ಘಟಕ ನಿರ್ಮಾಣದಿಂದ ತೋಟಗಾರಿಕೆ ಬೆಳೆಗಾರರಿಗೆ ಪ್ರೋತ್ಸಾಹ ಸಿಗಲಿದೆಮರಿಗೌಡ ಪಾಟೀಲ ಮಾವು ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.