ADVERTISEMENT

ಸ್ವಾಮೀಜಿ ನೇತೃತ್ವದಲ್ಲಿ ‘ಗಾಂಧಿ’ ಕಾರ್ಯಕ್ರಮ

ಗಾಂಧೀಜಿ 150ನೇ ಜಯಂತಿ ಅಂಗವಾಗಿ ಗಾಂಧಿವಾದಿ ಚೆನ್ನಮ್ಮ ಹಳ್ಳಿಕೇರಿ ಆಶಯದಂತೆ 150 ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:38 IST
Last Updated 20 ಮೇ 2019, 13:38 IST
ಗಾಂಧಿವಾದಿ ಚೆನ್ನಮ್ಮ ಹಳ್ಳಿಕೇರಿ
ಗಾಂಧಿವಾದಿ ಚೆನ್ನಮ್ಮ ಹಳ್ಳಿಕೇರಿ   

ಹಾವೇರಿ: ಗಾಂಧಿವಾದಿ ಚೆನ್ನಮ್ಮ ಹಳ್ಳಿಕೇರಿ ಆಶಯದಂತೆ, ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ 150 ಕಾರ್ಯಕ್ರಮಗಳು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಪ್ರಮುಖರ ನೇತೃತ್ವದಲ್ಲಿ ನಡೆಯಲಿವೆ.

‘ಗಾಂಧೀಜಿಯ 150ನೇ ಜಯಂತಿ ಅಂಗವಾಗಿ ಯುವಜನತೆಗೆ ಗಾಂಧೀಜಿಯನ್ನು ನೈಜವಾಗಿ ಪರಿಚಯಿಸಬೇಕಿದೆ. ಅಹಿಂಸೆ ಇಂದಿನ ಅಗತ್ಯ’ ಎಂದು ವಿನೋಬಾ ಭಾವೆಯ ಜೊತೆಗಿದ್ದ, ಗಾಂಧೀಜಿಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ತಾಲ್ಲೂಕಿನ ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿ ಕೇಳಿಕೊಂಡರು. ಅವರ ಮಾತಿನಂತೆ ಹಾವೇರಿ ಜಿಲ್ಲೆಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ 50 ಕಾರ್ಯಕ್ರಮಗಳನ್ನು ನಡೆಸಲಿದ್ದು, ಜುಲೈ 8ರಂದು ಉದ್ಘಾಟನೆಗೊಳ್ಳಲಿದೆ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬೀದರ್, ವಿಜಯಪುರ, ಕಲ್ಬುರ್ಗಿ, ಧಾರವಾಡ ಜಿಲ್ಲೆಗಳಲ್ಲಿ 100 ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಚರಕದ ಸ್ಮರಣಿಕೆ, ಖಾದಿ ಉಡುಪು, ಗಾಂಧಿ ಕುರಿತ ಕೃತಿಗಳ ವಿತರಣೆ, ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಇದನ್ನು ಸಮಿತಿ ನಿರ್ಧರಿಸಲಿದೆ’ ಎಂದು ಚೆನ್ನಮ್ಮ ಹಳ್ಳಿಕೇರಿ ಹೇಳಿದರು.

ADVERTISEMENT

ಇಂದಿನ ಯುವಜನತೆಗೆ ಗಾಂಧಿ ಮಾರ್ಗದ ದೇಶಪ್ರೇಮವನ್ನು ಸ್ಪಷ್ಟವಾಗಿ ತಿಳಿಸಬೇಕಿದೆ. ಭಯೋತ್ಪಾದನೆ ವಿರುದ್ಧ ಅಹಿಂಸಾ ಅಸ್ತ್ರದ ಮಹತ್ವವನ್ನು ಮನದಟ್ಟು ಮಾಡಬೇಕಿದೆ. ಅದಕ್ಕಾಗಿ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಸದಾಶಿವ ಸ್ವಾಮೀಜಿ ಹೇಳಿದರು.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಪ್ರಮುಖರಾದ ನಾಗೇಂದ್ರ ಕಟಕೋಳ, ಡಾ. ಅರುಣಾ ಹಳ್ಳಿಕೇರಿ ಇದ್ದರು.

‘ಮಹಾತ್ಮರನ್ನು ಪಕ್ಷ, ಜಾತಿಗೆ ಹಂಚಬೇಡಿ’

ಸ್ವಾತಂತ್ರ್ಯ ಹೋರಾಟಗಾರರು, ಮಹಾತ್ಮರು, ದೇಶಭಕ್ತರು ಹಾಗೂ ದೇಶಭಕ್ತಿಯನ್ನು ಪಕ್ಷವಾರು, ಜಾತಿವಾರು ಹಂಚಿಕೊಳ್ಳುವ ಕೆಟ್ಟ ಪದ್ಧತಿ ಶುರುವಾಗಿದೆ. ಅದು ಮಹಾತ್ಮರಿಗೆ ಮಾಡುವ ಅವಮಾನ. ಗಾಂಧೀಜಿ ತತ್ವಗಳು ಇಂದಿನ ಅಗತ್ಯವಾಗಿದೆ. ಹೀಗಾಗಿ, ಗೋಡ್ಸೆ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಪರ ಬಿಜೆಪಿ ಮುಖಂಡರು ನೀಡಿದ್ದ ಹೇಳಿಕೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.