ADVERTISEMENT

ಜೂನ್‌ 20ರಿಂದ ಉಪವಾಸ ಸತ್ಯಾಗ್ರಹ

ನಾರಾಯಣ ಗುರು ನಿಗಮ ಮಂಡಳಿಗೆ ಒತ್ತಾಯ: ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಮೇ 2022, 13:18 IST
Last Updated 14 ಮೇ 2022, 13:18 IST
ಪ್ರಣವಾನಂದ ಸ್ವಾಮೀಜಿ 
ಪ್ರಣವಾನಂದ ಸ್ವಾಮೀಜಿ    

ಹಾವೇರಿ:ಈಡಿಗ ಸಮಾಜದ ಅಭಿವೃದ್ಧಿಗಾಗಿಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಮಂಡಳಿ ಸ್ಥಾಪನೆ ಹಾಗೂ ಸಮಾಜದ ಕುಲಕಸುಬು ಸೇಂದಿ ಇಳಿಸಿ ಮಾರಾಟಕ್ಕೆ ಅವಕಾಶ ನೀಡಲು ಒತ್ತಾಯಿಸಿ ಜೂನ್‌ 20ರಂದು ಕಲಬುರಗಿಯಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅರೇಮಲ್ಲಾಪುರ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಅವರು ಮಾತನಾಡಿ, ‘ರಾಜ್ಯದಲ್ಲಿ ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿರುವ ಈಡಿಗ ಸಮಾಜ ನಿರಂತರ ಅನ್ಯಾಯಕ್ಕೆ ಒಳಗಾಗಿದ್ದು, ಸರ್ಕಾರ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಈ ಬಗ್ಗೆ ಸಮಾಜದಲ್ಲಿ ಪಾದಯಾತ್ರೆ ಹಮ್ಮಿಕೊಂಡು ಜನಜಾಗೃತಿ ಮೂಡಿಸುವ ಜೊತೆಗೆ ಹಲವಾರು ಬಾರಿ ಸರ್ಕಾರದ ಗಮನಕ್ಕೂ ತರಲಾಗಿದೆ. ಆದರೂ ಕೂಡ ನಮ್ಮ ಬೇಡಿಕೆಗಳಿಗೆ ಇದುವರೆಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

21ರಂದು ಹೆದ್ದಾರಿ ತಡೆ:

ADVERTISEMENT

ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಹೋರಾಟವಾಗಿ ಜೂನ್‌ 20ರಂದು ಕಲಬುರಗಿಯಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಇದಕ್ಕೂ ಸ್ಪಂದಿಸದಿದ್ದರೇ ಜೂನ್‌ 21ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಹಿಂದುಳಿದ ಸಮಾಜದವರು ನಡೆಸುವ ಹೋರಾಟವನ್ನು ನಿರಂತರವಾಗಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈಡಿಗ ಸಮಾಜದ ಕುಲಕಸುಬು ಸೇಂದಿ ಇಳಿಸುವುದಕ್ಕೆ ಸರ್ಕಾರ ಅವಕಾಶ ನೀಡದೇ ನಮ್ಮ ಕುಲಕಸುಬನ್ನು ಕಿತ್ತುಕೊಂಡಿದ್ದು, ಇದುವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಸಮಾಜವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು.

ಸಚಿವರಿಂದ ಸಿಗದ ಸ್ಪಂದನೆ:

ರಾಜ್ಯದ ಸುಮಾರು 17 ವಿಧಾಸಭಾ ಕ್ಷೇತ್ರಗಳಲ್ಲಿ ಈಡಿಗ ಸಮಾಜ ನಿರ್ಣಾಯಕ ಪಾತ್ರ ವಹಿಸಲಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸಮಾಜದ ಶಾಸಕರು, ಸಚಿವರು ಇದ್ದರೂ ಸಮಾಜದ ಅಭಿವೃದ್ಧಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಕಾರ್ಯಕ್ಕೂ ಮುಂದಾಗಿಲ್ಲ. ಇದನ್ನು ಸಮಾಜದ ಜನರು ಅರಿತುಕೊಳ್ಳಬೇಕು ಎಂದರು.

ಪಾದಯಾತ್ರೆ:

ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬದ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಧಾಮದಿಂದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದವರೆಗೆ ಹಾಗೂ ಸಿಗಂಧೂರು ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿ, ಸಮಾಜದ ಜನರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೋಹಿತ್ ಈಳಗೇರ, ಮುತ್ತಣ್ಣ ಈಳಗೇರ, ಮಾರುತಿ ಈಳಗೇರ, ಪರಶುರಾಮ ಈಳಗೇರ ಇದ್ದರು.

**

ಮಠಗಳು ಭಕ್ತರ ದೇಣಿಗೆಯಿಂದ ಬೆಳೆಯಬೇಕೇ ಹೊರತು ಸರ್ಕಾರದ ಅನುದಾನದಿಂದ ನಡೆಯಬಾರದು. ಭಕ್ತರ ಸಮರ್ಪಣಾ ಭಾವವೇ ಮಠದ ಆಸ್ತಿ
– ಪ್ರಣವಾನಂದ ಸ್ವಾಮೀಜಿ, ಅರೇಮಲ್ಲಾಪುರ ಶರಣಬಸವೇಶ್ವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.