ADVERTISEMENT

ಜಮೀನು ಕಿತ್ತುಕೊಳ್ಳಲು ಯತ್ನ: ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ

ಶಾಸಕ ನೆಹರು ಓಲೇಕಾರ ಕುಟುಂಬಸ್ಥರ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 13:57 IST
Last Updated 14 ಜೂನ್ 2022, 13:57 IST
   

ಬ್ಯಾಡಗಿ: ಉಳುಮೆ ಮಾಡುತ್ತಿರುವ ಜಮೀನನ್ನು ಕಿತ್ತುಕೊಳ್ಳಲು ಹಾವೇರಿಯ ಶಾಸಕ ನೆಹರು ಓಲೇಕಾರ ಕುಟುಂಬಸ್ಥರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಹಾವೇರಿತಾಲ್ಲೂಕಿನ ಶಿಡೇನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಶಿವಾಜಿನಗರ ಕಂದಾಯ ಗ್ರಾಮದ ಪಾಂಡಪ್ಪ ಕಬ್ಬೂರು (70), ಗುರುಶಾಂತಪ್ಪ ಲಮಾಣಿ (72), ಗಂಗವ್ವ ಲಮಾಣಿ (65) ಹನುಮಂತಪ್ಪ ಬಡಿಗೇರ (41) ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು.

ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ನಾಲ್ವರನ್ನೂ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ADVERTISEMENT

ಶಿಡೇನೂರು ಗ್ರಾಮದಲ್ಲಿ 29 ಕುಟುಂಬಗಳು ಅಕ್ರಮ– ಸಕ್ರಮ ಯೋಜನೆಯಡಿ ತಲಾ 1.15 ಗುಂಟೆ ಜಮೀನು ಪಡೆದುಕೊಂಡು, ಸಾಗುವಳಿ ಮಾಡಿಕೊಂಡಿದ್ದವು. ಈ ಕುಟುಂಬಗಳು ತಲಾ 15 ಗುಂಟೆ ಜಮೀನು ಬಿಟ್ಟುಕೊಡುವಂತೆ ಶಾಸಕ ನೆಹರು ಓಲೇಕಾರ ಹಾಗೂ ಅವರ ಮಗ ಮಂಜುನಾಥ ಓಲೇಕಾರ ಒತ್ತಾಯಿಸುತ್ತಿದ್ದಾರೆ. ಜಮೀನು ಬಿಟ್ಟುಕೊಡಲು ನಿರಾಕರಿಸಿದ್ದಕ್ಕೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದು, ಬಿತ್ತನೆಗೆ ಯಾರೂ ಬರದಂತೆ ತಾಕೀತು ಮಾಡಿದ್ದಾರೆ ಎಂದು ಕೆಲ ರೈತರು ಆರೋಪಿಸಿದ್ದಾರೆ.

‘ಸರ್ಕಾರಿ ಜಮೀನನ್ನು ನನ್ನ ಅಧಿಕಾರದಲ್ಲಿದ್ದಾಗ ಮಂಜೂರಾತಿ ಮಾಡಿಕೊಟ್ಟಿದ್ದು, ನಾನು ಕೊಟ್ಟಷ್ಟು ಜಮೀನನ್ನು ತೆಗೆದುಕೊಳ್ಳಿ ಎಂದು ಶಾಸಕರ ಕುಟುಂಬದವರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಸರ್ವೆ ಮಾಡಲು ಬಂದ ಸರ್ವೆ ಅಧಿಕಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ಮನೆ ಕಟ್ಟಲಾಗುತ್ತಿದ್ದು ಹಾಗೂ ಹುಲ್ಲಿನ ಬಣವೆ ಹಾಕಿದ್ದಾರೆ’ ಎಂದು ಬ್ಯಾಡಗಿ ತಹಶೀಲ್ದಾರ್‌ ಅವರಿಗೆ ಬರೆದ ಪತ್ರದಲ್ಲಿ ರೈತರು ದೂರಿದ್ದಾರೆ.

ಶಾಸಕ ನೆಹರು ಓಲೇಕಾರ ಅವರು ತಮ್ಮ ಮೊಬೈಲ್‌ ಅನ್ನು ಸ್ವಿಚ್ ಆಫ್‌ ಮಾಡಿಕೊಂಡಿದ್ದ ಕಾರಣ, ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ಬ್ಯಾಡಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.