ADVERTISEMENT

ಹಾವೇರಿ | ನಕಲಿ ಚಿನ್ನ ಪಡೆದು ₹ 1.50 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:28 IST
Last Updated 8 ಅಕ್ಟೋಬರ್ 2025, 6:28 IST
   

ಹಾವೇರಿ: ತಾಲ್ಲೂಕಿನ ಗುತ್ತಲ ಬಸ್‌ ನಿಲ್ದಾಣದಲ್ಲಿ ನಕಲಿ ಚಿನ್ನಾಭರಣ ಮಾರಿ ₹ 1.50 ಲಕ್ಷ ಪಡೆದುಕೊಂಡು ವಂಚಿಸಲಾಗಿದ್ದು,  ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆಂಗಳೂರು ದಕ್ಷಿಣ ಜಿಲ್ಲೆಯ ವಿನೋದ್‌ಕುಮಾರ ಎಂಬುವವರು ವಂಚನೆ ಬಗ್ಗೆ ತಾವರಗೇರೆ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಿದ್ದರು. ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಗುತ್ತಲ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ. ಆರೋಪಿ ರಾಜು ಸೇರಿ ಇಬ್ಬರ ಪತ್ತೆಗಾಗಿ ತನಿಖೆ ಮುಂದುವರಿದಿದೆ’ ಎಂದು ಗುತ್ತಲ ಠಾಣೆ ಪೊಲೀಸರು ಹೇಳಿದರು.

‘ದೂರುದಾರ ವಿನೋದ್‌ಕುಮಾರ ಅವರಿಗೆ ಕರೆ ಮಾಡಿದ್ದ ಆರೋಪಿ ರಾಜು, ‘ನನ್ನ ಬಳಿ ಚಿನ್ನದ ಕಾಯಿನ್‌ಗಳಿವೆ. ನನಗೆ ಹಣದ ಅಗತ್ಯವಿದ್ದು, ಚಿನ್ನ ಪಡೆದುಕೊಂಡು ಹಣ ಕೊಡಿ’ ಎಂದು ಕೋರಿದ್ದ. ಅದಕ್ಕೆ ಒಪ್ಪಿದ್ದ ದೂರುದಾರ, ಗುತ್ತಲ ನಿಲ್ದಾಣಕ್ಕೆ ಬಂದಿದ್ದರು. ಪರೀಕ್ಷೆಗೆಂದು ಆರೋಪಿ, ಸ್ವಲ್ಪ ಪ್ರಮಾಣದಲ್ಲಿ ಚಿನ್ನ ಕೊಟ್ಟಿದ್ದ. ಅದನ್ನು ದೂರುದಾರರು ತಮ್ಮೂರಿಗೆ ಕೊಂಡೊಯ್ದು ಪರೀಕ್ಷೆ ಮಾಡಿದಾಗ ಅಸಲಿ ಚಿನ್ನವೆಂಬುದು ಗೊತ್ತಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಆರೋಪಿಯನ್ನು ನಂಬಿದ್ದ ದೂರುದಾರ, ಸೆ. 30ರಂದು ಬೆಳಿಗ್ಗೆ ಗುತ್ತಲ ನಿಲ್ದಾಣಕ್ಕೆ ಬಂದಿದ್ದರು. ಆರೋಪಿಯನ್ನು ಭೇಟಿಯಾಗಿ ₹ 1.50 ಲಕ್ಷ ಹಣ ಕೊಟ್ಟು 65 ಗ್ರಾಂ ತೂಕದ ಚಿನ್ನದ ಕಾಯಿನ್‌ ಖರೀದಿಸಿದ್ದರು. ಹಣ ಪಡೆದುಕೊಂಡ ಆರೋಪಿಗಳು, ಸ್ಥಳದಿಂದ ಹೊರಟು ಹೋಗಿದ್ದರು. ಸ್ವಲ್ಪ ದೂರಕ್ಕೆ ಹೋದ ನಂತರ ಕಾಯಿನ್ ಪರೀಕ್ಷಿಸಿದಾಗ, ನಕಲಿ ಚಿನ್ನವೆಂಬುದು ಗೊತ್ತಾಗಿದೆ. ಅಷ್ಟರಲ್ಲೇ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.