ಹಾವೇರಿ: ಜಿಲ್ಲೆಯಾದ್ಯಂತ ದೊಡ್ಡವರು ಸೇರಿಕೊಂಡು ಬೃಹತ್ ಪೆಂಡಾಲ್‌ಗಳನ್ನು ನಿರ್ಮಿಸಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಇದರ ನಡುವೆಯೇ ಮಕ್ಕಳು, ತಮ್ಮದೇ ಸ್ನೇಹಿತರ ತಂಡ ಕಟ್ಟಿಕೊಂಡು ಮೂರ್ತಿ ಪ್ರತಿಷ್ಠಾಪನೆ ಮಾಡಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ.
ನಗರದ ಇಜಾರಿಲಕಮಾಪುರ ಬಳಿಯ ಸಿದ್ದಾರೂಢ ಕಾಲೊನಿಯಲ್ಲಿ ಸ್ಥಳೀಯ ಮಕ್ಕಳೇ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಹಣ ಹೊಂದಿಸುವುದು ಸೇರಿದಂತೆ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಮಕ್ಕಳೇ ನಿರ್ವಹಿಸುತ್ತಿದ್ದಾರೆ.
ತಂದೆ– ತಾಯಿ, ಕುಟುಂಬಸ್ಥರು, ಸ್ಥಳೀಯ ನಿವಾಸಿಗಳಿಂದ ದೇಣಿಗೆ ಪಡೆದಿರುವ ಮಕ್ಕಳು, ಅದಕ್ಕೆ ರಶೀದಿ ಸಹ ಕೊಟ್ಟು ಪಾರದರ್ಶಕತೆ ಮೆರೆದಿದ್ದಾರೆ. ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸುಸಜ್ಜಿತ ಪೆಂಡಾಲ್ ಸಹ ನಿರ್ಮಿಸಿಕೊಂಡಿದ್ದಾರೆ. ಇಡೀ ಕಾಲೊನಿಯಲ್ಲಿ ಬುಧವಾರ ಮೂರ್ತಿಯ ಅದ್ಧೂರಿ ಮೆರವಣಿಗೆ ನಡೆದಿದ್ದು, ಇದರಲ್ಲೂ ಮಕ್ಕಳೇ ಪ್ರಮುಖರಾಗಿದ್ದರು.
‘ನಮ್ಮ ಕಾಲೊನಿಯಲ್ಲಿ ಇದುವರೆಗೂ ಯಾರೊಬ್ಬರು ಸಾರ್ವಜನಿಕ ಗಣಪತಿ ಕೂರಿಸಿಲ್ಲ. ನಾವೇ ಮಕ್ಕಳು ಒಗ್ಗಟ್ಟಾಗಿ ಮೊದಲ ಬಾರಿಗೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇನೆ. ಹಿರಿಯರೆಲ್ಲರೂ ಸಹಕಾರ ನೀಡಿದ್ದಾರೆ. ಇನ್ನುಮುಂದೆ ಪ್ರತಿವರ್ಷವೂ ಮೂರ್ತಿ ಪ್ರತಿಷ್ಠಾಪಿಸಲಾಗುವುದು’ ಎಂದು ಮಕ್ಕಳು ಹೇಳಿದರು.
ಮಾರಂಬೀಡದಲ್ಲೂ ಮಕ್ಕಳ ತಂಡ: ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರಂಬೀಡ ಗ್ರಾಮದಲ್ಲೂ ಮಕ್ಕಳೇ ತಂಡ ಕಟ್ಟಿಕೊಂಡು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಹಬ್ಬ ಆರಂಭಕ್ಕೂ ಮುನ್ನ ಶಾಲೆ ಅವಧಿ ಮುಗಿಯುತ್ತಿದ್ದಂತೆ ಮನೆಗೆ ಅಲೆದಾಡಿ ಮಕ್ಕಳು ದೇಣಿಗೆ ಸಂಗ್ರಹಿಸಿದ್ದಾರೆ. ರಸ್ತೆಯಲ್ಲಿಯೂ ಜನರಿಂದ ದೇಣಿಗೆ ಪಡೆದಿದ್ದಾರೆ. ಜೊತೆಗೆ, ಹಣ ಕೊಟ್ಟವರ ಹೆಸರನ್ನೂ ನೋಟ್‌ಪುಸ್ತಕದಲ್ಲಿ ದಾಖಲಿಸಿಕೊಂಡಿದ್ದಾರೆ. ಲಭ್ಯವಾದ ಸ್ವಲ್ಪ ಹಣದಲ್ಲಿಯೇ ಸೀರೆ ಹಾಗೂ ಅಲಂಕಾರಿಕ ವಸ್ತುಗಳಿಂದ ಮಂಟಪ ನಿರ್ಮಿಸಿದ್ದಾರೆ. ಧಾರ್ಮಿಕ ವಿಧಾನಗಳ ಅನ್ವಯವೇ ಮೂರ್ತಿಗೆ ಪೂಜೆ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.