ಹಾವೇರಿ: ಗಣೇಶೋತ್ಸವದ ಅಂಗವಾಗಿ ಪಟಾಕಿ ಸಂಗ್ರಹ ಹಾಗೂ ಮಾರಾಟ ಮಾಡಲು ಸ್ಥಳಗಳನ್ನು ನಿಗದಿಗೊಳಿಸಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
‘ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಿಸಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಟಾಕಿಗಳಿಗೆ ಬೇಡಿಕೆ ಬರಲಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪಟಾಕಿಗಳ ಮಾರಾಟಕ್ಕೆ ಸ್ಥಳ ನಿಗದಿಗೊಳಿಸಲಾಗಿದೆ. ಪರವಾನಗಿದಾರರು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
‘ಆಗಸ್ಟ್ 23ರಿಂದ ಸೆಪ್ಟೆಂಬರ್ 8ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನ, ಗುತ್ತಲದ ಖುಲ್ಲಾ ಜಾಗ, ಹೊಸರಿತ್ತಿಯ ಗ್ರಾಮ ಪಂಚಾಯತಿ ಜಾಗ, ರಾಣೆಬೆನ್ನೂರು ತಾಲ್ಲೂಕು ಕ್ರೀಡಾಂಗಣ, ಮೇಡ್ಲೇರಿ–ಹಲಗೇರಿಯ ಬಯಲು ಜಾಗ, ಅರೇಮಲ್ಲಾಪುರದ ಖುಲ್ಲಾ ಜಾಗ, ಬ್ಯಾಡಗಿಯ ಜಗದ್ಗುರು ಜಯದೇವ ತಾಲ್ಲೂಕು ಕ್ರೀಡಾಂಗಣ, ಹಿರೇಕೆರೂರಿನ ಪೊಲೀಸ್ ಮೈದಾನದ ಬಯಲು ಪ್ರದೇಶ, ಚಿಕ್ಕೇರೂರಿನ ಖುಲ್ಲಾ ಜಾಗ, ಹಂಸಬಾವಿಯ ಖುಲ್ಲಾ ಜಾಗ, ರಟ್ಟೀಹಳ್ಳಿಯ ಖುಲ್ಲಾ ಜಾಗ, ಮಾಸೂರಿನ ಖುಲ್ಲಾ ಜಾಗ, ಹಿರೇಮೊರಬ ಗ್ರಾಮದ ಖುಲ್ಲಾ ಜಾಗದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ’ ಎಂದು ಉಲ್ಲೇಖಿಸಿದ್ದಾರೆ.
‘ಶಿಗ್ಗಾವಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಯಲು ಜಾಗ, ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಪ್ರದೇಶ, ಹುಲಗೂರು ಗ್ರಾಮದ ಪಂಚಾಯಿತಿಯ ಖುಲ್ಲಾ ಜಾಗ, ಸವಣೂರು ತಾಲ್ಲೂಕು ಕ್ರೀಡಾಂಗಣ, ಹಾನಗಲ್ ತಾಲ್ಲೂಕು ಕ್ರೀಡಾಂಗಣ, ಅಕ್ಕಿಆಲೂರಿನ ಗ್ರಾಮ ಪಂಚಾಯಿತಿ ಖುಲ್ಲಾ ಜಾಗದಲ್ಲಿ ಮದ್ದು ಸಂಗ್ರಹ ಹಾಗೂ ಮಾರಾಟ ಮಾಡಬಹುದು. ಈ ಆದೇಶ ಉಲ್ಲಂಘಿಸಿದರೆ, ಪಟಾಕಿ ಪರವಾನಗಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
‘ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಪರವಾನಿಗೆ ಪಡೆದ ಮಾರಾಟಗಾರರು ಕೇವಲ ಹಸಿರು ಪಟಾಕಿಗಳನ್ನು ತಾತ್ಕಾಲಿಕ ಶೆಡ್‌ಗಳಲ್ಲಿಟ್ಟು ಮಾರಬೇಕು. ಅಗ್ನಿಶಾಮಕ ದಳದ ನಿರ್ದೇಶನದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಪರವಾನಗಿದಾರರು ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯಿಂದಲೇ ಪ್ರತ್ಯೇಕ ಅನುಮತಿ ಹಾಗೂ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.