ADVERTISEMENT

ಹಾವೇರಿ | ಎಚ್ಚರ... ನಕಲಿ ವೈದ್ಯರಿಂದ ಜೀವಕ್ಕೆ ಕುತ್ತು

10 ನಕಲಿ ಕ್ಲಿನಿಕ್ ಬಂದ್ ಮಾಡಿಸಿದ ಆರೋಗ್ಯ ಇಲಾಖೆ | ಬಾಡಿಗೆ ಕೊಟ್ಟವರಿಗೆ ಸಂಕಷ್ಟ | ತಾಲ್ಲೂಕುವಾರು ಸಮೀಕ್ಷೆ

ಸಂತೋಷ ಜಿಗಳಿಕೊಪ್ಪ
Published 22 ಡಿಸೆಂಬರ್ 2024, 4:55 IST
Last Updated 22 ಡಿಸೆಂಬರ್ 2024, 4:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಹಣದಾಸೆಗಾಗಿ ಜನರ ಜೀವಕ್ಕೆ ಕುತ್ತು ತರುತ್ತಿರುವ ನಕಲಿ ವೈದ್ಯರನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ತಾಲ್ಲೂಕುವಾರು ಸಮೀಕ್ಷೆ ಆರಂಭಿಸಿದ್ದಾರೆ.

ಎಂಬಿಬಿಎಸ್‌ ಹಾಗೂ ಇತರೆ ಅರ್ಹತಾ ವಿದ್ಯಾರ್ಹತೆ ಪಡೆಯದ ಹಲವರು, ಕೊರಳಿನಲ್ಲಿ ಸ್ಟೆಥಸ್ಕೋಪ್‌ ಹಾಕಿಕೊಂಡು ವೈದ್ಯರಂತೆ ವೇಷ ಧರಿಸಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂಥ ವೈದ್ಯರಿಂದ ಚಿಕಿತ್ಸೆ ಪಡೆದಿರುವ ಹಲವರು, ನಾನಾ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಜೀವನ ಪರ್ಯಂತ ನೋವು ಅನುಭವಿಸುತ್ತಿದ್ದಾರೆ.

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಶಿಗ್ಗಾವಿ, ಸವಣೂರು, ಹಿರೇಕೆರೂರು, ಬ್ಯಾಡಗಿ ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಹಲವು ಕಡೆಗಳಲ್ಲಿ ನಕಲಿ ವೈದ್ಯರು ಇರುವ ಮಾಹಿತಿ ಲಭ್ಯವಾಗಿದೆ. ಬಾಡಿಗೆ ಕಟ್ಟಡದಲ್ಲಿ ಕ್ಲಿನಿಕ್ ತೆರೆಯುವ ನಕಲಿ ವೈದ್ಯರು, ತಾವು ಪರಿಣಿತರು ಎಂಬುದಾಗಿ ಹೇಳಿಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ADVERTISEMENT

ನಕಲಿ ವೈದ್ಯರನ್ನೇ ಅಸಲಿ ವೈದ್ಯರೆಂದು ನಂಬುತ್ತಿರುವ ಜನರು, ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾದಾಗ ಕ್ಲಿನಿಕ್‌ಗೆ ಹೋಗುತ್ತಿದ್ದಾರೆ. ಜ್ವರ, ನೆಗಡಿ, ಕೆಮ್ಮು, ಮೈಕೈ ನೋವು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ನಕಲಿ ವೈದ್ಯರು ಅವೈಜ್ಞಾನಿಕ ಚಿಕಿತ್ಸೆ ನೀಡುತ್ತಿದ್ದಾರೆ. ಇಂಥ ಚಿಕಿತ್ಸೆಯು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಣ್ಣ ಆರೋಗ್ಯ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಪ್ರಾಥಮಿಕ ಮಾಹಿತಿ ಕಲೆಹಾಕಿದ್ದ ಆರೋಗ್ಯ ಇಲಾಖೆ, 10 ನಕಲಿ ವೈದ್ಯರನ್ನು ಈಗಾಗಲೇ ಪತ್ತೆ ಮಾಡಿದೆ. ನಕಲಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಲಾಗಿದ್ದು, ಕೆಲವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ನಕಲಿ ವೈದ್ಯರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ವೈದ್ಯರ ವಿದ್ಯಾರ್ಹತೆ ಹಾಗೂ ಅನುಭವದ ಬಗ್ಗೆ ತಿಳಿದುಕೊಂಡು ಅವರ ಬಳಿ ಚಿಕಿತ್ಸೆ ಪಡೆಯಬೇಕು
ಡಾ. ರಾಜೇಂದ್ರ ಸುರಗಿಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ

ಜಿಲ್ಲೆಯಲ್ಲಿ ರೈತಾಪಿ ಕುಟುಂಬಗಳು ಹೆಚ್ಚಿವೆ. ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇಂಥವರು ಹೆಚ್ಚಾಗಿ ನಕಲಿ ವೈದ್ಯರ ಬಳಿ ಹೋಗುತ್ತಿದ್ದು, ಹಣ ಕೊಟ್ಟು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.

‘ಜಿಲ್ಲೆಯ ಹಲವು ಪಟ್ಟಣ ಹಾಗೂ ಗ್ರಾಮಗಳಲ್ಲಿ ನಕಲಿ ವೈದ್ಯರು ಇರುವ ಮಾಹಿತಿ ಇದೆ. ಈಗಾಗಲೇ ಸುಮಾರು 10 ನಕಲಿ ವೈದ್ಯರನ್ನು ಪತ್ತೆ ಮಾಡಿ, ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಜಿಲ್ಲೆಯಾದ್ಯಂತ ನಕಲಿ ವೈದ್ಯರನ್ನು ಪತ್ತೆ ಮಾಡಲು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಮೀಕ್ಷೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಅಂತಿಮ ವರದಿ ಸಿಗಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ಸುರಗಿಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಣದ ಆಸೆಗಾಗಿ ಕೆಲವರು, ನಕಲಿ ವೈದ್ಯರ ವೇಷ ಧರಿಸಿ ಕ್ಲಿನಿಕ್ ತೆರೆಯುತ್ತಿದ್ದಾರೆ. ಕೆಲವರು, ತಮ್ಮ ಮನೆಯಲ್ಲಿಯೇ ಅಕ್ರಮವಾಗಿ ಜನರಿಗೆ ಚಿಕಿತ್ಸೆ ನೀಡುತ್ತಿರುವುದೂ ಕಂಡುಬಂದಿದೆ. ಎಲ್ಲವನ್ನೂ ಪುರಾವೆ ಸಮೇತ ಪತ್ತೆ ಮಾಡಬೇಕಿದೆ’ ಎಂದು ಹೇಳಿದರು.

ಬಾಡಿಗೆ ಕೊಟ್ಟವರಿಗೆ ಸಂಕಷ್ಟ: ಖಾಲಿ ಇರುವ ಕೊಠಡಿ ಹಾಗೂ ಮನೆಗಳನ್ನು ಬಾಡಿಗೆ ಪಡೆಯುತ್ತಿರುವ ನಕಲಿ ವೈದ್ಯರು, ಅದೇ ಸ್ಥಳದಲ್ಲಿ ಕ್ಲಿನಿಕ್ ತೆರೆಯುತ್ತಿದ್ದಾರೆ. ನಕಲಿ ವೈದ್ಯರು ಸಿಕ್ಕಿಬೀಳುತ್ತಿದ್ದಂತೆ ಕ್ಲಿನಿಕ್‌ ಬಾಗಿಲು ಬಂದ್ ಮಾಡಲಾಗುತ್ತಿದೆ. ಇದರಿಂದಾಗಿ, ಬಾಡಿಗೆ ಕೊಟ್ಟ ಮಾಲೀಕರಿಗೆ ಸಂಕಷ್ಟ ಎದುರಾಗುತ್ತಿದೆ.

‘ಕ್ಲಿನಿಕ್‌ಗೆ ಬೀಗ ಜಡಿದು ಜಪ್ತಿ ಮಾಡಲಾಗುತ್ತಿದೆ. ಪ್ರಕರಣ ಇತ್ಯರ್ಥವಾಗುವವರೆಗೂ ಬೀಗ ತೆಗೆಯಲು ಅವಕಾಶವಿಲ್ಲ. ಇಂಥ ಸಂದರ್ಭದಲ್ಲಿ ಕೊಠಡಿ ಮಾಲೀಕರು, ಬೀಗ ತೆಗೆಯುವಂತೆ ಒತ್ತಾಯಿಸುತ್ತಿದ್ದಾರೆ. ನಕಲಿ ವೈದ್ಯರೆಂಬುದು ಗೊತ್ತಿಲ್ಲದೇ ಬಾಡಿಗೆ ಕೊಟ್ಟಿರುವುದಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ, ನಕಲಿ ವೈದ್ಯರಿಗೆ ಕೊಠಡಿ ನೀಡಿದ ಮಾಲೀಕರಿಗೂ ಹೊಣೆಗಾರಿಕೆ ಇರುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ವೈದ್ಯರಿಗೆ ಕೊಠಡಿ ಬಾಡಿಗೆ ನೀಡುವ ಮುನ್ನ, ಅವರ ವಿದ್ಯಾರ್ಹತೆ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಬೇಕು. ಆರೋಗ್ಯ ಇಲಾಖೆ ನಿಯಮಗಳ ಅನ್ವಯ ನೋಂದಣಿ ಆಗಿದೆಯಾ ? ನೋಂದಣಿ ಸಂಖ್ಯೆ ಏನು ? ಎಂಬುದನ್ನು ತಿಳಿದುಕೊಳ್ಳಬೇಕು. ಬಳಿಕವೇ ಬಾಡಿಗೆ ನೀಡಬೇಕು. ಇಲ್ಲದಿದ್ದರೆ, ಮಾಲೀಕರೂ ಕಷ್ಟದಲ್ಲಿ ಸಿಲುಕಬೇಕಾಗುತ್ತದೆ’ ಎಂದು ತಿಳಿಸಿದರು.

ಕೆಪಿಎಂಇ ಸಂಖ್ಯೆ ಪ್ರದರ್ಶನ ಕಡ್ಡಾಯ: ‘ಆರೋಗ್ಯ ಇಲಾಖೆ ರೂಪಿಸಿರುವ ನಿಯಮದಂತೆ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು, ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ ಸಮೇತ ಆಸ್ಪತ್ರೆ ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಬೇಕು’ ಎಂದು ಅಧಿಕಾರಿ ಹೇಳಿದರು.

‘ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಹಾಗೂ ತಿದ್ದುಪಡಿ ನಿಯಮ 2017ರ ಅನ್ವಯ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಕೆಪಿಎಂಇ ನಿಯಮಾನುಸಾರ ನೋಂದಣಿ ಆಗಿರಬೇಕಾಗುತ್ತದೆ. ವೈದ್ಯರಿಗೂ ನಿಯಮ ಅನ್ವಯವಾಗುತ್ತದೆ. ಅಲೋಪತಿ ಆಸ್ಪತ್ರೆಗಳ ಫಲಕ ನೀಲಿ ಬಣ್ಣ ಹಾಗೂ ಆಯುರ್ವೇದಿಕ್‌ ಆಸ್ಪತ್ರೆಗಳ ಫಲಕ ಹಸಿರು ಬಣ್ಣದಲ್ಲಿರಬೇಕು’ ಎಂದು ತಿಳಿಸಿದರು.

ವೈದ್ಯರ ಕೊರತೆ; ನಕಲಿ ವೈದ್ಯರಿಗೆ ಅನುಕೂಲ

ಗ್ರಾಮೀಣ ಪ್ರದೇಶಗಳಲ್ಲಿ ಎಂಬಿಬಿಎಸ್ ಹಾಗೂ ಸೂಕ್ತ ವಿದ್ಯಾರ್ಹತೆಯುಳ್ಳ ವೈದ್ಯರ ಕೊರತೆ ಹೆಚ್ಚಿದೆ. ಇದು ನಕಲಿ ವೈದ್ಯರಿಗೆ ಅನುಕೂಲ ಮಾಡಿಕೊಟ್ಟಿದೆ.

‘ಪಟ್ಟಣ ಹಾಗೂ ನಗರಗಳಿಗೆ ಮಾತ್ರ ಎಂಬಿಬಿಎಸ್ ವೈದ್ಯರು ಸೀಮಿತವಾಗಿದ್ದಾರೆ. ಹಳ್ಳಿಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯರು ಸಿಗುವುದಿಲ್ಲ. ಹೀಗಾಗಿ ಜನರು ಲಭ್ಯವಿರುವ ವೈದ್ಯರ ಬಳಿ ಹೋಗುತ್ತಿದ್ದಾರೆ. ಎಲ್ಲ ಕಡೆಯೂ ನೋಂದಾಯಿತ ವೈದ್ಯರು ಇರುವಂತೆ ಆರೋಗ್ಯ ಇಲಾಖೆ ನೋಡಿಕೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

‘ನ್ಯಾಯಾಲಯದಲ್ಲಿ ಮೊಕದ್ದಮೆ’

‘ನಕಲಿ ವೈದ್ಯರನ್ನು ಪತ್ತೆ ಮಾಡಿದ ನಂತರ ಅವರ ವಿರುದ್ಧ ಪುರಾವೆಗಳನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇವೆ. ಏಕಾಏಕಿ ಎಫ್‌ಐಆರ್ ಮಾಡಿಸುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದು ಡಾ. ರಾಜೇಂದ್ರ ಸುರಗಿಹಳ್ಳಿ ಹೇಳಿದರು.

‘ಒಬ್ಬ ನಕಲಿ ವೈದ್ಯನ ಕ್ಲಿನಿಕ್ ಮೇಲೆ ದಾಳಿ ಮಾಡುತ್ತಿದ್ದಂತೆ ಇತರೆ ನಕಲಿ ವೈದ್ಯರೆಲ್ಲ ಪರಾರಿಯಾಗುತ್ತಾರೆ. ಇಂಥ ಸಂದರ್ಭದಲ್ಲಿ ಎಲ್ಲರನ್ನೂ ಪತ್ತೆ ಮಾಡಲು ಆಗುವುದಿಲ್ಲ. ಏಕಾಏಕಿ ಕಾಲ ಕಾಲಕ್ಕೆ ಪತ್ತೆ ಕೆಲಸ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.