ಹಾವೇರಿ: ಅದು 1961ರ ಸಮಯ. ವರದಾ ನದಿ ತುಂಬಿ ಹರಿದಿತ್ತು. ಪ್ರವಾಹಕ್ಕೆ ಸಿಲುಕಿ ಗ್ರಾಮಕ್ಕೆ ಗ್ರಾಮವೇ ಮುಳುಗಡೆಯಾಗಿ, ಸೂರುಗಳು ನೆಲಸಮಗೊಂಡವು. ಅಗತ್ಯ ವಸ್ತುಗಳು ತೇಲಿಹೋದವು. ದಿಕ್ಕು ತೋಚದಂತಾದ ಜನರನ್ನು ರಕ್ಷಿಸಿದ್ದ ಸರ್ಕಾರದ ಅಧಿಕಾರಿಗಳು, ಶಾಶ್ವತ ಜಾಗವೊಂದರಲ್ಲಿ ಪುನರ್ ವಸತಿ ಕಲ್ಪಿಸಿದರು. ವಾಸಕ್ಕೆ ಬೇಕಾದ ಜಾಗ, ಭಾವಿ, ಕೈ ಬೋರ್, ಶಾಲೆಯನ್ನೂ ಕಟ್ಟಿಸಿಕೊಟ್ಟರು. ಆದರೆ, ತಾಂತ್ರಿಕ ಕಾರಣ ನೀಡಿ ಭೂಮಿ ಹಕ್ಕು ನೀಡಲಿಲ್ಲ. ಅದೇ ಜಾಗದಲ್ಲಿ ವಾಸವಿರುವ ನೆರೆ ಸಂತ್ರಸ್ತರು ತಮ್ಮ ‘ಭೂಮಿ ಹಕ್ಕಿ’ಗಾಗಿ 64 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಿರೇಹುಳ್ಯಾಳಕ್ಕೆ ಹೊಂದಿಕೊಂಡಿರುವ ಲಕಮಾಪುರ (ಮ) ಆಡೂರು ಗ್ರಾಮದಲ್ಲಿರುವ 73 ನೆರೆ ಸಂತ್ರಸ್ತ ಕುಟುಂಬಗಳ ‘ಭೂಮಿ ಹಕ್ಕು’ ಹೋರಾಟದ ವ್ಯಥೆಯಿದು. ಪ್ರವಾಹ ಬಂದ ಸಂದರ್ಭದಲ್ಲಷ್ಟೇ ಮೇಲ್ನೋಟಕ್ಕೆ ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಸರ್ಕಾರಗಳು, ದಿನ ಕಳೆದಂತೆ ಸಂತ್ರಸ್ತರನ್ನು ಮರೆಯುತ್ತವೆ ಎಂಬುದಕ್ಕೆ ಈ ಗ್ರಾಮದ ಸ್ಥಿತಿಯೇ ಕೈಗನ್ನಡಿಯಾಗಿದೆ.
ಜಿಲ್ಲಾ ಕೇಂದ್ರ ಹಾವೇರಿಯಿಂದ 24 ಕಿ.ಮೀ. ಹಾಗೂ ತಾಲ್ಲೂಕು ಕೇಂದ್ರ ಹಾನಗಲ್‌ನಿಂದ 18 ಕಿ.ಮೀ. ದೂರದಲ್ಲಿರುವ ಲಕಮಾಪುರ, ವರದಾ ನದಿ ತುಂಬಿ ಹರಿದರೆ ನಡುಗಡ್ಡೆಯಾಗುತ್ತದೆ. ಊರಿನ ಮೂರು ದಿಕ್ಕಿನಲ್ಲೂ ತಿರುವು ಪಡೆಯುತ್ತ ವರದಾ ನದಿ ಹರಿಯುತ್ತಿದ್ದು, ಪ್ರತಿ ವರ್ಷವೂ ಪ್ರವಾಹದ ಆತಂಕ ಇದ್ದೇ ಇರುತ್ತದೆ. ನದಿಯಲ್ಲಿ ನೀರು ಹೆಚ್ಚಾದರೆ, ಈ ಗ್ರಾಮದ ಜನರನ್ನು ಸಮೀಪದ ಹಿರೇಹುಳ್ಯಾಳ ಗ್ರಾಮದಲ್ಲಿ ತೆರೆಯುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ.
ನದಿಯಲ್ಲಿ ನೀರು ಹೆಚ್ಚಾದರೆ ಊರು ಬಿಡುವುದು ಹಾಗೂ ನೀರು ಕಡಿಮೆಯಾದಾಗ ಊರಿಗೆ ವಾಪಸು ಬರುವುದೇ ಇಲ್ಲಿಯ ಜನರ ಪ್ರತಿ ವರ್ಷದ ಗೋಳಾಗಿದೆ. 1961ರ ಪ್ರವಾಹದ ವೇಳೆ ಸೂರು ಕಳೆದುಕೊಂಡಿದ್ದ ಲಕಮಾಪುರದ 73 ಕುಟುಂಬಗಳಿಗೆ, ಹಿರೇಹುಳ್ಯಾಳದಲ್ಲಿರುವ ಸರ್ವೇ ನಂಬರ್ 226–227ರಲ್ಲಿ ಜಾಗ ಹಂಚಿಕೆ ಮಾಡಲಾಗಿದೆ. ಆದರೆ, ಈ ಜಾಗಕ್ಕೆ ಮಾಲೀಕತ್ವದ ಹಕ್ಕು ನೀಡಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ನೆರೆ ಸಂತ್ರಸ್ತರ 10 ಕುಟುಂಬಗಳು ಮಾತ್ರ ಈ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿವೆ. ಮಾಲೀಕತ್ವದ ದಾಖಲೆ ಇಲ್ಲವೆಂಬ ಕಾರಣಕ್ಕೆ ಉಳಿದ ಕುಟುಂಬಗಳು, ಜಾಗಕ್ಕೆ ಬರಲು ಹಿಂದೇಟು ಹಾಕುತ್ತಿವೆ.
ಮನೆ ಕಟ್ಟಿ ವಾಸವಿರುವ ನೆರೆ ಸಂತ್ರಸ್ತರು, ಮಾಲೀಕತ್ವದ ಹಕ್ಕು ಇಲ್ಲದಿದ್ದರಿಂದ ತಮ್ಮ ಮನೆಯನ್ನು ಸರ್ಕಾರ ಯಾವಾಗ ಬೇಕಾದರೂ ತೆರವು ಮಾಡಬಹುದೆಂಬ ಆತಂಕದಲ್ಲಿದ್ದಾರೆ. ತಮ್ಮ ಜಾಗ ಹಾಗೂ ಮನೆ ಉಳಿಸಿಕೊಂಡು ಭೂಮಿ ಹಕ್ಕು ಪಡೆಯುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
‘ನದಿಯಲ್ಲಿ ನೀರು ಹೆಚ್ಚಾದರೆ, ಲಕಮಾಪುರ ನಡುಗಡ್ಡೆಯಾಗುತ್ತದೆ. ವರ್ಷ ಬಿಟ್ಟು ವರ್ಷ ನೀರು ಹೆಚ್ಚು ಬಂದರೆ, ಕಾಳಜಿ ಕೇಂದ್ರವೇ ಗತಿಯಾಗುತ್ತದೆ. ನೆರೆ ಹಾವಳಿಯಿಂದ ಗ್ರಾಮಸ್ಥರು ತೊಂದರೆ ಅನುಭವಿಸಬಾರದೆಂದು ಸರ್ಕಾರ, 1969–70ರಲ್ಲಿ ಹಿರೇಹುಳ್ಯಾಳ ಬಳಿ 24 ಎಕರೆ ಜಾಗ ನೀಡಿದೆ. 73 ಕುಟುಂಬಗಳಿಗೆ ಪ್ಲಾಟ್ ಹಸ್ತಾಂತರ ಮಾಡಿದೆ. ಆದರೆ, ನಮಗೆ ಇದುವರೆಗೂ ಮಾಲೀಕತ್ವದ ಹಕ್ಕಿನ ದಾಖಲೆ ನೀಡಿಲ್ಲ. ಇದಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ’ ಎಂದು ಹಿರೇಹುಳ್ಯಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿರುವ ನೆರೆ ಸಂತ್ರಸ್ತ ಕುಟುಂಬದ ಮೈಲಾರಪ್ಪ ಗುಡ್ಡಪ್ಪ ಕರೆಣ್ಣನವರ ಅಳಲು ತೋಡಿಕೊಂಡರು.
‘ನಮ್ಮ ಕುಟುಂಬದವರು 1961ರಲ್ಲಿ ಪ್ರವಾಹದಿಂದ ಸೂರು ಕಳೆದುಕೊಂಡರು. ಊರಿನ ಎಲ್ಲರನ್ನೂ ಹಿರೇಹುಲ್ಯಾಳ ಗ್ರಾಮ ಬಳಿಯ 24 ಎಕರೆ ಜಾಗಕ್ಕೆ ಸ್ಥಳಾಂತರಿಸಲಾಯಿತು. ಲಕಮಾಪುರದಲ್ಲಿ ಪ್ರತಿ ವರ್ಷವೂ ನೀರಿನ ಆತಂಕ ಇರುವುದರಿಂದ, ಹಿರೇಹುಳ್ಯಾಳ ಗ್ರಾಮದ ಜಾಗದಲ್ಲಿ ಕಾಯಂ ಆಗಿ ನೆಲೆಸುವಂತೆ ಸರ್ಕಾರ ಹೇಳಿತ್ತು. ನಮ್ಮ ಹಿರಿಯರು ಇಲ್ಲೇ ಕೆಲ ವರ್ಷ ನೆಲೆಸಿದ್ದರು. ಸರ್ಕಾರವೇ ಭಾವಿ, ಕೈ ಬೋರ್, ಶಾಲೆ ಕಟ್ಟಿಸಿಕೊಂಡಿತ್ತು’ ಎಂದು ಹೇಳಿದರು.
‘24 ಎಕರೆ ಜಾಗವು ಸರ್ಕಾರದ ಹೆಸರಿನಲ್ಲಿತ್ತು. ಜಾಗವು ಹಿರಿಯರಿಗೆ ಹಸ್ತಾಂತರವಾದರೂ ಅದರ ದಾಖಲೆಗಳು ವರ್ಗಾವಣೆ ಆಗಿರಲಿಲ್ಲ. ಇದರಿಂದ ಆತಂಕಗೊಂಡ ಹಲವರು, ನೀರು ಕಡಿಮೆಯಾದ ನಂತರ ಪುನಃ ಲಕಮಾಪುರಕ್ಕೆ ಹೋದರು. ಪಾಳುಬಿದ್ದ ಮನೆಗಳನ್ನೇ ಸರಿಪಡಿಸಿಕೊಂಡು ವಾಸವಾದರು. 2019ರಿಂದ 2021ರವರೆಗಿನ ಅವಧಿಯಲ್ಲಿ ಪುನಃ ಪ್ರವಾಹ ಸ್ಥಿತಿ ಬಂತು. ಅವಾಗಲೂ ಹಿರೇಹುಳ್ಯಾಳದ ಕಾಳಜಿ ಕೇಂದ್ರದಲ್ಲೇ ಸ್ವಲ್ಪ ದಿನ ವಾಸವಿದ್ದರು. ಹೀಗೆ... ಪ್ರತಿ ವರ್ಷವೂ ನೆರೆ ಬಂದಾಗಲೆಲ್ಲ ಕಾಳಜಿ ಕೇಂದ್ರವೇ ಗತಿಯಾಗುತ್ತಿದೆ. ಸರ್ಕಾರದಿಂದ ಜಾಗ ಹಸ್ತಾಂತರವಾದರೂ, ಮಾಲೀಕತ್ವದ ಹಕ್ಕಿನ ದಾಖಲೆಗಳು ಇರದಿದ್ದರಿಂದ ಆತಂಕದಲ್ಲಿದ್ದೇವೆ. ಸರ್ಕಾರದ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದೇವೆ’ ಎಂದು ತಿಳಿಸಿದರು.
ಊರಿಗೆ ಊರೇ ಖಾಲಿ: ‘ಮಲೆನಾಡು ಸೆರಗಿನಲ್ಲಿರುವ ಲಕಮಾಪುರ, ವರದಾ ನದಿಯ ದಡದಲ್ಲಿರುವ ಗ್ರಾಮ. ವರದಾ ನದಿ ತುಂಬಿ ಹರಿದರೆ, ಬಾಳಂಬೀಡ–ಲಕಮಾಪುರ ಹಾಗೂ ಲಕಮಾಪುರ–ಹಿರೇಹುಳ್ಯಾಳ ರಸ್ತೆ ಬಂದ್ ಆಗುತ್ತದೆ. ಹಿರೇಹುಳ್ಯಾಳ ರಸ್ತೆ ಬಂದ್ ಆಗುವ ಮುನ್ನವೇ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಬೇಕು. ನದಿಯಲ್ಲಿ ನೀರು ಹೆಚ್ಚಾಗುವುದನ್ನು ನೋಡಲೆಂದೇ ಇಬ್ಬರು, ಹಿರೇಹುಳ್ಯಾಳ ಬಳಿ ಬೀಡು ಬಿಡುತ್ತಾರೆ. ನೀರು ಹೆಚ್ಚಾದರೆ, ಗ್ರಾಮಕ್ಕೆ ಸುದ್ದಿ ಮುಟ್ಟಿಸುತ್ತಾರೆ’ ಎಂದು ವೃದ್ಧ ತಿರಕಪ್ಪ ಚಿಕ್ಕಜ್ಜನವರ ಹೇಳಿದರು.
‘1961ರಲ್ಲಿ ನನಗೆ ಐದು ವರ್ಷ ವಯಸ್ಸು. ಪ್ರವಾಹ ಬಂದು ಊರು ಮುಳುಗಡೆಯಾಗಿತ್ತು. ಊರಿನ ಜನರೆಲ್ಲರೂ ಹಿರೇಹುಳ್ಯಾಳದಲ್ಲಿರುವ ಸರ್ಕಾರದ ಜಾಗಕ್ಕೆ ಬಂದೆವು. ಪ್ರವಾಹದಿಂದ ಎಲ್ಲವೂ ಕೊಚ್ಚಿಕೊಂಡು ಹೋಗಿದ್ದರಿಂದ, ವಾಪಸು ಲಕಮಾಪುರಕ್ಕೆ ಹೋಗುವ ಸ್ಥಿತಿ ಇರಲಿಲ್ಲ. ಅಂದಿನ ಸರ್ಕರ ನಮಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿತು. ಈ ಜಾಗದಲ್ಲಿ ಶಾಲೆ ಆರಂಭಿಸಿತು. ನಾನು ಅದೇ ಶಾಲೆಯಲ್ಲಿ 1ನೇ ತರಗತಿಯಿಂದ 4ನೇ ತರಗತಿಯವರೆಗೆ ಓದಿದೆ’ ಎಂದು ತಿರಕಪ್ಪ ಅವರು ಅಂದಿನ ದಿನಗಳನ್ನು ನೆನೆದರು.
‘24 ಎಕರೆಯಲ್ಲಿ ತಲಾ ಮೂರು–ಮೂರುವರೆ ಗುಂಟೆಯನ್ನು ನೆರೆ ಸಂತ್ರಸ್ತರ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿತ್ತು. ಹಕ್ಕು ಪತ್ರ ನೀಡುವುದಾಗಿ ಸರ್ಕಾರ ಹೇಳಿತ್ತು. ಅನಕ್ಷರಸ್ಥರಾಗಿದ್ದ ಹಿರಿಯರು, ದಾಖಲೆಗಳ ಬಗ್ಗೆ ಹೆಚ್ಚು ತಲೆಕೆಡೆಸಿಕೊಳ್ಳಲಿಲ್ಲ. ಒಮ್ಮೆ ಗುಡಿಸಲಿಗೆ ಬೆಂಕಿ ಬಿದ್ದು ಇಬ್ಬರು ಮೃತಪಟ್ಟರು. ಅದೇ ಸಂದರ್ಭದಲ್ಲಿ ಮನೆಯ ದಾಖಲೆಗಳ ಬಗ್ಗೆ ಜನರಿಗೆ ಅರಿವಾಯಿತು. ದಾಖಲೆ ಕೇಳಿದಾಗ ಪಂಚಾಯಿತಿಯವರು ಕೊಡಲಿಲ್ಲ. ಹೀಗಾಗಿ, ಹಲವರು ಈ ಜಾಗ ತೊರೆದು ಲಕಮಾಪುರಕ್ಕೆ ಹೋದರು. ನಾನು ಸೇರಿ 10 ಕುಟುಂಬಗಳು ಮಾತ್ರ ಇದೇ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದೇವೆ. ನಮಗಾದರೂ ಹಕ್ಕು ಪತ್ರ ನೀಡುವಂತೆ ಹೋರಾಟ ಆರಂಭಿಸಿದ್ದೇವೆ’ ಎಂದು ಹೇಳಿದರು.
₹ 5 ಲಕ್ಷ ಮಂಜೂರು: 2019ರಿಂದ 2021ರವರೆಗಿನ ಅವಧಿಯಲ್ಲಿ ನಿರಂತರವಾಗಿ ವರದಾ ನದಿ ತುಂಬಿ ಹರಿದು, ಲಕಮಾಪುರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಈ ಸಂದರ್ಭದಲ್ಲಿ ಕುಸಿದುಬಿದ್ದ ಮನೆಗಳ ಮರು ನಿರ್ಮಾಣಕ್ಕೆ ಅಂದಿನ ಸರ್ಕಾರ ತಲಾ ₹ 5 ಲಕ್ಷ ಮಂಜೂರು ಮಾಡಿತ್ತು. ಇದೇ ಹಣದಲ್ಲಿ ಹಲವರು ಲಕಮಾಪುರದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಹೀಗಾಗಿ, ಮಾಲೀಕತ್ವದ ದಾಖಲೆ ಇಲ್ಲದ ಹಿರೇಹುಳ್ಯಾಳ ಗ್ರಾಮದ ಜಾಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಕುಟುಂಬಗಳ ವಿಸ್ತರಣೆ: ‘1961ರಲ್ಲಿ 73 ಹಿರಿಯರ ಹೆಸರಿನಲ್ಲಿ ಹಿರೇಹುಳ್ಯಾಳದ ಜಾಗದಲ್ಲಿ ಪ್ಲಾಟ್‌ಗಳು ಹಂಚಿಕೆಯಾಗಿವೆ. 73 ಹಿರಿಯರ ಕುಟುಂಬಗಳು ಈಗ ವಿಸ್ತರಣೆಯಾಗಿವೆ. ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಬಂದಿದ್ದಾರೆ. ಹಿರಿಯರ ವಂಶವೃಕ್ಷದ ದಾಖಲೆಗಳ ಕೊರತೆಯೂ ಪ್ಲಾಟ್‌ಗಳ ಮರು ಹಂಚಿಕೆಗೆ ಅಡ್ಡಿಯಾಗುತ್ತಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು.
ಜಾಗದ ಹಕ್ಕುಪತ್ರ ಹಾಗೂ ಇ–ಸ್ವತ್ತು ನೀಡುವಂತೆ ಕಂದಾಯ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲಾಧಿಕಾರಿ... ಎಲ್ಲರಿಗೂ ಮನವಿ ನೀಡಿದ್ದೇವೆ. ನ್ಯಾಯಕ್ಕಾಗಿ ಕಾಯುತ್ತಿದ್ದೇವೆಮೈಲಾರಪ್ಪ ಗುಡ್ಡಪ್ಪ ಕರೆಣ್ಣನವರ ಹಿರೇಹುಳ್ಯಾಳ ಗ್ರಾ.ಪಂ. ಅಧ್ಯಕ್ಷ
24 ಎಕರೆ ಜಾಗದಲ್ಲಿ ಪ್ಲಾಟ್ ಹಂಚಿಕೆ ಮಾಡಿದರೂ ನಮಗೆ ಹಕ್ಕು ಪತ್ರ ಹಾಗೂ ಇ–ಸ್ವತ್ತು ನೀಡುತ್ತಿಲ್ಲ. ಹೀಗಾಗಿ ಜಾಗ ತೊರೆದಿದ್ದೇವೆ. ಲಕಮಾಪುರದಲ್ಲಿಯೇ ವಾಸವಿದ್ದೇವೆಬಿದ್ಯಾಡಪ್ಪ ಕರೆಣ್ಣನವರ ಲಕಮಾಪುರ ವೃದ್ಧ
ಸರ್ಕಾರಿ ಜಾಗದಲ್ಲಿರುವ ಲಕಮಾಪುರದ ನೆರೆ ಸಂತ್ರಸ್ತರಿಗೆ ಇ–ಸ್ವತ್ತು ಸಿಗದೇ ಸಂಕಷ್ಟದಲ್ಲಿರುವುದು ಗಮನದಲ್ಲಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ
‘ಕಂದಾಯ ಗ್ರಾಮದಡಿ ಹಕ್ಕು ಪತ್ರ’
‘ನೆರೆ ಸಂತ್ರಸ್ತರಿಗೆ ಹಂಚಿಕೆಯಾಗಿರುವ ಹಿರೇಹುಲ್ಯಾಳದ ಸರ್ವೇ ನಂಬರ್ 226–227ರ ಜಾಗವನ್ನು ಕಂದಾಯ ಗ್ರಾಮವೆಂದು ಘೋಷಣೆ ಮಾಡಲು ತಯಾರಿ ನಡೆದಿದೆ’ ಎಂದು ತಾಲ್ಲೂಕು ಆಡಳಿತ ಅಧಿಕಾರಿಯೊಬ್ಬರು ಹೇಳಿದರು. ‘ಗ್ರಾಮ ಪಂಚಾಯಿತಿ ಪಿಡಿಒ ಕಡೆಯಿಂದ ಪರಿಶೀಲನೆ ನಡೆಸಿ ಸರ್ವೇ ಸಹ ಮಾಡಲಾಗಿದೆ. ಹಕ್ಕು ಪತ್ರ ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೂ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಹಕ್ಕು ಪತ್ರದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದು ತಿಳಿಸಿದರು.
ಲಕಮಾಪುರ ಹಸ್ತಾಂತರಕ್ಕೆ ವಿರೋಧ
‘ಮೂಲ ಊರು ಬಿಟ್ಟು ಹಿರೇಹುಳ್ಯಾಳ ಹೋಗಲು ಲಕಮಾಪುರದ ಹಲವು ಹಿರಿಯರು ಒಪ್ಪುತ್ತಿಲ್ಲ. ಜೊತೆಗೆ ಹಿರೇಹುಳ್ಯಾಳದ ಜಾಗವನ್ನು ಹುಲ್ಲುಗಾವಲು ಮಾಡಬೇಕೆಂದು ಕೆಲವರು ಪ್ರಯತ್ನ ಆರಂಭಿಸಿದ್ದಾರೆ. ಇದರಿಂದಾಗಿ ಜಾಗ ಹಸ್ತಾಂತರ ಪ್ರಕ್ರಿಯೆಗೆ ಹಲವರು ಅಡ್ಡಿಪಡಿಸುತ್ತಿದ್ದಾರೆ’ ಎಂದು ನೆರೆ ಸಂತ್ರಸ್ತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.