ಹಾವೇರಿ: ‘ಹಲವು ರಾಷ್ಟ್ರಗಳು ಶಸ್ತ್ರ ಹಿಡಿದು ಸ್ವಾತಂತ್ರ್ಯ ತಂದು ಕೊಟ್ಟಿದ್ದರೆ, ಮಹಾತ್ಮ ಗಾಂಧಿ ಅವರು ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಗಾಂಧಿ ಪ್ರತಿಮೆಗಳನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ, ಸಂರಕ್ಷಿಸಬೇಕು ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ.ಮಹೇಶ ನಾಲವಾಡ ಒತ್ತಾಯಿಸಿದರು.
ನಗರದ ಎಂ.ಜಿ ರಸ್ತೆಯ ಗಾಂಧಿ ವೃತ್ತದಲ್ಲಿ ಮಂಗಳವಾರ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಒಂದು ದಿನದ ‘ಉಪವಾಸ ಸಂಕಲ್ಪ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿಯವರ 76ನೇ ಪುಣ್ಯಸ್ಮರಣೆಯ ವರ್ಷ ಇದು. 108 ದೇಶಗಳಲ್ಲಿ ಗಾಂಧಿ ಪ್ರತಿಮೆಗಳಿವೆ. ಅವರ ಬಗ್ಗೆ 502 ಪುಸ್ತಕಗಳಿವೆ. ಜಗತ್ತಿನಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಹೊಂದಿರುವ ವ್ಯಕ್ತಿ ಗಾಂಧೀಜಿ. ಗಾಂಧಿ ಪ್ರತಿಮೆಗಳನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ, ಸಂರಕ್ಷಿಸುವ ಕಾರ್ಯವಾಗಬೇಕು ಎಂದರು.
ಐತಿಹಾಸಿಕ ನಗರ ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಏಲಕ್ಕಿ ಕಂಪು ಮತ್ತೆ ಸೂಸಬೇಕು. ಈ ನಿಟ್ಟಿನಲ್ಲಿ ವಿವಿಧ ಹೋರಾಟ, ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಉಪವಾಸ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪಂಚ ನದಿಗಳು ಹರಿಯುವ ಜಿಲ್ಲೆ ಇದು. ಸಂಪದ್ಭರಿತ ಭೂಮಿ ಇದೆ. ಬ್ರಾಡ್‌ಗೇಜ್ ಲೈನ್, ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. 453 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರ್ದೈವ. ಇಲ್ಲಿನ ಸಂಪತ್ತು ಬಳಸಿಕೊಂಡು ಸಮಗ್ರ ಅಭಿವೃದ್ಧಿ ಹೊಂದುವಂತೆ ಮಾಡಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಅದಕ್ಕಾಗಿ ಗಾಂಧೀಜಿಯವರ ಉಪವಾಸ ಆಯುಧ ಬಳಸುತ್ತಿದ್ದೇನೆ ಎಂದು ತಿಳಿಸಿದರು.
ಗಾಂಧೀಜಿ ಎರಡು ಸಲ ಹಾವೇರಿ ಜಿಲ್ಲೆಗೆ ಬಂದು ಹೋಗಿದ್ದಾರೆ. ಜಿಲ್ಲೆಯ ಸುಮಾರು 10 ಸ್ವಾತಂತ್ರ್ಯ ಹೋರಾಟಗಾರರು ಪ್ರಾಣತ್ಯಾಗ ಮಾಡಿದ್ದಾರೆ. ಗಾಂಧೀಜಿಯವರ ಚಿತಾಭಸ್ಮ ಸಂಗೂರಿನಲ್ಲಿದೆ. ಆ ಸ್ಥಳದ ಸಮಗ್ರ ಅಭಿವೃದ್ಧಿಯಾಗಬೇಕಿದೆ ಎಂದು ಹೇಳಿದರು.
ಗಾಂಧಿ ಪ್ರತಿಮೆಗೆ ‘ಕನ್ನಡಕ’ ಅಳವಡಿಕೆ
‘ಹಾವೇರಿ ನಗರದ ಗಾಂಧಿ ವೃತ್ತ ಹಾಗೂ ಮುನ್ಸಿಪಲ್ ಹೈಸ್ಕೂಲ್‍ನಲ್ಲಿ ಇರುವ ಗಾಂಧಿ ಪ್ರತಿಮೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮುನ್ಸಿಪಲ್ ಶಾಲೆಯ ಗಾಂಧಿ ಪ್ರತಿಮೆ ಎದುರು ನಿತ್ಯ ಮದ್ಯಪಾನ ಮಾಡುತ್ತಿದ್ದಾರೆ. ಎರಡೂ ಪ್ರತಿಮೆಗಳಿಗೆ ಕನ್ನಡಕ ಹಾಕಲಾಗಿಲ್ಲ. ಕನಿಷ್ಠ ಸ್ವಚ್ಛತೆಯನ್ನೂ ನಗರಸಭೆಯವರು ಮಾಡಿಲ್ಲ. ಆ ಕೆಲಸವನ್ನು ನಾವು ಮಾಡಿದ್ದೇವೆ. ಕನ್ನಡಕ ತೊಡಿಸಿ ಅವರ ಸ್ಮರಣಾರ್ಥ ಭಜನೆ ಮತ್ತು ಸಂಕಲ್ಪದ ಉಪವಾಸ ಕೈಗೊಳ್ಳಲಾಗಿದೆ’ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ.ಮಹೇಶ ನಾಲವಾಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.