ADVERTISEMENT

ಅರಣ್ಯ ಹುತಾತ್ಮರ ದಿನ: 1730ರಲ್ಲಿ ಮರ ಕಡಿಯಲು ವಿರೋಧಿಸಿದ್ದಕ್ಕೆ 363 ಮಂದಿ ಹತ್ಯೆ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಂದ ಗೌರವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 2:31 IST
Last Updated 12 ಸೆಪ್ಟೆಂಬರ್ 2025, 2:31 IST
ಹಾವೇರಿ ತಾಲ್ಲೂಕಿನ ಕರ್ಜಗಿಯ ಪ್ರಾದೇಶಿಕ ಅರಣ್ಯ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪಾ ಎನ್. ಅವರು ಪುಷ್ಪನಮನ ಸಲ್ಲಿಸಿದರು
ಹಾವೇರಿ ತಾಲ್ಲೂಕಿನ ಕರ್ಜಗಿಯ ಪ್ರಾದೇಶಿಕ ಅರಣ್ಯ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪಾ ಎನ್. ಅವರು ಪುಷ್ಪನಮನ ಸಲ್ಲಿಸಿದರು    

ಹಾವೇರಿ: ‘ಜೋಧಪುರದ ಕೇಜ್ರಿ ಪ್ರಾಂತ್ಯದಲ್ಲಿ 1730ರಲ್ಲಿ ಮರ ಕಡಿಯುವುದನ್ನು ವಿರೋಧಿಸಿದ್ದಕ್ಕಾಗಿ ಅಂದಿನ ರಾಜ ಅಭಯ ಸಿಂಗ್‌ನ ಸೈನಿಕರು, ಬಿಷ್ಣೋಯಿ ಸಮುದಾಯದ 363 ಮಂದಿಯನ್ನು ಹತ್ಯೆ ಮಾಡಿದರು. ಮರಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣ ನೀಡಿದ ಬಿಷ್ಣೋಯಿ ಸಮುದಾಯದವರ ತ್ಯಾಗವನ್ನು ಸ್ಮರಿಸಲು ಸೆ. 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪಾ ಎನ್. ಹೇಳಿದರು.

ತಾಲ್ಲೂಕಿನ ಕರ್ಜಗಿಯ ಪ್ರಾದೇಶಿಕ ಅರಣ್ಯ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

‘ರಾಜ ಅಭಯ ಸಿಂಗ್‌ ನೂರಾರು ಮರಗಳನ್ನು ಕಡಿದು, ಅರಮನೆ ನಿರ್ಮಿಸಲು ಮುಂದಾಗಿದ್ದ. ಅದನ್ನು ವಿರೋಧಿಸಿದ್ದ ಬೀಷ್ಣೋಯಿ ಸಮುದಾಯದವರು, ಮರ ಕಡಿಯಲು ಬಿಟ್ಟಿರಲಿಲ್ಲ. ಅವಾಗಲೇ ರಾಜನ ಸೈನಿಕರು, ‍ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 363 ಮಂದಿಯನ್ನು ಕೊಂದರು’ ಎಂದು ಹೇಳಿದರು.

ADVERTISEMENT

‘ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಲು ತಮ್ಮ ಜೀವವನ್ನು ಮುಡಿಪಾಗಿಟ್ಟ ಹುತಾತ್ಮರನ್ನು ನೆನೆದು ಅವರಿಗೆ ಗೌರವ ಸಮರ್ಪಣೆ ಮಾಡುವ ದಿನ ಇದಾಗಿದೆ. ಪರಿಸರ ಪ್ರೇಮಿಗಳು, ಅರಣ್ಯ ಪ್ರೇಮಿಗಳು, ವನ್ಯಜೀವಿ ಪ್ರೇಮಿಗಳು ಆದಿ–ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿದ್ದಾರೆ. ಅರಣ್ಯ ಮೇಲಿನ ಪ್ರೀತಿಯಿಂದ ಅವರೆಲ್ಲರೂ ಅರಣ್ಯ ಸಂಪತ್ತು ರಕ್ಷಿಸುತ್ತಿದ್ದಾರೆ’ ಎಂದರು.

‘ಪುರಾಣಗಳ ಪ್ರಕಾರ, ಭೂಮಿಯ ಮೇಲೆ 83 ಲಕ್ಷ ಜೀವರಾಶಿಗಳಿವೆ. ಎಲ್ಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಇವುಗಳ ರಕ್ಷಣೆಗಾಗಿ ಸರ್ಕಾರ 19ನೇ ಶತಮಾನದಿಂದಲೇ ಅರಣ್ಯ ಕಾಯ್ದೆ ಜಾರಿಗೆ ತಂದಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ, ಭೂ ಸವಕಳಿ ತಡೆಗಟ್ಟುವ ಕಾಯ್ದೆಗಳೂ ಕ್ರಮೇಣವಾಗಿ ಜಾರಿಗೆ ಬಂದವು. ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಗಳ ಮುಖ್ಯ ಉದ್ದೇಶ ಅರಣ್ಯನಾಶ ತಡೆಗಟ್ಟುವುದಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಲ್. ನಾಗರಾಜ್ ಮಾತನಾಡಿ, ‘ಅರಣ್ಯವನ್ನು ಕಾಪಾಡಿ ಮುಂದಿನ ಪೀಳಿಗೆಗೆ ಪರಿಚಯಿಸಿದ ಹುತಾತ್ಮರನ್ನು ನೆನೆಯುವುದು ನಮ್ಮೆಲ್ಲರ ಜವಾಬ್ದಾರಿ. ಭೂಮಿಯ ಮೇಲೆ ಯಾವುದೇ ಒಂದು ಜೀವಿ ಜೀವಿಸಬೇಕಿದ್ದರೆ, ಅವುಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಜೀವ ವೈವಿಧ್ಯತೆಯಲ್ಲಿ ವ್ಯತ್ಯಾಸವಾದರೆ ಇಡೀ ಜೀವರಾಶಿಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬಿರುತ್ತದೆ. ಹೀಗಾಗಿ, ಜೀವರಾಶಿಗಳನ್ನು ಉಳಿಸಲು ಸೂಕ್ತ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಇದೆ’ ಎಂದು ಹೇಳಿದರು.

ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಎ. ಶೇಖ್ ಮಾತನಾಡಿ, ‘ಈ ಜಗತ್ತಿನಲ್ಲಿ ಮನುಕುಲ ಅಸ್ತಿತ್ವದಲ್ಲಿ ಉಳಿಯಬೇಕಿದ್ದರೆ, ಎಲ್ಲ ಪ್ರಾಣಿ ಸಂಕುಲದೊಂದಿಗೆ ಸಮನ್ವಯದೊಂದಿಗೆ ಬಾಳಬೇಕು. ಇಲ್ಲಿ ಪ್ರತಿಯೊಂದು ಜೀವಿಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಹೀಗಾಗಿ, ಪ್ರತಿ ಜೀವರಾಶಿಯನ್ನು ಗೌರವಿಸುವ ಮನಸ್ಥಿತಿಯನ್ನು ನಾವು ಹೊಂದಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮ ನಿಮಿತ್ತ ಅರಣ್ಯ ಭವನದ ಮುಂಭಾಗದಲ್ಲಿ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ನಮನ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ನ್ಯಾಯಾಧೀಶರಾದ ಶೈಲಜಾ ಎಚ್. ವಿ., ಸಾಮಾಜಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರಗೌಡ ಸಿ. ಪಾಟೀಲ, ಜಿಲ್ಲಾ ವಕೀಲರ ಸಂಘದ ಸಂಘದ ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ, ಹಾವೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಚ್. ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.