ADVERTISEMENT

ನಿಧಿ ಹೆಸರಿನಲ್ಲಿ ನಕಲಿ ಚಿನ್ನ: ಬಂಧನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:33 IST
Last Updated 4 ಮಾರ್ಚ್ 2026, 5:33 IST
ನಕಲಿ ಚಿನ್ನ ಮಾರಾಟ ಮಾಡಿದ್ದ ಆರೋಪಿ ರಾಮಪ್ಪ ಕಡೆಯಿಂದ ಜಪ್ತಿ ಮಾಡಲಾದ ಬೈಕ್ ಜೊತೆ ಬಂಕಾಪುರ ಠಾಣೆ ಪೊಲೀಸರ ತಂಡ
ನಕಲಿ ಚಿನ್ನ ಮಾರಾಟ ಮಾಡಿದ್ದ ಆರೋಪಿ ರಾಮಪ್ಪ ಕಡೆಯಿಂದ ಜಪ್ತಿ ಮಾಡಲಾದ ಬೈಕ್ ಜೊತೆ ಬಂಕಾಪುರ ಠಾಣೆ ಪೊಲೀಸರ ತಂಡ   

ಹಾವೇರಿ: ‘ಮನೆಯ ಪಾಯ ತೆಗೆಯುವ ಸಂದರ್ಭದಲ್ಲಿ ಚಿನ್ನದ ನಿಧಿ ಸಿಕ್ಕಿದೆ’ ಎಂಬುದಾಗಿ ಸುಳ್ಳು ಹೇಳಿ ನಕಲಿ ಚಿನ್ನ ಮಾರಿ ₹ 5 ಲಕ್ಷ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಿಜಯನಗರದ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೊರಚರಹಟ್ಟಿ ಗ್ರಾಮದ ರಾಮಪ್ಪ ಕೆ. ಬಂಧಿತ ಆರೋಪಿ. ಆತನಿಂದ ₹ 4 ಲಕ್ಷ ನಗದು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಇನ್ನೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ರಾಮಪ್ಪ ಹಾಗೂ ಸ್ನೇಹಿತ, ಸಂಚು ರೂಪಿಸಿ ಕೃತ್ಯ ಎಸಗಿದ್ದರು. ವಸತಿಗೃಹ, ಬಸ್ ನಿಲ್ದಾಣ ಹಾಗೂ ಇತೆರೆಡೆ ಸಿಗುವ ಮೊಬೈಲ್‌ ನಂಬರ್ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಅದೇ ನಂಬರ್‌ಗೆ ಕರೆ ಮಾಡಿ, ನಿಧಿ ಸಿಕ್ಕಿರುವುದಾಗಿ ವಂಚನೆ ಮಾಡುತ್ತಿದ್ದರೆಂಬುದು ಗೊತ್ತಗಿದೆ’ ಎಂದು ಹೇಳಿದರು.

ADVERTISEMENT

‘ಮಹಾರಾಷ್ಟದ ಶಂಕರ ಹರಿಬಾಹು ದುದಾನಿ ಅವರಿಗೆ 2025ರ ಡಿಸೆಂಬರ್ 5ರಂದು ಕರೆ ಮಾಡಿದ್ದ ಆರೋಪಿಗಳು, ‘ನಮ್ಮ ಮನೆಯ ಪಾಯ ತೆಗೆಯುವಾಗ 4 ಕೆ.ಜಿ ಬಂಗಾರದ ಬಿಲ್ಲೆಗಳು ಸಿಕ್ಕಿವೆ. ಈಗ ನನ್ನ ಮಗಳ ಮದುವೆಯಿದೆ. ತುರ್ತಾಗಿ ಹಣ ಬೇಕಿದೆ. ಚಿನ್ನದ ಬಿಲ್ಲೆಗಳನ್ನು ನಮ್ಮೂರಿನಲ್ಲಿ ಮಾರಿದರೆ, ಜನರಿಗೆ ವಿಷಯ ಗೊತ್ತಾಗಿ ಸರ್ಕಾರಕ್ಕೆ ಜಮಾ ಆಗುತ್ತದೆ. ಅದಕ್ಕಾಗಿ ನಾವು 250 ಗ್ರಾಂ ಚಿನ್ನದ ಬಿಲ್ಲೆಗಳನ್ನು ₹ 20 ಲಕ್ಷಕ್ಕೆ ಮಾರುತ್ತಿದ್ದೇವೆ’ ಎಂದು ಹೇಳಿದ್ದರು. ಬಿಲ್ಲೆಗಳನ್ನು ನೋಡಲು ರಾಷ್ಟ್ರೀಯ ಹೆದ್ದಾರಿಯ ಬಂಕಾಪುರ ಟೋಲ್‌ಗೇಟ್‌ ಬಳಿ ಬರಲು ತಿಳಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಆರೋಪಿಗಳ ಮಾತು ನಂಬಿದ್ದ ದೂರುದಾರ ಶಂಕರ, ಡಿ. 13ರಂದು ಬಂಕಾಪುರ ಟೋಲ್‌ಗೇಟ್‌ಗೆ ಬಂದಿದ್ದರು. ಎರಡು ಅಸಲಿ ಬಿಲ್ಲೆಗಳಲ್ಲಿ ದೂರುದಾರರಿಗೆ ಕೊಟ್ಟಿದ್ದ ಆರೋಪಿಗಳು, ಪರಿಶೀಲಿಸುವಂತೆ ಹೇಳಿದ್ದರು. ಅದು ಅಸಲಿ ಎಂಬುದಾಗಿ ದೂರುದಾರ ಹೇಳಿದ್ದರು. 250 ಗ್ರಾಂ. ಚಿನ್ನದ ಬಿಲ್ಲೆಗೆ ₹ 5 ಲಕ್ಷ ಕೊಡುವುದಾಗಿ ವ್ಯವಹಾರ ಮಾಡಿದ್ದರು. ಇದಾದ ನಂತರ ಆರೋಪಿಗಳು, 250 ಗ್ರಾಂ ತೂಕದ ನಕಲಿ ಬಿಲ್ಲೆಗಳನ್ನು ನೀಡಿದ್ದರು. ನಂತರ, ಅವಸರದಲ್ಲಿಯೇ ₹ 5 ಲಕ್ಷ ಪಡೆದು ಸ್ಥಳದಿಂದ ಹೊರಟು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲ ಹೊತ್ತಿನ ನಂತರ ದೂರುದಾರ ಪರಿಶೀಲನೆ ನಡೆಸಿದಾಗ, ಬಿಲ್ಲೆಗಳು ನಕಲಿ ಎಂಬುದು ಗೊತ್ತಾಗಿದೆ. ಆರೋಪಿಗೆ ಕರೆ ಮಾಡಿದಾಗ, ಮೊಬೈಲ್ ಸ್ವಿಚ್ ಆಫ್ ಬಂದಿತ್ತು. ಬಳಿಕವೇ ಅವರು ಠಾಣೆಗೆ ಬಂದು ದೂರು ನೀಡಿದ್ದರು. ತಾಂತ್ರಿಕ ಪುರಾವೆ ಆಧರಿಸಿ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದ. ಈತನ ಬಳಿಯೇ ಹಣವಿತ್ತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.