ADVERTISEMENT

ಬೆಳಗಾವಿ ವಿಭಾಗಕ್ಕೆ ‘ವಿಶೇಷ ಸ್ಥಾನ’ ನೀಡಿ

ಜೆಡಿಎಸ್‌ನಿಂದ ಹೋರಾಟ ನಡೆಸಲು ನಿರ್ಧಾರ: ಎನ್‌.ಎಚ್‌. ಕೋನರಡ್ಡಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 14:21 IST
Last Updated 3 ಏಪ್ರಿಲ್ 2021, 14:21 IST
ಹಾವೇರಿ ನಗರದ ಹೊಟೇಲ್ ಮಾಲೀಕರ ಸಂಘದ ಸಭಾಭವನದಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಪಕ್ಷದ ಸಭೆಯಲ್ಲಿ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿದರು 
ಹಾವೇರಿ ನಗರದ ಹೊಟೇಲ್ ಮಾಲೀಕರ ಸಂಘದ ಸಭಾಭವನದಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಪಕ್ಷದ ಸಭೆಯಲ್ಲಿ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿದರು    

ಹಾವೇರಿ:ಕಲ್ಯಾಣ ಕರ್ನಾಟಕಕ್ಕೆ 371ಜೆ ವಿಶೇಷ ಸ್ಥಾನ ಕೊಟ್ಟಂತೆ ಬೆಳಗಾವಿ ವಿಭಾಗದ ಹಾವೇರಿ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಉತ್ತರಕನ್ನಡ ಮತ್ತು ಗದಗ ಜಿಲ್ಲೆಗಳಿಗೆ ‘ವಿಶೇಷ ಸ್ಥಾನ’ದ ಬೇಡಿಕೆ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಹೋರಾಟವನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದುಜೆಡಿಎಸ್‌ ಹಾವೇರಿ ಜಿಲ್ಲಾ ವೀಕ್ಷಕ, ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ತಿಳಿಸಿದರು.

ನಗರದ ಹೊಟೇಲ್ ಮಾಲೀಕರ ಸಂಘದ ಸಭಾಭವನದಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ‘ರಾಷ್ಟ್ರೀಯ ಯೋಜನೆ’ ಎಂದು ಕೇಂದ್ರ ಸರ್ಕಾರ ಘೋಷಿಸಲು ಒತ್ತಾಯಿಸಿದರು.

ತುಂಗಭದ್ರಾದಿಂದ ಪೂರ್ಣ ಪ್ರಮಾಣದಲ್ಲಿ ನೀರು ಬಳಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಈಗಾಗಲೇ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಚಂದ್ರಶೇಖರರಾವ್ ಕರ್ನಾಟಕದ ನೀರು ಬಳಕೆಗೆ ತಕರಾರು ಮಾಡುತ್ತಿದ್ದು, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಗೊತ್ತಿರುವ ವಿಷಯ. ಈ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ADVERTISEMENT

ಒಂದು ವಾರದಲ್ಲಿ ಹಾವೇರಿ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನ ನೇಮಕ ಮಾಡಲು ರಾಜ್ಯ ಸಮಿತಿಗೆ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ ಹೆಗಡೆ ಅವರ ಜನ್ಮದಿನವನ್ನು ಜಿಲ್ಲಾ ಜೆ.ಡಿ.ಎಸ್ ಘಟಕದಿಂದ ಆಚರಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ತಳವಾರ, ಎಂ.ಬಿ. ಸಾವಜ್ಜಿಯವರ, ಸಿದ್ದಬಸಪ್ಪ ಯಾದವ, ಪ್ರಕಾಶ ಬಾರ್ಕಿ, ಬಸವರಾಜ ಆದಿ, ರವಿ ಬತ್ತದ, ಮಾಲತೇಶ ಸಿಡಗನಾಳ, ಮಲ್ಲಪ್ಪ ಬೇವಿನಮರದ, ಮಾಲತೇಶ ಬೇವಿನಹಿಂಡಿ, ಸುರೇಶ ನಾಯ್ಕ, ಆರ್.ಬಿ. ಪಾಟೀಲ, ಕೆ.ಎಂ. ಸುಂಕದ, ಮಲ್ಲಿಕಾರ್ಜುನ ಅರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.