ADVERTISEMENT

ಕೋವಿಡ್‌ ಆರೈಕೆ ಕೇಂದ್ರಕ್ಕೆ ಸೌಲಭ್ಯ: ಸಚಿವ ಬಸವರಾಜ ಬೊಮ್ಮಾಯಿ

ಔಷಧ ಉಚಿತ ವಿತರಣೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಮೇ 2021, 3:59 IST
Last Updated 19 ಮೇ 2021, 3:59 IST
ಶಿಗ್ಗಾವಿ ಪಟ್ಟಣದಲ್ಲಿ ಸೋಮವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಮನೆಯಲ್ಲಿನ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿಗ್ಗಾವಿ ಪಟ್ಟಣದಲ್ಲಿ ಸೋಮವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಮನೆಯಲ್ಲಿನ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಶಿಗ್ಗಾವಿ: ಇದು ಆಸ್ಪತ್ರೆಯಲ್ಲ, ಮನೆ ಎಂದು ಭಾವಿಸಿ. ಇಲ್ಲಿ ವೈದ್ಯರು ನಿಮ್ಮ ಆರೋಗ್ಯ ವಿಚಾರಣೆ ಮಾಡುತ್ತಾರೆ. ಸೋಂಕಿತರಿಗೆ ಮಾತ್ರೆ ನೀಡುತ್ತಾರೆ. ಆಮ್ಲಜನಕ ವ್ಯವಸ್ಥೆ ಇದೆ. ಸಮಯಕ್ಕೆ ಸರಿಯಾಗಿ ಊಟ, ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ನಿಶ್ಚಿಂತೆಯಿಂದ ಗುಣಮುಖರಾಗಿ ಮನೆಗೆ ತೆರಳಿರಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೋವಿಡ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

ಪಟ್ಟಣದಲ್ಲಿ ಸೋಮವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಮನೆ ಆವರಣದಲ್ಲಿ ನಿರ್ಮಿಸಿರುವ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಸದ್ಯಕ್ಕೆ 15 ಜನ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ ಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗುತ್ತದೆ. ಹಣ್ಣು ಹಂಪಲು ನೀಡಲಾಗುತ್ತದೆ. ಶುಚಿತ್ವಕ್ಕೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಖಾಸಗಿ ವೈದ್ಯರು ಸೋಂಕಿತರ ತಪಾಸಣೆಗೆ ಬರುತ್ತಾರೆ. ಅಲ್ಲದೆ ಸರ್ಕಾರಿ ವೈದ್ಯರಿಗೂ ಸಹ ಬರುವಂತೆ ಮನವಿ ಮಾಡಿದ್ದೇನೆ. ಅವರು ಕೂಡ ಇಲ್ಲಿಗೆ ಭೇಟಿ ನೀಡಿ ವೈದ್ಯೋಪಚಾರ ನೀಡುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ನರ್ಸ್‌ಗಳು ಇಲ್ಲಿ ಕೆಲಸ ನಿರ್ವಹಿಸುತ್ತಾರೆ. ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಸೋಂಕಿತರಿಗೆ ಮಾತ್ರೆ ಮತ್ತು ಔಷಧಿಯನ್ನು ನೀಡಲಾಗುತ್ತಿದೆ. ಹಾಗಾಗಿ ಕೋವಿಡ್ ಸೋಂಕಿತರಿಗೆ ಇಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ ಎಂದರು.

ADVERTISEMENT

ಮುಂದಿನ ದಿನಗಳಲ್ಲಿ ಎದುರಾಗಬಹುದಾದ 3ನೇ ಅಲೆಯನ್ನು ಎದುರಿಸಲು ನಾವು ಈಗಲೇ ಸಜ್ಜಾಗಬೇಕಾಗಿದೆ. ಹೀಗಾಗಿ ಆಕ್ಸಿಜನ್ ಜನರೇಟರ್‌ಗಳನ್ನು ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಶಿಗ್ಗಾವಿ, ಹಾನಗಲ್, ಹಾವೇರಿ ತಾಲ್ಲೂಕಿನಲ್ಲಿ ಸರ್ಕಾರದ ವತಿಯಿಂದ ಆಕ್ಸಿಜನ್ ಜನರೇಟರ್ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ. ಹಿರೇಕೆರೂರು ಮತ್ತು ಬ್ಯಾಡಗಿಯಲ್ಲಿ ಆಕ್ಸಿಜನ್ ಜನರೇಟರ್ ಸ್ಥಾಪಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸವಣೂರು ಮತ್ತು ರಾಣೆಬೆನ್ನೂರಿನಲ್ಲಿ ಸಿಎಸ್‌ಆರ್ ಫಂಡ್‌ನಲ್ಲಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಹಾವೇರಿ ಜಿಲ್ಲೆಗೆ ಈಗ 6.5 ಮೆಟ್ರಿಕ್‌ ಟನ್ ಆಕ್ಸಿಜನ್ ಸರಬರಾಜಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ ಇದನ್ನು ಪೂರೈಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.

ಎಂಎಲ್‌ಸಿ ಪ್ರದೀಪ್ ಶೆಟ್ಟರ್, ಮಾಜಿ ಸಂಸದ ಮಂಜುನಾಥ ಕುನ್ನೂರ, ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣವರ, ಎಸಿ ಅನ್ನಪೂರ್ಣ ಮುದಕ್ಕಮ್ಮನವರ, ಎಸ್ಪಿ ಕೆ.ದೇವರಾಜ್, ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.