ADVERTISEMENT

ಹಾವೇರಿ: ಹೊಸಕೆರೆ ಅಭಿವೃದ್ಧಿ ಹೆಸರಿನಲ್ಲಿ ವಂಚನೆ: ಪ್ರಣವಾನಂದ ಸ್ವಾಮೀಜಿ ಆರೋಪ

ಎಸಿಬಿ ಪೊಲೀಸ್‌ ಠಾಣೆಗೆ ದೂರು: ಪ್ರಣವಾನಂದ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 14:38 IST
Last Updated 7 ಮಾರ್ಚ್ 2022, 14:38 IST
ಪ್ರಣವಾನಂದ ಸ್ವಾಮೀಜಿ 
ಪ್ರಣವಾನಂದ ಸ್ವಾಮೀಜಿ    

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಅರೇಮಲ್ಲಾಪುರ ಗ್ರಾಮದ ಹೊಸಕೆರೆಯ ಅಭಿವೃದ್ಧಿ ಹೆಸರಿನಲ್ಲಿ ವಂಚನೆ ಮತ್ತು ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಹಾವೇರಿಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್‌ ಠಾಣೆಗೆ ಸೋಮವಾರ ದೂರು ಸಲ್ಲಿಸಿದ್ದೇನೆ ಎಂದು ಅರೇಮಲ್ಲಾಪುರ ಗ್ರಾಮ ಪಂಚಾಯಿತಿ ಸದಸ್ಯ, ಶರಣ ಬಸವೇಶ್ವರ ಆಶ್ರಮದ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೊಸಕೆರೆಯ ಅಭಿವೃದ್ಧಿಗಾಗಿ ₹77.94 ಲಕ್ಷ ಯೋಜನೆ ತಯಾರಿಸಿದ್ದು, ಜಾಗಕ್ಕೆ ಸಂಬಂಧಿಸಿದಂತೆ ಸರ್ಕಾರಿ ಇಲಾಖೆಗಳಿಂದ ಅನುಮತಿ ಪಡೆದಿಲ್ಲ. ಸರ್ಕಾರಿ ಹಣವನ್ನು ಲೂಟಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎಂ. ಹಲವಾಗಲ, ಧಾರವಾಡದ ಕಾರ್ಯನಿವಾರ್ಹಕ ಎಂಜಿನಿಯರ್‌, ರಾಣೆಬೆನ್ನೂರಿನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ವಿ.ಎಸ್‌.ಪವಾರ, ಸಹಾಯಕ ಎಂಜಿನಿಯರ್‌ ಪುಷ್ಪಲತಾ, ಜ್ಯೂನಿಯರ್‌ ಎಂಜಿನಿಯರ್‌ ರೇವಣಪ್ಪ, ಎಇಇ ಅನಿಲ, ಸಹಾಯಕ ಎಂಜಿನಿಯರ್‌ ಶಂಭು ಇವರ ವಿರುದ್ಧ ಅಧಿಕಾರ ದುರುಪಯೋಗ, ಹಣ ದುರುಪಯೋಗ, ಕರ್ತವ್ಯಲೋಪದ ದೂರು ನೀಡಿದ್ದೇನೆ ಎಂದರು.

ADVERTISEMENT

ಕೆರೆ ಒಳಗೆ ಇರುವ ಹಸಿ ಮಣ್ಣನ್ನು ತೆಗೆಯುವುದಕ್ಕೆ ₹11.64 ಲಕ್ಷ, ನೀರು ಸೋರದಿರುವುದಕ್ಕೆ ₹46 ಲಕ್ಷ ವೆಚ್ಚ, 87 ಮೀಟರ್‌ ಉದ್ದಕ್ಕೆ 3.5 ಅಡಿ ಆಳಕ್ಕೆ ಡ್ರಿಲ್‌ ಕಾಂಕ್ರೀಟ್‌ ಬಂಡ್‌ ಹಾಕಲು ₹15.59 ಲಕ್ಷ, ಬೇಸಮೆಂಟ್‌ನಲ್ಲಿ ಹೊರಗಡೆಯಿಂದ ಮಣ್ಣನ್ನು ತಂದು ರೋಲರ್‌ನಿಂದ ಸಮ ಮಾಡಿ ಗಟ್ಟಿ ಮಾಡುವುದಕ್ಕೆ ₹2.34 ಲಕ್ಷ, ನೀರು ಬರುವ ಜಾಗದಲ್ಲಿ ಗೇಟ್‌ ಕೂಡಿಸುವುದಕ್ಕೆ ₹1.25 ಲಕ್ಷ ಹೀಗೆ ವೆಚ್ಚ ತೋರಿಸಿ, ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದರು.

ಸಚಿವ ಜೆ.ಸಿ. ಮಾಧುಸ್ವಾಮಿ, ಬೆಂಗಳೂರಿನ ಲೋಕಾಯುಕ್ತ ಕಚೇರಿ, ಸಣ್ಣ ನೀರಾವರಿ ಇಲಾಖೆಯ ಅಧೀನ ಕಾರ್ಯದರ್ಶಿ ಅವರಿಗೆ ಮಂಗಳವಾರ ದೂರು ಸಲ್ಲಿಸುತ್ತೇನೆ. 15 ದಿನದೊಳಗೆ ತಪ್ಪಿತಸ್ಥರನ್ನು ಅಮಾನತು ಮಾಡದಿದ್ದರೆ ಬೆಂಗಳೂರಿನಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.