ADVERTISEMENT

ಹಾವೇರಿ| ವಿದ್ಯಾರ್ಥಿಗಳ 3 ತಿಂಗಳ ಕ್ಯಾಂಪ್: ರೈತರ ಸಮಸ್ಯೆ ತೆರೆದಿಟ್ಟ ‘ಕೃಷಿ ಕರಗ’

ಕೃಷಿ ಕ್ಷೇತ್ರದ ಅನುಭವ ಬಿಚ್ಚಿಟ್ಟ ಪದವೀಧರರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 3:05 IST
Last Updated 19 ಸೆಪ್ಟೆಂಬರ್ 2025, 3:05 IST
<div class="paragraphs"><p>ಹಾವೇರಿ ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ರೈತರ ಬಗ್ಗೆ ಅಧ್ಯಯನ ನಡೆಸಿದ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು</p></div>

ಹಾವೇರಿ ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ರೈತರ ಬಗ್ಗೆ ಅಧ್ಯಯನ ನಡೆಸಿದ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು

   

ಹಾವೇರಿ: ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ಮೂರು ತಿಂಗಳು ವಿಶೇಷ ಕ್ಯಾಂಪ್‌ ನಡೆಸಿರುವ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ರೈತರು ಪ್ರಸ್ತುತ ದಿನಮಾನಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ‘ನಮ್ಮ ದೇವಗಿರಿ ಕೃಷಿ ಕರಗ’ ಪ್ರದರ್ಶನದ ಮೂಲಕ ತೆರೆದಿಟ್ಟರು.

ತಾಲ್ಲೂಕಿನ ದೇವಗಿರಿ, ವರದಹಳ್ಳಿ, ನಾಗನೂರು ಹಾಗೂ ಆಲದಕಟ್ಟಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು, ಗ್ರಾಮದ ಆಯ್ದ ರೈತರ ಜಮೀನುಗಳಿಗೆ ತೆರಳಿ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಿದರು.

ADVERTISEMENT

ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಅಡಿಕೆ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆದಿರುವ ರೈತರ ಜೊತೆ ಮಾತುಕತೆ ನಡೆಸಿ, ಅವರ ಬದುಕಿನ ಎಲ್ಲ ಮಜಲುಗಳನ್ನು ತಿಳಿದುಕೊಂಡರು. ಭೂಮಿ ಹದಗೊಳಿಸುವ ಕೆಲಸದಿಂದ ಹಿಡಿದು, ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವವರೆಗಿನ ಪ್ರಕ್ರಿಯೆಯನ್ನು ರೈತರು ಎದುರಿಸುವ ಸಮಸ್ಯೆಗಳನ್ನು ದಾಖಲಿಸಿಕೊಂಡರು. ಬೆಳೆಯಲ್ಲಿ ಕಾಣಿಸಿಕೊಂಡ ರೋಗಗಳು ಹಾಗೂ ಅವುಗಳ ಪರಿಹಾರದ ಬಗ್ಗೆಯೂ ರೈತರ ಜೊತೆ ಚರ್ಚಿಸಿದರು.

ಜುಲೈ 21ರಿಂದ ಶುರುವಾಗಿದ್ದ ಮೂರು ತಿಂಗಳ ಅವಧಿಯ ವಿಶೇಷ ಕ್ಯಾಂಪ್‌ನ ಸಮಾರೋಪ ಸಮಾರಂಭವು ದೇವಗಿರಿಯಲ್ಲಿ ಗುರುವಾರ ಅರ್ಥಪೂರ್ಣವಾಗಿ ನಡೆಯಿತು. ಕ್ಯಾಂಪ್‌ ಅವಧಿಯಲ್ಲಿ ತಿಳಿದುಕೊಂಡಿದ್ದ ರೈತರ ಸಮಸ್ಯೆಗಳು, ಅದರ ಪರಿಹಾರ ಕ್ರಮಗಳು ಹಾಗೂ ಕೃಷಿ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ‘ನಮ್ಮ ದೇವಗಿರಿ ಕೃಷಿ ಕರಗ’ ಹೆಸರಿನಲ್ಲಿ ಕೃಷಿ ಪ್ರದರ್ಶನ ಆಯೋಜಿಸಿ, ರೈತರ ಮೆಚ್ಚುಗೆಗೆ ಪಾತ್ರವಾದರು.

‘ಬಿ.ಎಸ್ಸಿ ಪದವಿ ವ್ಯಾಸಂಗದ ಭಾಗವಾಗಿ ಮೂರು ತಿಂಗಳ ಕ್ಯಾಂಪ್‌ ನಡೆಸಲಾಯಿತು. ಕೃಷಿ ಬಗ್ಗೆ ಕೇವಲ ಪುಸ್ತಕದಲ್ಲಿ ಅಧ್ಯಯನ ನಡೆಸಿದ್ದ ನಮಗೆ, ಜಮೀನಿನಲ್ಲಿ ಹೊಸ ಅನುಭವವಾಯಿತು. ಪುಸ್ತಕಕ್ಕಿಂತಲೂ ವಾಸ್ತವದಲ್ಲಿ ರೈತರ ಸಮಸ್ಯೆಗಳು ಹೆಚ್ಚಿವೆ ಎಂಬುದು ತಿಳಿಯಿತು. ಕೃಷಿಯಲ್ಲಿ ಲಾಭ ಎನ್ನುವ ರೈತರಿಗಿಂತ, ನಷ್ಟ ಎನ್ನುವ ರೈತರೇ ಹೆಚ್ಚಿರುವುದು ಕಂಡುಬಂತು’ ಎಂದು ವಿದ್ಯಾರ್ಥಿನಿ ತೇಜಸ್ವಿನಿ ಹೂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರು ವಿದ್ಯಾರ್ಥಿಗಳಿಗೆ, ಒಂದು ಗ್ರಾಮ ನೀಡಲಾಗಿತ್ತು. ಗ್ರಾಮದಲ್ಲಿ ಒಬ್ಬ ವಿದ್ಯಾರ್ಥಿಗೆ ಐವರು ರೈತರ ಕೃಷಿ ಚಟುವಟಿಕೆ ಬಗ್ಗೆ ಅಧ್ಯಯನ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯು, ರೈತರ ಜೊತೆಗೆ ಬೆರೆತು ಅವರ ಎಲ್ಲ ಕೆಲಸಗಳನ್ನು ದಾಖಲಿಸಿಕೊಂಡರು. ಕೃಷಿ ಪದ್ಧತಿ, ಬೀಜ ಹಾಗೂ ಔಷಧಿ ಬಳಕೆ ಎಲ್ಲವನ್ನೂ ತಿಳಿಯಲಾಯಿತು’ ಎಂದು ಹೇಳಿದರು.

‘ಗ್ರಾಮಗಳಲ್ಲಿ ಹೆಚ್ಚಿನ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಮುಳ್ಳುಸಜ್ಜೆ, ಸೈನಿಕ ಹುಳು ಕಾಟ ವಿಪರೀತವಾಗಿದೆ. ಜೊತೆಗೆ, ತುಕ್ಕು ರೋಗವೂ ಕಾಡುತ್ತಿದೆ. ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಿ, ವಾರಕ್ಕೊಮ್ಮೆ ರೈತರನ್ನು ಒಂದೆಡೆ ಸೇರಿಸಿ ಚರ್ಚಿಸಲಾಯಿತು. ಆಧುನಿಕ ತಂತ್ರಜ್ಞಾನದ ಬಗ್ಗೆಯೂ ರೈತರಿಗೆ ತಿಳಿಸಲಾಯಿತು. ಬಹುತೇಕ ರೈತರು, ರಾಸಾಯನಿಕಗಳ ಕೃಷಿ ಮಾಡುತ್ತಿದ್ದಾರೆ. ಸಾವಯವ ವಿಧಾನದಲ್ಲಿ ಸಮಗ್ರ ಕೃಷಿ ಪದ್ಧತಿ ಬಗ್ಗೆಯೂ ಮಾಹಿತಿ ನೀಡಲಾಯಿತು. ಕೃಷಿ ವಿಜ್ಞಾನಗಳಿಂದಲೂ ಸಲಹೆ ಕೊಡಿಸಲಾಯಿತು’ ಎಂದರು.

ರೈತರ ಸಮಸ್ಯೆಗಳು ಏನು ಎಂಬುದು ನಮಗೆ ಮನವರಿಕೆಯಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಅಧ್ಯಯನ ಮುಂದುವರಿಯಲಿದೆ
ಸಚಿನ ಅನಂತಪುರ ವಿದ್ಯಾರ್ಥಿ
ಪುಸ್ತಕದಲ್ಲಿ ಓದುವುದಕ್ಕೂ ಜಮೀನಿನಲ್ಲಿ ಕೃಷಿ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂದಿನ ರೈತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಎಲ್ಲವನ್ನೂ ಹತ್ತಿರದಿಂದ ನೋಡಿದ್ದೇವೆ
ಪ್ರಜ್ಞಾ ಪಿ.ಸಿ. ವಿದ್ಯಾರ್ಥಿನಿ

‘ಲಾಭಕ್ಕಿಂತ ನಷ್ಟವೇ ಅಧಿಕ’

‘ಕೃಷಿ ಮಾಡುತ್ತಿರುವ ರೈತರು ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಅನುಭವಿಸುತ್ತಿದ್ದಾರೆ. ಸಮಗ್ರ ಕೃಷಿ ಮಾಡುತ್ತಿರುವ ರೈತರು ತಕ್ಕ ಮಟ್ಟಿಗೆ ಆದಾಯ ಪಡೆಯುತ್ತಿದ್ದಾರೆ. ಒಂದೇ ಬೆಳೆ ನೆಚ್ಚಿಕೊಂಡಿರುವ ರೈತರು ಸಾಲಗಾರರಾಗಿಯೇ ಉಳಿಯುತ್ತಿದ್ದಾರೆ’ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.

‘ಪ್ರಸಕ್ತ ಮುಂಗಾರಿನಲ್ಲಂತೂ ಜವಳು ಹೆಚ್ಚಾಗಿ ಮೆಕ್ಕೆಜೋಳ ಹಾಳಾಗಿದೆ. ಜಮೀನಿನಲ್ಲಿಯೇ ಬೆಳೆ ಒಣಗಿದ್ದು ಅದನ್ನು ನೋಡಿ ರೈತರು ಕಣ್ಣೀರಿಡುತ್ತಿದ್ದಾರೆ. ರೈತರ ಸಮಸ್ಯೆಗೆ ಪರಿಹಾರ ಯಾವಾಗ ? ಎಂಬ ಪ್ರಶ್ನೆಯೂ ನಮ್ಮನ್ನು ಕಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.