ADVERTISEMENT

ಹಾವೇರಿ ಬಂದ್‌ಗೆ ರೈತಸಂಘ ಕರೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 14:45 IST
Last Updated 23 ಸೆಪ್ಟೆಂಬರ್ 2020, 14:45 IST
ರಾಮಣ್ಣ ಕೆಂಚಳ್ಳೇರ
ರಾಮಣ್ಣ ಕೆಂಚಳ್ಳೇರ   

ಹಾವೇರಿ: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್‌ ಕಾಯ್ದೆ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದನ್ನು ವಿರೋಧಿಸಿ ಸೆ.25ರಂದು ‘ಹಾವೇರಿ ಬಂದ್‌’ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.

‌ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಾದ್ಯಂತ ಸೆ.25ರಂದು ‘ಭಾರತ್‌ ಬಂದ್’‌ಗೆ ರೈತ ಸಂಘಟನೆಗಳು ಕರೆ ನೀಡಿವೆ. ಇದರ ಅಂಗವಾಗಿ ಹಾವೇರಿಯಲ್ಲಿ ಬೃಹತ್‌ ಪ್ರತಿಭಟನೆ ಮತ್ತು ರಸ್ತೆ ತಡೆ ಚಳವಳಿ ಮಾಡಲಾಗುವುದು.ಈ ಬಂದ್‌ ಅನ್ನು ಯಶಸ್ವಿಗೊಳಿಸಲು ಎಲ್ಲ ಸಂಘ–ಸಂಸ್ಥೆಗಳು, ವ್ಯಾಪಾರಸ್ಥರು, ಕಾರ್ಮಿಕರು, ವಿದ್ಯಾರ್ಥಿಗಳು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕವಾಗಿದೆ. ಬಡ ರೈತರು ಭೂಮಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಐದು ಮಂದಿ ಕುಟುಂಬದ ಸದಸ್ಯರು ದೇಶದ ಯಾವುದೇ ಭಾಗದಲ್ಲಿ 437 ಎಕರೆ ಜಮೀನು ಖರೀದಿಸಬಹುದು ಎಂಬ ಅಂಶ ಮಸೂದೆಯಲ್ಲಿದೆ. ಇದು ಕಾರ್ಪೊರೆಟ್‌ ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ವರದಾನವಾಗುತ್ತದೆ. ಹಾಗಾಗಿ ರೈತರಿಗೆ ಮಾರಕವಾಗುವ ಈ ಮೂರು ವಿಧೇಯಕಕ್ಕೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕಬಾರದು ಎಂದು ಒತ್ತಾಯಿಸಿದರು.

ADVERTISEMENT

ವಿದ್ಯುತ್‌ ವಲಯ ಖಾಸಗೀಕರಣದಿಂದ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಹಾಕಿ, ಬಿಲ್‌ ವಸೂಲಿ ಮಾಡುವ ಹುನ್ನಾರವಿದೆ. ಇದರಿಂದ ರೈತರು ಕೃಷಿಯಿಂದ ವಿಮುಖರಾಗಿ, ಖಾಸಗಿಯವರ ಒಡೆತನದಲ್ಲಿ ಸಿಲುಕುತ್ತಾರೆ. ದೇಶದ ಜನರಿಗೆ ಅನ್ನ ನೀಡುವ ರೈತ ಬೀದಿಗೆ ಬೀಳಲಿದ್ದಾನೆ. ಪ್ರಗತಿಪರ ಚಿಂತಕರು, ರೈತ ಮುಖಂಡರು, ಬುದ್ಧಿಜೀವಿಗಳ ಜತೆ ಚರ್ಚಿಸಿ ಮಸೂದೆಯನ್ನು ಜಾರಿಗೆ ತರದೆ, ತರಾತುರಿಯಲ್ಲಿ ಕೇಂದ್ರ ಜಾರಿಗೊಳಿಸಲು ಹೊರಟಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಭುಗೌಡ ಪ್ಯಾಟಿ, ಮರಿಗೌಡ ಪಾಟೀಲ, ದೀಪಕ್‌ ಗಂಟಿಸಿದ್ದಪ್ಪನವರ, ದಿಳ್ಳಪ್ಪ ಮಣ್ಣೂರು ಮುಂತಾದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.