ADVERTISEMENT

ಹಾವೇರಿ | ₹ 47 ಲಕ್ಷ ಸಾಲದ ಆಮಿಷ: ₹ 5.14 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 16:23 IST
Last Updated 3 ಆಗಸ್ಟ್ 2024, 16:23 IST

ಹಾವೇರಿ: ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ₹47 ಲಕ್ಷ ಸಾಲ ಕೊಡಿಸುವ ಆಮಿಷವೊಡ್ಡಿ ಮಹಿಳೆಯೊಬ್ಬರಿಂದ ₹5.14 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ಕುಮಾರಪಟ್ಟಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸೊಪೇಟೆಯ ನಿವಾಸಿಯಾಗಿರುವ 39 ವರ್ಷದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವೈದ್ಯಕೀಯ ವೃತ್ತಿಯಲ್ಲಿರುವ ಮಹಿಳೆಗೆ ಮೊಬೈಲ್‌ಗೆ ಸಂದೇಶ ಬಂದಿತ್ತು. ‘ನೀವು ಮುದ್ರಾ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದೀರಾ. ನಿಮಗೆ ₹ 47 ಲಕ್ಷ ಸಾಲ ಸಿಗುತ್ತದೆ’ ಎಂಬುದಾಗಿ ಸಂದೇಶದಲ್ಲಿ ಬರೆಯಲಾಗಿತ್ತು. ಇದನ್ನು ನಂಬಿದ್ದ ಮಹಿಳೆ, ಸಾಲ ಪಡೆಯಲು ಮುಂದಾಗಿದ್ದರು.’

ADVERTISEMENT

‘ಯೋಜನೆಯಡಿ ಸಾಲ ಪಡೆಯಲು ನೋಂದಣಿ ಮಾಡಿಸಬೇಕು. ಇದಕ್ಕಾಗಿ ಕೆಲ ಶುಲ್ಕಗಳನ್ನು ಪಾವತಿಸಬೇಕೆಂದು ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ಮಹಿಳೆ, ಮಾರ್ಚ್ 13ರಿಂದ ಜುಲೈ 13ರವರೆಗೆ ಹಂತ ಹಂತವಾಗಿ ₹ 5.14 ಲಕ್ಷ ಪಾವತಿಸಿದ್ದರು. ಇದಾದ ನಂತರ ಯಾವುದೇ ಸಾಲ ಮಂಜೂರಾಗಿಲ್ಲ. ಆರೋಪಿಯೂ ನಾಪತ್ತೆಯಾಗಿದ್ದಾನೆ. ಹಣ ಕಳೆದುಕೊಂಡ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.