ADVERTISEMENT

ಗೊಬ್ಬರ ಅಭಾವ: ಕನವಳ್ಳಿ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 3:53 IST
Last Updated 20 ಜುಲೈ 2025, 3:53 IST
ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕಚೇರಿ ಎದುರು ಶನಿವಾರ ಸೇರಿದ್ದ ರೈತರು
ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕಚೇರಿ ಎದುರು ಶನಿವಾರ ಸೇರಿದ್ದ ರೈತರು   

ಹಾವೇರಿ: ತಾಲ್ಲೂಕಿನ ಕನವಳ್ಳಿ ಗ್ರಾಮದಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ಸೂಕ್ತ ಪ್ರಮಾಣದಲ್ಲಿ ಗೊಬ್ಬರ ನೀಡದಿದ್ದಕ್ಕೆ ಕೃಷಿ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು.

ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ (ಸೊಸೈಟಿ) ಕಚೇರಿ ಎದುರು ಶನಿವಾರ ಸೇರಿದ್ದ ರೈತರು, ಗೊಬ್ಬರ ಕೊರತೆಯಾಗಿದ್ದನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ರೈತರು ಹಾಗೂ ಸೊಸೈಟಿ ಸಿಬ್ಬಂದಿ ನಡುವೆ ಪರಸ್ಪರ ಮಾತಿನ ಚಕಮಕಿಯೂ ನಡೆಯಿತು.

‘ತಾಲ್ಲೂಕಿನಲ್ಲಿ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮೆಕ್ಕೆಜೋಳ, ಹತ್ತಿ, ಶೇಂಗಾ, ಸೋಯಾಬೀನ್ ಬೆಳೆಗಳ ಬೆಳವಣಿಗೆ ಕ್ಷೀಣಿಸುತ್ತಿವೆ. ಅವುಗಳಿಗೆ ಗೊಬ್ಬರ ಹಾಕಲಿಕ್ಕೆ ಯೂರಿಯಾ ಅಗತ್ಯವಿದೆ. ಗೊಬ್ಬರ ಹಾಕದಿದ್ದರೆ, ಬೆಳೆಗಳು ಕ್ಷೀಣಿಸುವ ಆತಂಕವಿದೆ. ಈ ಸಂದರ್ಭದಲ್ಲಿ ಗೊಬ್ಬರದ ಅಗತ್ಯವಿದೆ. ಆದರೆ, ಸರ್ಕಾರದವರು ಸೂಕ್ತ ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಮಾಡುತ್ತಿಲ್ಲವೆಂದು ಸೊಸೈಟಿಯವರು ಹೇಳುತ್ತಿದ್ದಾರೆ’ ಎಂದು ರೈತರು ಹೇಳಿದರು.

ADVERTISEMENT

‘ಕನವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿದೆ. ಜಮೀನುಗಳಿಗೆ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಗೊಬ್ಬರ ನೀಡುವುದಾಗಿ ಸೊಸೈಟಿಯವರು ಹೇಳುತ್ತಿದ್ದಾರೆ. ಕಡಿಮೆ ಪ್ರಮಾಣದಲ್ಲಿ ಗೊಬ್ಬರ ನೀಡಿದರೆ, ಅದನ್ನು ಹೇಗೆ ಬಳಸುವುದು. ಅಗತ್ಯವಿರುವಷ್ಟು ಗೊಬ್ಬರ ನೀಡಬೇಕು’ ಎಂದು ರೈತರು ಆಗ್ರಹಿಸಿದರು.

15 ಟನ್ ಗೊಬ್ಬರ ಪೂರೈಕೆ: ಗೊಬ್ಬರ ದಾಸ್ತಾನು ಬಗ್ಗೆ ಮಾಹಿತಿ ನೀಡಿದ ಸೊಸೈಟಿ ಸಿಬ್ಬಂದಿ, ‘ಕೃಷಿ ಇಲಾಖೆ ಅಧಿಕಾರಿಗಳು ಕೇವಲ 15 ಟನ್ ಗೊಬ್ಬರ ಪೂರೈಕೆ ಮಾಡಿದ್ದಾರೆ. ಆದರೆ, ರೈತರ ಸಂಖ್ಯೆ ಹೆಚ್ಚಿದೆ. ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯೂ ಇದೆ’ ಎಂದರು.

‘ಕೇವಲ 15 ಟನ್ ಗೊಬ್ಬರ ಯಾವುದಕ್ಕೂ ಸಾಕಾಗುವುದಿಲ್ಲ. ಕನವಳ್ಳಿ ಗ್ರಾಮದಲ್ಲಿ ಹೆಚ್ಚು ರೈತರಿದ್ದರು, ಒಬ್ಬರಿಗೆ ಒಂದು ಚೀಲ ಕೊಟ್ಟರೆ ಉಪಯೋಗವಾಗುವುದಿಲ್ಲ. ಹೀಗಾಗಿ, ರೈತರ ಬೇಡಿಕೆಗೆ ತಕ್ಕಂತೆ ಯೂರಿಯಾ ಗೊಬ್ಬರ ಒದಗಿಸುವಂತೆಯೂ ಅಧಿಕಾರಿಗಳನ್ನು ಕೋರಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.