
ಹಾವೇರಿ: ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ರೈತ ದಿನಾಚರಣೆ’ ಕಾರ್ಯಕ್ರಮ, ಮೆಕ್ಕೆಜೋಳ ಖರೀದಿ ಸೇರಿದಂತೆ ವಿವಿಧ ಸಮಸ್ಯೆಗಳ ಮೂಲಕ ರೈತರ ಆಕ್ರೋಶಕ್ಕೆ ವೇದಿಕೆಯಾಯಿತು.
ಮಾಜಿ ಪ್ರಧಾನಮಂತ್ರಿಯೂ ಆಗಿದ್ದ ರೈತ ನಾಯಕ ಚೌಧರಿ ಚರಣಸಿಂಗ್ ಅವರ ಜನ್ಮದಿನದ ಸ್ಮರಣಾರ್ಥ ‘ರಾಷ್ಟ್ರೀಯ ರೈತ ದಿನಾಚರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಧಾನಸಭೆಯ ಉಪ ಸಭಾಪತಿಯೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಚೌಧರಿ ಚರಣಸಿಂಗ್ ಅವರ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ರುದ್ರಪ್ಪ ಲಮಾಣಿ, ‘ಮಳೆ ಹೆಚ್ಚಾದರೂ, ಕಡಿಮೆಯಾದರೂ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಾರಿ ಉತ್ತಮ ಬೆಳೆ ಬಂದರೂ ದರವಿಲ್ಲ. ನಾನು ಅಧಿವೇಶನದಲ್ಲಿದ್ದೆ. ಮೆಕ್ಕೆಜೋಳ ಖರೀದಿ ಸಂಬಂಧ ಜಿಲ್ಲಾಧಿಕಾರಿ ಜೊತೆ ಇಂದು ಸಭೆ ಮಾಡುತ್ತೇನೆ’ ಎಂದರು.
ಭಾಷಣಕ್ಕೆ ಅಸಮಾಧಾನ ಹೊರಹಾಕಿದ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ‘ಬರೀ ಸಭೆ ಮಾಡುತ್ತ ಹೋದರೆ ಏನು ಆಗುವುದಿಲ್ಲ. ಪ್ರಯೋಜನವೂ ಇಲ್ಲ. ನೀವು ಅಧಿವೇಶನದಲ್ಲೂ ರೈತರ ಬಗ್ಗೆ ಏನು ಮಾತನಾಡಿಲ್ಲ. ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎನ್ನುವುದು ಅದರಲ್ಲೇ ಗೊತ್ತಾಗುತ್ತದೆ. ನೀವು ಹಾವೇರಿ ಅಭಿವೃದ್ಧಿಗೂ ಏನು ಮಾಡುತ್ತಿಲ್ಲ. ರೈತರ ಹಿತಾಸಕ್ತಿಯನ್ನೂ ಕಾಯುತ್ತಿಲ್ಲ’ ಎಂದರು.
‘ಒಳ್ಳೆಯ ದರ ಸಿಗುವ ವಿಶ್ವಾಸದಿಂದ ಹುರುಳಿಕುಪ್ಪಿ ಬಳಿ ರೈತರು ಮೆಕ್ಕೆಜೋಳದ ರಾಶಿ ಮಾಡಿ ಕಾಯುತ್ತಿದ್ದರು. ಆದರೆ, ಬೆಂಕಿಯಿಂದ ಎಲ್ಲ ಮೆಕ್ಕೆಜೋಳ ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದಕ್ಕೆ ಸರ್ಕಾರವೇ ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರತಿ ಹೋಬಳಿಯಲ್ಲೂ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು. ಶಿಕಾರಿಪುರ, ಧಾರವಾಡ ಹಾಗೂ ಬೇರೆ ಕಡೆ ಹೋಗಿ ಮೆಕ್ಕೆಜೋಳ ನೀಡಲು ರೈತರಿಗೆ ಆಗುವುದಿಲ್ಲ. ಹಾವೇರಿ ಜಿಲ್ಲೆಯಲ್ಲಿಯೇ ಮೆಕ್ಕೆಜೋಳ ಖರೀದಿಸಬೇಕು. ಹಾವು ಕಡಿದು ಹಾಗೂ ಯಂತ್ರದಲ್ಲಿ ಸಿಲುಕಿ ಮೃತಪಟ್ಟ ಕೃಷಿ ಕಾರ್ಮಿಕರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಶಿವಯೋಗಿ ಹೊಸಗೌಡ್ರ, ‘ಜಿಲ್ಲೆಯಲ್ಲಿ 2.80 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಇದರಲ್ಲಿ 1.80 ಲಕ್ಷ ಪಂಪ್‌ಸೆಟ್‌ಗಳು ಅಕ್ರಮವಾಗಿದೆ. ಇವುಗಳನ್ನು ಸಕ್ರಮಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ತಂತಿ ಕತ್ತರಿಸಲು ಬಂದರೆ, ಲೈನ್‌ಮನ್ ಕಟ್ಟಿಹಾಕುವ ಪ್ರಸಂಗ ಬರದಂತೆ ನೋಡಿಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ರುದ್ರಪ್ಪ ಲಮಾಣಿ, ‘ಎಲ್ಲ ಸಮಸ್ಯೆ ಗಮನದಲ್ಲಿದೆ. ನಾನು ಅಧಿವೇಶನದಲ್ಲಿ ಇದ್ದಿದ್ದರಿಂದ, ಎಲ್ಲ ಮಾಹಿತಿ ಗೊತ್ತಾಗಿಲ್ಲ. ಜಿಲ್ಲಾಧಿಕಾರಿ ಜೊತೆ ಸಭೆ ಮಾಡಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸುವೆ’ ಎಂದು ಹೇಳಿದರು. ‘ಜಿಲ್ಲಾಧಿಕಾರಿಗಳ ಸಭೆಗೆ ತಡವಾಗುತ್ತದೆ’ ಎಂದು ಹೇಳಿ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರಟರು.
ನಂತರ, ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ’ ಎಂದು ಆರೋಪಿಸಿ ಬಿಜೆಪಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.