ADVERTISEMENT

ಉಪವಾಸ ಸತ್ಯಾಗ್ರಹ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 16:01 IST
Last Updated 2 ಡಿಸೆಂಬರ್ 2020, 16:01 IST
ಬಿ.ಡಿ.ಹಿರೇಮಠ, ಸಾಮಾಜಿಕ ಹೋರಾಟಗಾರ
ಬಿ.ಡಿ.ಹಿರೇಮಠ, ಸಾಮಾಜಿಕ ಹೋರಾಟಗಾರ   

ಹಾವೇರಿ: ‘ಉಡಗಣಿ–ತಾಳಗುಂದ–ಹೊಸೂರು ನೀರಾವರಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ’ ವತಿಯಿಂದ ಡಿ.3ರಿಂದ ರಟ್ಟೀಹಳ್ಳಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ವಿವಿಧ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರ ಜಮೀನುಗಳಲ್ಲಿ ನಡೆಸುತ್ತಿರುವ ಪೈಪ್‌ಲೈನ್‌ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಪಕ್ಕದಲ್ಲೇ ಇರುವ ಸರ್ಕಾರಿ ಭೂಮಿಯಲ್ಲಿ ಪೈಪ್‌ಲೈನ್‌ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಪೈಪ್‌ಲೈನ್‌ ಮತ್ತು ಸರ್ವಿಸ್‌ ರಸ್ತೆಗಾಗಿ ಭೂಸ್ವಾಧೀನ ವಿರೋಧಿಸಿ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮತ್ತು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು, ರೈತರ ಹಿತವನ್ನು ಅಧಿಕಾರಿಗಳು ಮರೆತಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಾವೇರಿಯಲ್ಲಿ ನಡೆದ ಸಭೆಯೂ ಫಲಪ್ರದವಾಗಲಿಲ್ಲ. ಹೀಗಾಗಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದೇವೆ. ಅಗತ್ಯಬಿದ್ದರೆ ಆಮರಣಾಂತ ಉಪವಾಸ ಕೈಗೊಳ್ಳುತ್ತೇವೆ’ ಎಂದರು.

ADVERTISEMENT

ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಕೊಡಬೇಕಾದ ಪರಿಹಾರ ಮೊತ್ತ ಅಂದಾಜು ₹200 ಕೋಟಿ. ಈ ಪರಿಹಾರವನ್ನು ಮೊದಲು ರೈತರಿಗೆ ನೀಡಬೇಕು. ಈಗ ನಡೆಸುತ್ತಿರುವ ನೀರಾವರಿ ಯೋಜನೆಯಿಂದಶಿಕಾರಿಪುರ ತಾಲ್ಲೂಕಿನ 180 ಕೆರೆಗಳಿಗೆ ಅನುಕೂಲವಾದರೆ, ನಮ್ಮ ಜಿಲ್ಲೆಯ ಎರಡು ಕೆರೆಗಳು ಮಾತ್ರ ತುಂಬುತ್ತವೆ. ಹೀಗಾಗಿ ರೈತರ ಜಮೀನಿನಲ್ಲಿ ಪೈಪ್‌ಲೈನ್‌ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ರಂಗಪ್ಪ ಬಡಪ್ಪಳವರ, ರಾಜಶೇಖರ ಪಾಟೀಲ, ವಿನಯ ಪಾಟೀಲ, ರವಿಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.