ADVERTISEMENT

ಹಾವೇರಿ: ಕಣ್ಮನ ಸೆಳೆದ ‘ಚಂದ್ರಯಾನ’ ಗಣೇಶ

ನಗರದ ವಿವಿಧೆಡೆ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 15:59 IST
Last Updated 19 ಸೆಪ್ಟೆಂಬರ್ 2023, 15:59 IST
ಹಾವೇರಿ ನಗರದ ಸಿದ್ಧದೇವಪುರದ ಗಜಾನನ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ ಚಂದ್ರಯಾನ ಮಾದರಿಯ ಗಣೇಶ ಮೂರ್ತಿ   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿ ನಗರದ ಸಿದ್ಧದೇವಪುರದ ಗಜಾನನ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ ಚಂದ್ರಯಾನ ಮಾದರಿಯ ಗಣೇಶ ಮೂರ್ತಿ   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ನಗರದ ವಿವಿಧೆಡೆ ಪ್ರತಿಷ್ಠಾಪಿಸಿರುವ ವಿವಿಧ ವರ್ಣ, ವಿನ್ಯಾಸದ ಗಣೇಶ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ. ಸಿದ್ಧದೇವಪುರದ ಗಜಾನನ ಉತ್ಸವ ಸಮಿತಿ ಸ್ಥಾಪಿಸಿರುವ ‘ಚಂದ್ರಯಾನ ಮಾದರಿ ಗಣೇಶ’ ವಿನೂತನವಾಗಿದ್ದು, ಕಣ್ಮನ ಸೆಳೆಯುತ್ತಿದೆ. 

ಚಂದ್ರಯಾನ–3 ಸಂಪೂರ್ಣ ಯಶಸ್ವಿಯಾಗಿದ್ದು, ಬಾಹ್ಯಾಕಾಶ ವಿಜ್ಞನ ಮತ್ತು ಅಂತರಿಕ್ಷ ಯಾನದಲ್ಲಿ ಭಾರತದ ಅದ್ವಿತೀಯ ಸಾಧನೆ ಮೆರೆಯುವ ಮೂಲಕ ವಿಶ್ವದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮಿದೆ. ನಿರ್ವಿಘ್ನವಾಗಿ ನೆರವೇರಿದ ಈ ಯಾನದ ದ್ಯೋತಕವಾಗಿ ಹಾವೇರಿಯಲ್ಲಿ ನಾವು ‘ಚಂದ್ರಯಾನ ಮಾದರಿ ಗಣೇಶ ಮೂರ್ತಿ’ ಪ್ರತಿಷ್ಠಾಪನೆ ಮಾಡಿದ್ದೇವೆ. ಇದಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಗಜಾನನ ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದರು.  

ಗೌರಿಪುತ್ರ, ವಿಘ್ನವಿನಾಶಕನಾದ ಗಣೇಶನ ಮೂರ್ತಿಗಳನ್ನು ಜನರು ಮಾರುಕಟ್ಟೆ ಮತ್ತು ದೇವಸ್ಥಾನಗಳಿಂದ ಸೋಮವಾರ ಮೆರವಣಿಗೆ ಮೂಲಕ ವಾದ್ಯ ವೃಂದಗಳೊಂದಿಗೆ ವಿಜೃಂಭಣೆಯಿಂದ ‌ತಂದು, ಆಯ್ದ ಸಾರ್ವಜನಿಕ ಸ್ಥಳ ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಿದರು. 

ADVERTISEMENT

ನಗರದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ದೇವಸ್ಥಾನ, ಮೂರ್ತಿ ತಯಾರಕರ ಮನೆಗಳಿಂದ ಶುಭ್ರ ವಸ್ತ್ರಧಾರಿಗಳಾಗಿ, ಪಟಾಕಿ ಸಿಡಿಸಿ, ವಾದ್ಯ ವೈಭವಗಳೊಂದಿಗೆ ಗಣೇಶ ಮೂರ್ತಿಗಳನ್ನು ಮನೆಗೆ ಕರೆತರುತ್ತಿರುವ ದೃಶ್ಯಗಳು ಕಂಡು ಬಂದವು.

ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು, ಹಾನಗಲ್ಲ, ಸವಣೂರು, ಬ್ಯಾಡಗಿ, ಶಿಗ್ಗಾವಿ ಸೇರಿದಂತೆ ಹಲವಾರು ಪಟ್ಟಣಗಳ ವಿವಿಧ ಸರ್ಕಲ್‍ಗಳಲ್ಲಿ, ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಬೃಹತ್ ಸಾರ್ವಜನಿಕ ಗಣೇಶನನ್ನು ಸಹ ಪ್ರತಿಷ್ಠಾಪಿಸಲಾಗಿದೆ.

ಕಳೆದ ಒಂದೆರಡು ತಿಂಗಳನಿಂದ ಮೂರ್ತಿ ತಯಾರಕರಿಂದ ವಿವಿಧ ಆಕೃತಿ ಪಡೆದಿದ್ದ ಗಣೇಶ ಮೂರ್ತಿಗಳಾದ ಪಂಚಮುಖಿ ಗಣೇಶ, ಶಿವರೂಪಿ ಗಣೇಶ, ಸಾಯಿರೂಪಿ ಗಜಾನನ, ನಂದಿರೂಢ ಏಕದಂತ, ವಿಷ್ಣುರೂಪಿ ವಕ್ರತುಂಡ, ಹಸುವಿನ ಮೇಲೆ ಕುಳಿತ ಗಣೇಶ, ಗರುಡನ ಮೇಲೆ ಕುಳಿತಿರುವ ಗಣೇಶ, ನವಿಲಿನ ಮೇಲೆ ಕುಣಿವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ, ವೆಂಕಟೇಶ ರೂಪಿ ವಿಘ್ನೇಶ್ವರ ಮೂರ್ತಿಗಳು ಸೇರಿದಂತೆ ವಿವಿಧ ಭಂಗಿಯ ಗಣೇಶ ಮೂರ್ತಿಗಳನ್ನು ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಲಾಗಿದೆ.

ಹಾವೇರಿ ಕಾ ರಾಜಾ: ಹಾವೇರಿ ಪ್ರಮುಖ ವೃತ್ತಗಳಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಶಾಮಿಯಾನ ಹಾಕಿ ಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿ ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹಾವೇರಿ ನಗರದ ಸುಭಾಷ್‌ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಬೃಹತ್ ಗಾತ್ರದ ‘ಹಾವೇರಿ ಕಾ ರಾಜಾ’ ಗಣಪ ಗಮನ ಸೆಳೆಯುತ್ತಿದೆ.

ಸ್ಥಳೀಯ ಅಶ್ವಿನಿ ನಗರದಲ್ಲಿ ಪ್ರತಿಷ್ಠಾಪಿಸಿರುವ ಶಿರಡಿ ಸಾಯಿಬಾಬಾ ರೂಪಿಯ ಗಣೇಶ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ನಗರ ಕಲ್ಲುಮಂಟಪ ರಸ್ತೆಯಲ್ಲಿ ಹುಲಿ ಚರ್ಮದ ಮೇಲೆ ತ್ರಿಶೂಲ ಹಿಡಿದು ಕುಳಿತಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಕಣ್ಮನ ಸೆಳೆಯುತ್ತಿದೆ. ಬಣ್ಣದ ಮಠದ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ಸಿಂಹಾಸನರೂಢ ಗಣೇಶ ಮೂರ್ತಿ ಕಣ್ಮನ ಸೆಳೆಯುತ್ತಿದೆ.

ಅಂಬೇಡ್ಕರ್‌ ವೃತ್ತದಲ್ಲಿನ ಸಿಂಹದ ಮೇಲೆ ಕುಳಿತಿರುವ ಗಣೇಶ, ಬಸವೇಶ್ವರ ನಗರದಲ್ಲಿ ಪ್ರತಿಷ್ಠಾಪಿಸಿರುವ ಕೈಯಲ್ಲಿ ಶಂಖ, ತ್ರಿಶೂಲ ಹಿಡಿದು ಕುಳಿತಿರುವ ಗಣೇಶ ಮೂರ್ತಿ ಆಕರ್ಷಿಸುತ್ತಿವೆ.

ನಗರದ ರೈಲು ನಿಲ್ದಾಣ, ಬಸ್ತಿ ಓಣಿ, ಕೆಇಬಿ, ವಿದ್ಯಾನಗರ ಪಶ್ಚಿಮ, ಯಾಲಕ್ಕಿ ಓಣಿ, ನೇತಾಜಿ ನಗರ, ಶಿವಾಜಿ ನಗರ, ನಗರಸಭೆ, ಮಹಾತ್ಮಾ ಗಾಂಧಿ ವೃತ್ತ, ಎಲ್‍ಬಿಎಸ್ ಮಾರ್ಕೇಟ್, ಉದಯ ನಗರ, ವಿಜಯ ನಗರ, ಇಜಾರಿಲಕ್ಮಾಪೂರದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳು ನೋಡುಗರನ್ನು ಕೈ ಬೀಸಿ ಕರೆಯುತ್ತಿವೆ. 

ಸಾರ್ವಜನಿಕ ಗಜಾನನ ಉತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣೇಶನ ವೈವಿದ್ಯಮಯ ಮೂರ್ತಿಗಳು ಗ್ರಾಮೀಣ ಭಾಗದ ನಗರಕ್ಕೆ ಬಂದು ವೀಕ್ಷಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.