
ಹಿರೇಕೆರೂರ: ‘ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ಪ್ರಜ್ಞಾವಂತರ ಮೇಲಿದೆ’ ಎಂದು ಸಾಕ್ಷ್ಯಚಿತ್ರ ನಿರ್ದೇಶಕ ಅರಳಿಕಟ್ಟಿ ಗೂಳಪ್ಪ ಹೇಳಿದರು.
ತಾಲ್ಲೂಕಿನ ಹಂಸಭಾವಿ ಗ್ರಾಮದಲ್ಲಿ ಈಚೆಗೆ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಗ್ರಾಮ ಸ್ವರಾಜ್ ಅಭಿಯಾನ, ಹಂಸಭಾವಿ ಗ್ರಾಮ ಪಂಚಾಯಿತಿ, ಮೃತ್ಯುಂಜಯ ವಿದ್ಯಾಪೀಠದ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ನೆಶ್ವಿ ಅವರ 126ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಬದುಕನ್ನು ಮುಡಿಪಿಟ್ಟಿದ್ದರು. ದುರದೃಷ್ಟವಶಾತ್ ಸ್ಥಳೀಯ ಹೋರಾಟಗಾರರ ಕುರಿತು ವಿದ್ಯಾರ್ಥಿ ಹಾಗೂ ಯುವ ಸಮೂಹಕ್ಕೆ ಅರಿವು ಮೂಡಿಸುವುದರಲ್ಲಿ ಎಡವಿದ್ದೇವೆ. ನಮ್ಮ ನೆಲದ ಚಳವಳಿಗಾರರ ನಿಸ್ವಾರ್ಥ ದೇಶಪ್ರೇಮವನ್ನು ಪರಿಚಯಿಸುವ ಮೂಲಕ ಅವರನ್ನು ಸ್ಮರಿಸಬೇಕಿದೆ’ ಎಂದು ಅವರು ಹೇಳಿದರು.
ಸಮಾರಂಭ ಉದ್ಘಾಟಿಸಿದ ಗ್ರಾಮ ಸ್ವರಾಜ್ ಅಭಿಯಾನದ ಸಂಚಾಲಕ ಆವರಗೆರೆ ರುದ್ರಮುನಿ ಮಾತನಾಡಿ, ‘ಧಾರವಾಡ ದಕ್ಷಿಣ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹುರುಪು ತುಂಬಿದ ಟಿ.ಆರ್. ನೆಶ್ವಿ ಅವರು ಹಿರೇಕೆರೂರ ಭಾಗವನ್ನು ಕರ್ನಾಟಕದ ಬಾರ್ಡೋಲಿಯನ್ನಾಗಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂಥ ಮಹನೀಯರ ಸ್ಮರಣೆ ಮಾದರಿ. ಈ ನಡೆ ಹಳ್ಳಿಹಳ್ಳಿಗಳಿಗೂ ವ್ಯಾಪಿಸಲಿ‘ ಎಂದರು.
ಮೋಹನಗೌಡ ಪಾಟೀಲ, ಪ್ರಭುಸ್ವಾಮಿ ಹಾಲೇವಾಡಿಮಠ, ಶಶಿಕಲಾ ಅಬಲೂರು , ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭುಗೌಡ ಪಾಟೀಲ್, ಎನ್.ಎಸ್. ಪಾಟೀಲ, ಸೋಮಣ್ಣ ದೊಡ್ಡಹುಚ್ಚಗೊಂಡರ, ಸುಭಾಷ್ ನೆಶ್ವಿ, ರೇಣುಕಾ ನೆಶ್ವಿ, ಪ್ರಮೋದ ನೆಶ್ವಿ, ಸೌಭಾಗ್ಯ ಎಸ್, ಆರ್.ಉಷಾರಾಣಿ, ಮುತ್ತಣ್ಣ ಬಾಸೂರ, ಮಲ್ಲಿಕಾರ್ಜುನ ಭರಮಣ್ಣವರ, ಗಿರೀಶ ಬಾರ್ಕಿ, ಸುಭಾಷ್ ಮಡಿವಾಳರ , ಎಸ್. ಹನುಮಂತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.