ADVERTISEMENT

ಹಾವೇರಿ | ಮನೆಯ ಪಾಯ ತೆಗೆಯುವ ಸಂದರ್ಭದಲ್ಲಿ: ನಕಲಿ ಚಿನ್ನ ಕೊಟ್ಟು ವಂಚನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:12 IST
Last Updated 5 ಫೆಬ್ರುವರಿ 2026, 2:12 IST
<div class="paragraphs"><p>ಚಿನ್ನ&nbsp;</p></div>

ಚಿನ್ನ 

   

(ಪ್ರಾತಿನಿಧಿಕ ಚಿತ್ರ)

ಹಾವೇರಿ: ‘ಮನೆಯ ಪಾಯ ತೆಗೆಯುವ ಸಂದರ್ಭದಲ್ಲಿ ಚಿನ್ನದ ನಿಧಿ ಸಿಕ್ಕಿದೆ’ ಎಂಬುದಾಗಿ ಸುಳ್ಳು ಹೇಳಿ ನಕಲಿ ಚಿನ್ನ ಮಾರಿ ₹ 5 ಲಕ್ಷ ವಂಚನೆ ಮಾಡಿರುವ ಬಗ್ಗೆ ಬಂಕಾಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ADVERTISEMENT

‘ಮಹಾರಾಷ್ಟ್ರದ ಸತಾರ ಜಿಲ್ಲೆಯ ಕಿಂಗರ್ ಗ್ರಾಮದ ಶಂಕರ್ ಹರಿಬಾಹು ದುದಾನಿ ಎಂಬುವವರು ತಮಗಾದ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಬಂಕಾಪುರ ಪೊಲೀಸರು ಹೇಳಿದರು.

‘2025ರ ಡಿಸೆಂಬರ್ 5ರಂದು ದೂರುದಾರ ಶಂಕರ್ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ‘ನಮ್ಮ ಮನೆಯ ಪಾಯ ತೆಗೆಯುವಾಗ 4 ಕೆ.ಜಿ ಬಂಗಾರದ ಬಿಲ್ಲೆಗಳು ಸಿಕ್ಕಿವೆ. ಈಗ ನನ್ನ ಮಗಳ ಮದುವೆಯಿದೆ. ತುರ್ತಾಗಿ ಹಣ ಬೇಕಿದೆ. ಚಿನ್ನದ ಬಿಲ್ಲೆಗಳನ್ನು ನಮ್ಮೂರಿನಲ್ಲಿ ಮಾರಿದರೆ, ಜನರಿಗೆ ವಿಷಯ ಗೊತ್ತಾಗಿ ಸರ್ಕಾರಕ್ಕೆ ಜಮಾ ಆಗುತ್ತದೆ. ಅದಕ್ಕಾಗಿ ನಾವು 250 ಗ್ರಾಂ ಚಿನ್ನದ ಬಿಲ್ಲೆಗಳನ್ನು ₹ 20 ಲಕ್ಷಕ್ಕೆ ಮಾರುತ್ತಿದ್ದೇವೆ’ ಎಂದು ಹೇಳಿದ್ದರು. ಬಿಲ್ಲೆಗಳನ್ನು ನೋಡಲು ರಾಷ್ಟ್ರೀಯ ಹೆದ್ದಾರಿಯ ಬಂಕಾಪುರ ಟೋಲ್‌ಗೇಟ್‌ ಬಳಿ ಬರಲು ತಿಳಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಆರೋಪಿಗಳ ಮಾತು ನಂಬಿದ್ದ ದೂರುದಾರ ಶಂಕರ, ಡಿ. 13ರಂದು ಬಂಕಾಪುರ ಟೋಲ್‌ಗೇಟ್‌ಗೆ ಬಂದಿದ್ದರು. ಎರಡು ಅಸಲಿ ಬಿಲ್ಲೆಗಳಲ್ಲಿ ದೂರುದಾರರಿಗೆ ಕೊಟ್ಟಿದ್ದ ಆರೋಪಿಗಳು, ಪರಿಶೀಲಿಸುವಂತೆ ಹೇಳಿದ್ದರು. ಅದು ಅಸಲಿ ಎಂಬುದಾಗಿ ದೂರುದಾರ ಹೇಳಿದ್ದರು. 250 ಗ್ರಾಂ. ಚಿನ್ನದ ಬಿಲ್ಲೆಗೆ ₹ 5 ಲಕ್ಷ ಕೊಡುವುದಾಗಿ ವ್ಯವಹಾರ ಮಾಡಿದ್ದರು. ಇದಾದ ನಂತರ ಆರೋಪಿಗಳು, 250 ಗ್ರಾಮ ತೂಕದ ನಕಲಿ ಬಿಲ್ಲೆಗಳನ್ನು ನೀಡಿದ್ದರು. ನಂತರ, ಅವಸರದಲ್ಲಿಯೇ ₹ 5 ಲಕ್ಷ ಪಡೆದು ಸ್ಥಳದಿಂದ ಹೊರಟು ಹೋಗಿದ್ದಾರೆ’ ಎಂದು ಪೊಲೀಸರು ಹೇಳಿದರು.


‘ಕೆಲ ಹೊತ್ತಿನ ನಂತರ ದೂರುದಾರ ಪರಿಶೀಲನೆ ನಡೆಸಿದಾಗ, ಬಿಲ್ಲೆಗಳು ನಕಲಿ ಎಂಬುದು ಗೊತ್ತಾಗಿದೆ. ಆರೋಪಿಗೆ ಕರೆ ಮಾಡಿದಾಗ, ಮೊಬೈಲ್ ಸ್ವಿಚ್ ಆಫ್ ಬಂದಿತ್ತು. ಬಳಿಕವೇ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.