ADVERTISEMENT

ಗುತ್ತಲ: ಪಟ್ಟಣ ತೊರೆಯುವಂತಿಲ್ಲ, ಹಾಲು ಮಾರುವಂತಿಲ್ಲ!

ಗುತ್ತಲ ಗ್ರಾಮದೇವಿ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 14:02 IST
Last Updated 11 ಏಪ್ರಿಲ್ 2022, 14:02 IST
ಗುತ್ತಲ ಗ್ರಾಮ ದೇವತೆ
ಗುತ್ತಲ ಗ್ರಾಮ ದೇವತೆ   

ಗುತ್ತಲ: ಏಪ್ರಿಲ್‌ 12ರಿಂದ 15ರವರೆಗೆ ಈ ಪಟ್ಟಣದ ಜನರು ಯಾರೂ ಕೂಡಾ ಪಟ್ಟಣವನ್ನು ತೊರೆಯುವಂತಿಲ್ಲ, ಹಾಲನ್ನು ಪರ ಊರಿಗೆ ಮಾರುವಂತಿಲ್ಲ, ಪರ ಊರಿನ ಜನರಿಗೆ ಹಣವನ್ನು ಕೊಡುವಂತಿಲ್ಲ... ಇದು ಗುತ್ತಲ ಪಟ್ಟಣದ ಗ್ರಾಮ ದೇವಿಯ (ದ್ಯಾಮವ್ವ) ಹಾಗೂ ಪಟ್ಟಣದ ಕುಕನೂರ ಗ್ರಾಮದೇವಿಯ ಜಾತ್ರೆ ಹಿನ್ನೆಲೆಯಲ್ಲಿನ ಒಂದು ವಿಶಿಷ್ಟ ಕಟ್ಟುಪಾಡು.

ಐದು ವರ್ಷದ ನಂತರ ಗ್ರಾಮದೇವತೆ ಜಾತ್ರೆ ನಡೆಯುತ್ತಿದ್ದು, ಪಟ್ಟಣದ ಎಲ್ಲ ಸಮುದಾಯ ಹಾಗೂ ಕೋಮಿನ ಜನರು ಸಂಪ್ರದಾಯ ಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ವೈಶಿಷ್ಟ್ಯ.

ಗ್ರಾಮದ ದೇವತಾ ಜಾತ್ರೆಗೆ ಏಪ್ರಿಲ್‌ 8ರ ಶುಕ್ರವಾರ ಸಂಜೆ ಅಂಕಿ ಹಾಕಲಾಗಿದೆ. ಇದರ ಒಳಗಾಗಿ ಪಟ್ಟಣದಲ್ಲಿನ ರೈತರು ತಮ್ಮ ಜಮೀನುಗಳಿಗೆ ಹೇರಬೇಕಾಗಿರುವ ಕೊಟ್ಟಿಗೆ ಗೊಬ್ಬರವನ್ನು ಜಮೀನುಗಳಿಗೆ ಸಾಗಿಸಲೇಬೇಕು. ಇಲ್ಲವಾದರೆ ವರ್ಷದವರೆಗೆ ಈ ಕೊಟ್ಟಿಗೆ ಗೊಬ್ಬರವನ್ನು ಜಮೀನುಗಳಿಗೆ ಸಾಗಿಸುವಂತಿಲ್ಲ.

ADVERTISEMENT

ಇದೇ ರೀತಿ ಅಂಕಿ ಹಾಕಿದ ನಂತರ ಪಟ್ಟಣದಲ್ಲಿನ ಜನರು ಯಾವುದೇ ಕಾರಣಕ್ಕೂ ಪರಸ್ಥಳಗಳಲ್ಲಿ ಉಳಿದುಕೊಳ್ಳುವಂತಿಲ್ಲ. ಒಂದು ವೇಳೆ ಅನ್ಯ ಊರಿಗೆ ತೆರಳಿದರೂ ಸಹ ರಾತ್ರಿ ವೇಳೆಗೆ ಆಗಮಿಸಲೇಬೇಕು. ಆದರೆ, ಅನ್ಯ ಗ್ರಾಮಗಳ ಜನರು, ಸಂಬಂಧಿಕರು ಯಾವಾಗದರೂ ಬರಬಹುದು ಹಾಗೂ ತೆರಳಬಹುದು.

ಪಟ್ಟಣದ ಗ್ರಾಮ ದೇವಿಯ ಮೆರವಣಿಗೆ ಏ.12ರ ಮಂಗಳವಾರ ರಾತ್ರಿ 10ರಿಂದ ಏ.13ರ ಬುಧವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಚೌತಕಟ್ಟೆಗೆ ಸೇರುತ್ತದೆ. ಮೆರವಣಿಗೆಯಲ್ಲಿ ಸಿಡಿಮದ್ದುಗಳನ್ನು ಹಚ್ಚಲಾಗುತ್ತದೆ. ಆನೆ, ಗೊಂಬೆಗಳ ಕುಣಿತ, ಡೊಳ್ಳು ಕುಣಿತ, ಆರ್ಕೆಸ್ಟ್ರಾ, ಕುದುರೆ ಕುಣಿತ, ಮೆರವಣಿಗೆಗೆ ರಂಗು ನೀಡಲಿವೆ.

ಜಾತ್ರೆಗೆ ಮುಸ್ಲಿಂ ಸಮುದಾಯದವರು ತಮ್ಮ ಸಮಾಜದ ಜನರಿಂದ ₹1 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಜಾತ್ರೆಗೆ ಸಮಿತಿಗೆ ನೀಡಿದ್ದು, ಭಾವೈಕ್ಯಕ್ಕೆ ಸಾಕ್ಷಿಯಾಗಿದೆ.

‘ಗ್ರಾಮ ದೇವಿ ಜಾತ್ರೆಗೆ ಪಟ್ಟಣದ ಎಲ್ಲ ಸಮಾಜ ಬಾಂಧವರು ಕೈಜೋಡಿಸಿ ಒಗ್ಗಟ್ಟಿನಿಂದ ಜಾತ್ರೆಯನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಸಂಕಲ್ಪವನ್ನು ಹೊಂದಿದ್ದು, ಶ್ರೀದೇವಿಯು ಪಟ್ಟಣದ ಎಲ್ಲರಿಗೂ ಶುಭವನ್ನುಂಟು ಮಾಡಲಿ’ ಎನ್ನುತ್ತಾರೆ ಜಾತ್ರಾ ಸಮಿತಿಯ ಅಧ್ಯಕ್ಷರುದ್ರಪ್ಪ ಹಾದಿಮನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.