ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬಹುತೇಕ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿದ್ದು, ಜನರು ರಸ್ತೆಯಲ್ಲಿಯೇ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಪಕ್ಕ– ಪಕ್ಕದ ಮಳಿಗೆ ಮಾಲೀಕರು ಹಾಗೂ ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿಕೊಂಡಿದ್ದು, ಅದನ್ನು ತೆರವು ಮಾಡಬೇಕಾದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು– ಪೊಲೀಸರು ಮೌನವಾಗಿದ್ದಾರೆ.
ಹಾವೇರಿ ನಗರದ ಬಸ್ ನಿಲ್ದಾಣ, ಮಾರುಕಟ್ಟೆ, ಹಳೇ ಪಿ.ಬಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿತ್ಯವೂ ಸಾವಿರಾರು ಜನರು ಓಡಾಡುತ್ತಿದ್ದಾರೆ. ಇಂಥ ಜನರ ಓಡಾಟಕ್ಕೆ ಅನುಕೂಲವಾಗಲೆಂದು ಪ್ರತಿಯೊಂದು ರಸ್ತೆಯ ಅಕ್ಕ–ಪಕ್ಕದಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ, ಪಾದಚಾರಿ ಮಾರ್ಗಗಳು ವ್ಯಾಪಾರದ ಸ್ಥಳವಾಗಿ ಮಾರ್ಪಟ್ಟಿವೆ.
ನಗರದ ಗುತ್ತಲ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗಿನ ರಸ್ತೆಯ ಎರಡೂ ಬದಿಯಲ್ಲೂ ಪಾದಚಾರಿ ಮಾರ್ಗವಿದೆ. ಈ ಸ್ಥಳವನ್ನು ಹಣ್ಣು, ದಿನಸಿ ಹಾಗೂ ಇತರೆ ವಸ್ತುಗಳ ಮಾರಾಟಗಾರರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ರಸ್ತೆಯಲ್ಲಿ ನಿತ್ಯವೂ ವಾಹನಗಳ ಸಂಚಾರವಿರುತ್ತದೆ. ಪಾದಚಾರಿ ಮಾರ್ಗದಲ್ಲಿ ಓಡಾಡಲು ಜಾಗವಿಲ್ಲದಿದ್ದರಿಂದ, ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ.
ರಸ್ತೆಯಲ್ಲಿ ಜನರು ತೆರಳುವ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಹಲವರು ಗಾಯಗೊಂಡಿರುವ ಪ್ರಕರಣಗಳೂ ನಡೆದಿವೆ. ಜೊತೆಗೆ, ರಸ್ತೆಗೆ ಬಂದ ಪಾದಚಾರಿಗಳ ವಿರುದ್ಧ ಕೆಲ ಚಾಲಕರು ಹರಿಹಾಯ್ದ ಪ್ರಸಂಗಗಳು ವರದಿಯಾಗಿವೆ.
ರಸ್ತೆಯ ಎರಡೂ ಬದಿಯಲ್ಲಿ ಕಾಲುವೆಗಳಿವೆ. ಪಾದಚಾರಿಗಳ ಸಂಚಾರಕ್ಕೆಂದು ಕಾಲುವೆ ಮೇಲೆಯೇ ಕಲ್ಲುಗಳನ್ನು ಹಾಕಿ ಪಾದಚಾರಿ ಮಾರ್ಗವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆದರೆ, ನಿಗದಿತ ಉದ್ದೇಶಕ್ಕೆ ಪಾದಚಾರಿ ಮಾರ್ಗ ಬಳಕೆಯಾಗುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.
ಹಾನಗಲ್ ರಸ್ತೆ, ಗುತ್ತಲ ರಸ್ತೆ, ಎಂಜಿ. ರಸ್ತೆ, ಮುನ್ಸಿಪಲ್ ಮೈದಾನ ರಸ್ತೆ, ಸುಭಾಷ್ ವೃತ್ತ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿರುವುದು ಕಂಡುಬರುತ್ತಿದೆ. ಇದೇ ಮಾರ್ಗದಲ್ಲಿ ಆಗಾಗ ನಗರಸಭೆ ಅಧಿಕಾರಿಗಳು, ಪೊಲೀಸರು ಹಾಗೂ ಜನಪ್ರತಿನಿಧಿಗಳು ತಮ್ಮ ಕಾರಿನಲ್ಲಿ ಓಡಾಡುತ್ತಾರೆ. ಅವರ‍್ಯಾರೂ ಪಾದಚಾರಿ ಮಾರ್ಗದ ಬಗ್ಗೆ ಗಮನಹರಿಸುತ್ತಿಲ್ಲವೆಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
‘ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿರುವ ಹಾವೇರಿ, ಸಾಕಷ್ಟು ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದೆ. ವಾಹನಗಳ ಸಂಚಾರಕ್ಕೆ ಕೆಲವು ಕಡೆ ಮಾತ್ರ ಸುಸಜ್ಜಿತ ರಸ್ತೆಗಳಿವೆ. ಉಳಿದಂತೆ ಎಲ್ಲ ಕಡೆಯೂ ರಸ್ತೆಗಳು ಹಾಳಾಗಿವೆ. ಇದರ ಜೊತೆಯಲ್ಲಿ, ಪಾದಚಾರಿ ಮಾರ್ಗಗಳ ಒತ್ತುವರಿಯೂ ಹೆಚ್ಚಾಗಿದೆ’ ಎಂದು ಕಾಗಿನೆಲೆ ರಸ್ತೆ ನಿವಾಸಿ ರಾಚಯ್ಯ ಗಿಡ್ಡಪ್ಪನವರ ದೂರಿದರು.
‘ಹಾವೇರಿಯ ರಸ್ತೆಗಳಲ್ಲಿ ಸುತ್ತಾಡಿದರೆ, ಎಲ್ಲಿಯೂ ಪಾದಚಾರಿ ಮಾರ್ಗ ಸಮರ್ಪಕವಾಗಿಲ್ಲ. ಜಿದ್ದಿಗೆ ಬಿದ್ದವರ ರೀತಿಯಲ್ಲಿ ಎಲ್ಲರೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಗೊತ್ತಿದ್ದರೂ ಅಧಿಕಾರಿಗಳು ಹಾಗೂ ಪೊಲೀಸರು ಮೌನವಾಗಿದ್ದಾರೆ. ಕಾರಿನಲ್ಲಿ ಓಡಾಡುವ ಅಧಿಕಾರಿಗಳು ಹಾಗೂ ಪೊಲೀಸರಿಗೆ, ಪಾದಚಾರಿಗಳ ಗೋಳು ಹೇಗೆ ಅರ್ಥವಾಗುತ್ತದೆ’ ಎಂದು ಅವರು ಕಿಡಿಕಾರಿದರು.
ಅಂಗಡಿ–ಮಳಿಗೆ ಮಾಲೀಕರಿಂದಲೇ ಒತ್ತುವರಿ: ರಸ್ತೆಯ ಅಕ್ಕ–ಪಕ್ಕದಲ್ಲಿರುವ ಅಂಗಡಿ–ಮಳಿಗೆಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಇವುಗಳ ಮಾಲೀಕರು, ತಮ್ಮ ಅಂಗಡಿ–ಮಳಿಗೆ ಎದುರಿನ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದಾಗಿ ಜನರು ದೂರುತ್ತಿದ್ದಾರೆ.
‘ಅಂಗಡಿ–ಮಳಿಗೆ ಎದುರಿನ ಜಾಗ, ತಮ್ಮದೆಂಬಂತೆ ಮಾಲೀಕರು ವರ್ತಿಸುತ್ತಿದ್ದಾರೆ. ಪಾದಚಾರಿ ಮಾರ್ಗದ ಮೇಲೆಯೇ ವಸ್ತುಗಳನ್ನು ಇರಿಸಿ ಮಾರುತ್ತಿದ್ದಾರೆ. ಈ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುವ ಜನರು, ಅನಿವಾರ್ಯವಾಗಿ ರಸ್ತೆಯಲ್ಲಿ ಹೋಗಬೇಕಾಗಿದೆ. ಒತ್ತುವರಿ ಪ್ರಶ್ನೆ ಮಾಡುವ ಜನರ ಜೊತೆಗೆಯೇ ವ್ಯಾಪಾರಿಗಳು ಜಗಳ ಮಾಡುತ್ತಿದ್ದಾರೆ’ ಎಂದು ಶಿವಾಜಿನಗರ ನಿವಾಸಿ ಚಂದ್ರಪ್ಪ ಹೇಳಿದರು.
‘ತರಕಾರಿ ಮಾರಾಟ ಅಂಗಡಿಯೊಂದರ ಮಾಲೀಕರು, ಪಾದಚಾರಿ ಮಾರ್ಗದಲ್ಲಿ ಹಲವು ವಸ್ತುಗಳನ್ನು ಇರಿಸಿದ್ದರು. ಇದರಿಂದ ಜನರ ಓಡಾಟಕ್ಕೆ ಅಡ್ಡಿಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ನಮ್ಮ ಮೇಲೆಯೇ ಹರಿಹಾಯ್ದರು. ಅಂಗಡಿ ಎದುರು ಪಾದಚಾರಿ ಮಾರ್ಗವೇ ಇಲ್ಲದಂತಾಗಿದೆ. ನಗರಸಭೆ ಅದಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.
ಬೀದಿಬದಿ ವ್ಯಾಪಾರಿಗಳಿಂದ ಒತ್ತುವರಿ: ಹಾವೇರಿ ನಗರದ ಬಹುತೇಕ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಬೀದಿಬದಿ ವ್ಯಾಪಾರಿಗಳು, ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹಣ್ಣು, ಹೂವು, ಬಟ್ಟೆ, ದಿನಸಿ ಹಾಗೂ ಇತರೆ ವಸ್ತುಗಳನ್ನು ಮಾರುತ್ತಿದ್ದಾರೆ. ಎಗ್‌ರೈಸ್, ಗೂಡಂಗಡಿ, ಹೋಟೆಲ್ ಹಾಗೂ ಇತರರು ಸಹ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡಿದ್ದಾರೆ.
‘ಪಾದಚಾರಿ ಮಾರ್ಗದ ತುಂಬೆಲ್ಲ ಬೀದಿಬದಿ ವ್ಯಾಪಾರಿಗಳು, ವ್ಯಾಪಾರ ಮಾಡುತ್ತಿದ್ದಾರೆ. ಈ ಸ್ಥಳದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನರು ರಸ್ತೆ ಮೇಲೆ ಓಡಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿಯೇ ಅಪಘಾತಗಳಾಗಿ, ಪಾದಚಾರಿಗಳು ಗಾಯಗೊಳ್ಳುತ್ತಿದ್ದಾರೆ’ ಎಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ಮಹಿಳೆ ಶಂಕ್ರಮ್ಮ ಹೊಸಮನಿ ಹೇಳಿದರು.
‘ಬಸ್ ನಿಲ್ದಾಣದಲ್ಲಿ ಇಳಿದು ನಡೆದುಕೊಂಡು ಜಿಲ್ಲಾಸ್ಪತ್ರೆಗೆ ಹೋಗಿಬರುತ್ತೇನೆ. ಆದರೆ, ರಸ್ತೆ ಎರಡೂ ಬದಿಯಲ್ಲಿಯೂ ಪಾದಚಾರಿ ಮಾರ್ಗ ಒತ್ತುವರಿ ಆಗಿದೆ. ಓಡಾಡಲು ಜಾಗವಿಲ್ಲ. ಅನಿವಾರ್ಯವಾಗಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾಗಿದೆ. ಇಂಥ ಸಂದರ್ಭದಲ್ಲಿ ವಾಹನಗಳು ಮೈ ಮೇಲೆಯೇ ಬರುತ್ತವೆ. ಅಪಘಾತದ ಭಯವೂ ಇದೆ’ ಎಂದು ತಿಳಿಸಿದರು.
ವೃದ್ಧರು– ಮಕ್ಕಳ ಪ್ರಯಾಸ: ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಬ್ಯಾಡಗಿ, ಶಿಗ್ಗಾವಿ, ಬ್ಯಾಡಗಿ ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಆಗಿದೆ. ಇಂಥ ರಸ್ತೆಗಳಲ್ಲಿ ಸಂಚರಿಸಲು ವೃದ್ಧರು ಹಾಗೂ ಮಕ್ಕಳು ನಿತ್ಯವೂ ಪ್ರಯಾಸ ಪಡುತ್ತಿದ್ದಾರೆ.
‘ಯುವಕರು ಹಾಗೂ ದೊಡ್ಡವರು, ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಆದರೆ, ವೃದ್ಧರು–ಮಕ್ಕಳು ಹೇಗೆ ಓಡಾಡುವುದು. ಅವರ ಜೀವಕ್ಕೆ ಅಪಾಯ ಹೆಚ್ಚು’ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ವಾಹನ ನಿಲುಗಡೆ: ರಸ್ತೆಯ ಕೆಲ ಪಾದಚಾರಿ ಮಾರ್ಗಗಳನ್ನು ವಾಹನ ನಿಲುಗಡೆಗೆ ಬಳಸಲಾಗುತ್ತಿದೆ. ಗ್ಯಾರೇಜ್ ಇರುವ ಸ್ಥಳಗಳಲ್ಲಿಯೂ ಪಾದಚಾರಿ ಮಾರ್ಗದಲ್ಲಿ ಹಳೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ರಾಣೆಬೆನ್ನೂರಿನಲ್ಲೂ ಒತ್ತುವರಿ: ಜಿಲ್ಲೆಯ ವಾಣಿಜ್ಯ ನಗರಿ ಎನಿಸಿಕೊಂಡಿರುವ ರಾಣೆಬೆನ್ನೂರಿನಲ್ಲಿಯೂ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ನಗರದ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ವ್ಯಾಪಾರಸ್ಥರು ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದಾಗಿ ಪಾದಚಾರಿಗಳ ಓಡಾಟಕ್ಕೆ ಅಡ್ಡಿ ಉಂಟಾಗಿದೆ.
ಮೇಡ್ಲೇರಿ ರಸ್ತೆಯ ಡಾ. ಪುನೀತ್ ರಾಜಕುಮಾರ ವೃತ್ತದಿಂದ ಅಂಚೆ ಕಚೇರಿ ವೃತ್ತದವರೆಗೆ ಕಬ್ಬಿನ ಹಾಲು, ಪಾದರಕ್ಷೆ ಅಂಗಡಿ, ಹಣ್ಣಿನ ವ್ಯಾಪಾರಸ್ಥರು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದಾರೆ.
ಎಂ.ಜಿ. ರಸ್ತೆಯಿಂದ ಟಾಂಗಾಕೂಟ, ಚತುರ್ಮುಖಿ ದೇವಸ್ಥಾನದ ಬಳಿ ದುರ್ಗಾ ವೃತ್ತದಲ್ಲಿಯೂ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಬಟ್ಟೆ ಅಂಗಡಿಯವರು ಪಾದಚಾರಿ ಮಾರ್ಗದಲ್ಲಿ ಸೀರೆ ನೇತು ಹಾಕಿದ್ದಾರೆ. ಬೇರೆ ಅಂಗಡಿಯವರು ತಮ್ಮ ನಾಮಫಲಕ ಇರಿಸಿದ್ದಾರೆ. ಕೆಲವರು ಅಂಗಡಿ ಎದುರು ಅಕ್ರಮವಾಗಿ ಕಬ್ಬಿಣದ ಗ್ರಿಲ್ ಮಾಡಿಸಿದ್ದು, ಜನರು ಓಡಾಡದಂತೆ ಸ್ಥಿತಿಯಿದೆ.
ನಗರಸಭೆ ಪೌರಾಯುಕ್ತರು ಇತ್ತೀಚೆಗೆ ಕಾರ್ಯಾಚರಣೆ ನಡೆಸಿ ಕೆಲವು ಕಡೆ ಪಾದಚಾರಿ ಮಾರ್ಗ ತೆರವು ಮಾಡಿದ್ದರು. ಎಚ್ಚರಿಕೆಯನ್ನೂ ನೀಡಿದ್ದರು. ಇದಾದ ನಂತರವೂ ಅತಿಕ್ರಮಣ ಮುಂದುವರಿದಿದೆ
ಹಾವೇರಿ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಯೂ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು.–ಚಂದ್ರು ಕಮ್ಮಾರ, ಹಾವೇರಿ ನಿವಾಸಿ
ಶಿಗ್ಗಾವಿಯಲ್ಲೂ ಹೆಚ್ಚು ಒತ್ತುವರಿ
ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಶಿಗ್ಗಾವಿ ಪಟ್ಟಣದಲ್ಲಿಯೂ ಪಾದಚಾರಿ ಮಾರ್ಗ ಹೆಚ್ಚು ಒತ್ತುವರಿ ಆಗಿದೆ. ಬಸ್ ನಿಲ್ದಾಣ ಎದುರು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಿದ್ದು ಅದರ ಕೆಳಗಡೆ ಭಾಗವನ್ನು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸ್ಥಳಗಳಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ಜನರು ಓಡಾಡಲು ಸಹ ಜಾಗವಿಲ್ಲದಂತಾಗಿದೆ.
ನಡೆದುಕೊಂಡು ಹೋಗುವ ವಿಚಾರವಾಗಿ ನಿತ್ಯವೂ ಜಗಳಗಳೂ ನಡೆಯುತ್ತಿವೆ. ಪಾದಚಾರಿ ಮಾರ್ಗ ಒತ್ತುವರಿಯಾಗಿ ಅಕ್ರಮ ಅಂಗಡಿಗಳು ತಲೆ ಎತ್ತಿದರೂ ಶಿಗ್ಗಾವಿ ಪುರಸಭೆ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ. ಅಧಿಕಾರಿಗಳು ತಮ್ಮ ಕೆಲಸ ಸಿಬ್ಬಂದಿ ಮೂಲಕ ಅಕ್ರಮ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿರುವ ಆರೋಪವೂ ಕೇಳಿಬರುತ್ತಿದೆ.
ನಗರಸಭೆ ಹೆಸರಿನಲ್ಲಿ ಹಣ ವಸೂಲಿ?
ಹಾವೇರಿಯಲ್ಲಿ ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿಗಳಿಂದ ನಗರಸಭೆಯ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
‘ಹಳೇ ಪಿ.ಬಿ. ರಸ್ತೆಯ ಸಾರ್ವಜನಿಕ ಸ್ಥಳಗಳಲ್ಲಿ ಹಲವರು ಅಕ್ರಮವಾಗಿ ಅಂಗಡಿ ಇಟ್ಟುಕೊಂಡಿದ್ದಾರೆ. ಈ ಜಾಗಕ್ಕೆ ನಿತ್ಯವೂ ಬೈಕ್‌ನಲ್ಲಿ ಬರುವ ಕೆಲವರು ‘ನಾನು ನಗರಸಭೆ ಸಿಬ್ಬಂದಿ’ ಎಂಬುದಾಗಿ ಹೇಳಿ ₹ 20ರಿಂದ ₹ 50 ಪಡೆದುಕೊಂಡು ಹೋಗುತ್ತಿದ್ದಾರೆ. ಹಣ ನೀಡದಿದ್ದರೆ ವ್ಯಾಪಾರ ಮಾಡಲು ಬಿಡುವುದಿಲ್ಲವೆಂದು ಬೆದರಿಸುತ್ತಿದ್ದಾರೆ’ ಎಂದು ವಾಹನ ಮಾರಾಟ ಮಳಿಗೆಯೊಂದರ ಮಾಲೀಕ ದೂರಿದರು.
‘ಅಕ್ರಮವಾಗಿ ಅಂಗಡಿ ನಡೆಸಲು ಅವಕಾಶ ನೀಡಬಾರದು. ಇದರಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತದೆ. ಅಂಗಡಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಸಿಬ್ಬಂದಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.