ADVERTISEMENT

ಹಾವೇರಿ | ಅತ್ಯಾಚಾರ ಆರೋಪಿಗಳಿಂದ ವಿಜಯೋತ್ಸವ: ನಾಲ್ವರು ರೌಡಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮೇ 2025, 12:46 IST
Last Updated 23 ಮೇ 2025, 12:46 IST
   

ಹಾವೇರಿ: ಜಿಲ್ಲೆಯ ಹಾನಗಲ್ ಬಳಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಆರೋಪಿಗಳು ವಿಜಯೋತ್ಸವ ಮಾಡಿದ್ದು, ಜಾಮೀನು ನಿಯಮ ಉಲ್ಲಂಘಿಸಿದ ಆರೋಪದಡಿ ನಾಲ್ವರು ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಹಾನಗಲ್ ತಾಲ್ಲೂಕಿನ ಅಕ್ಕಿಆಲೂರ ಕಮಾಟಿಗೇರ ಓಣಿಯ ಸಮೀವುಲ್ಲಾ ಅಬ್ದುಲ್‌ವಾಹೀದ್ ಲಾಲಾನವರ (28), ಇಮಾಮನಗರದ ಮಹ್ಮದಸಾದಿಕ್ ಬಾಬುಸಾಬ ಅಗಸಿಮನಿ (30), ಹಳ್ಳೂರ ಓಣಿಯ ಶೋಹಿಬ ನಿಯಜಅಹ್ಮದ್ ಮುಲ್ಲಾ ಉರುಫ್ ಶೋಯಬ್ (20) ಹಾಗೂ ಇಸ್ಲಾಂಪುರ ಓಣಿಯ ರಿಯಾಜ್ ಅಬ್ದುಲ್‌ರಫೀಕ್ ಸಾವಿಕೇರಿ (32) ಬಂಧಿತರು. ವಿಜಯೋತ್ಸದಲ್ಲಿದ್ದ ಪ್ರಮುಖ ಆರೋಪಿಗಳಾದ ಮೂವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ್ ತಿಳಿಸಿದರು.

‘2024ರ ಜನವರಿಯಲ್ಲಿ ಹಾನಗಲ್ ಠಾಣೆ ವ್ಯಾಪ್ತಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ 19 ಆರೋಪಿಗಳನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ 12 ಜನರಿಗೆ ಈ ಹಿಂದೆಯೇ ಜಾಮೀನು ಮಂಜೂರಾಗಿತ್ತು. ಬಾಕಿ ಉಳಿದ 7 ಜನರಿಗೆ ಮೇ 20ರಂದು ಜಾಮೀನು ಮಂಜೂರಾಗಿತ್ತು.’

ADVERTISEMENT

‘ಜಾಮೀನು ಮೇಲೆ ಜೈಲಿನಿಂದ ಹೊರಬಂದ 7 ಆರೋಪಿಗಳು, ಹಾವೇರಿಯಿಂದ ಅಕ್ಕಿಆಲೂರುವರೆಗೂ ಕಾರು–ಬೈಕ್‌ಗಳಲ್ಲಿ ವಿಜಯೋತ್ಸವ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ಹರಿದಾಡಿದ್ದವು. ವಿಡಿಯೊಗಳು ಗಮನಕ್ಕೆ ಬರುತ್ತಿದ್ದಂತೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘7 ಆರೋಪಿಗಳ ಹೆಸರು, ರೌಡಿಪಟ್ಟಿಯಲ್ಲಿದೆ. ಜಾಮೀನು ಮಂಜೂರಾದ ನಂತರವೂ ನಿಯಮ ಉಲ್ಲಂಘಿಸಿ ವಿಜಯೋತ್ಸವ ಆಚರಣೆ ಮಾಡಿದ್ದಾರೆ. ಅವರ ಜಾಮೀನು ರದ್ದು ಮಾಡುವಂತೆ ಆಗ್ರಹಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಆರೋಪಿಗಳನ್ನು ಗುರುತಿಸದ ಸಂತ್ರಸ್ತೆ: ‘ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ, ಆರೋಪಿಗಳ ಮುಖಚಹರೆ ಗುರುತಿಸಿಲ್ಲ. ಇದೇ ಕಾರಣಕ್ಕೆ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣ ವಿಚಾರಣೆ ಚಾಲ್ತಿಯಲ್ಲಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.