
ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯ ಮತದಾರರ ನೋಂದಣಿ ಪ್ರಕ್ರಿಯೆ ಚುರುಕಿನಿಂದ ನಡೆಯುತ್ತಿದ್ದು, ಇದರ ನಡುವೆಯೇ ಟಿಕೆಟ್‌ಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಪೈಪೋಟಿ ಶುರುವಾಗಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿ ಐವರು ಈಗಾಗಲೇ ಪಕ್ಷದ ವರಿಷ್ಠರಿಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತಷ್ಟು ಮಂದಿ ಅರ್ಜಿ ಸಲ್ಲಿಸುವುದಾಗಿಯೂ ಪಕ್ಷದ ಮೂಲಗಳು ತಿಳಿಸಿವೆ.
ಹಾವೇರಿ, ಉತ್ತರ ಕನ್ನಡ, ಗದಗ ಹಾಗೂ ಧಾರವಾಡ ಜಿಲ್ಲೆಗಳನ್ನು ಒಳಗೊಂಡು ಪದವೀಧರರ ಪಶ್ಚಿಮ ಮತಕ್ಷೇತ್ರ ರಚಿಸಲಾಗಿದೆ. ಈ ಜಿಲ್ಲೆಗಳಲ್ಲಿರುವ 2022ರ ಅಕ್ಟೋಬರ್ 30ಕ್ಕಿಂತ ಮುಂಚೆ ಪದವಿ ಮುಗಿಸಿದ ಎಲ್ಲರೂ ಮತದಾನ ಮಾಡಲು ಅರ್ಹರಾಗಿದ್ದಾರೆ. ನೋಂದಣಿ ಮಾಡಿದವರಿಗೆ ಮಾತ್ರ ಮತದಾನದ ಹಕ್ಕು ಸಿಗಲಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಈ ಬಾರಿಯೂ ಎರಡೂ ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ಚುರುಕಿನ ಪೈಪೋಟಿಯಿದೆ. ಎರಡೂ ಪಕ್ಷದಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಯಾರಿಗೆ ಟಿಕೆಟ್ ನೀಡಿದರೆ ಸೂಕ್ತ ಎಂಬ ಬಗ್ಗೆ ಪಕ್ಷದ ವರಿಷ್ಠರು ಚರ್ಚೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರಾದ ಆರ್.ಎಂ.ಕುಬೇರಪ್ಪ, ಬಸವರಾಜ ಗುರಿಕಾರ, ಮೋಹನ ಲಿಂಬಿಕಾಯಿ, ಸಲ್ಲುಖಾನ್ ಪಠಾಣ, ರಾಘವೇಂದ್ರ ಬಾಸೂರು ಅವರು ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿ–ಧಾರವಾಡದ ಮೋಹನ್ ಲಿಂಬಿಕಾಯಿ ಅವರು ಈಗಾಗಲೇ ಒಂದು ಬಾರಿ ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿದ್ದರು. ನಂತರ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ತಮಗೆ ಟಿಕೆಟ್ ನೀಡಿದರೆ ಗೆಲುವು ಸಾಧ್ಯವೆಂದು ಅವರು ವರಿಷ್ಠರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಆರ್.ಎಂ.ಕುಬೇರಪ್ಪ ಅವರು ಈ ಬಾರಿಯೂ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆ.ಪಿ.ಸಿ.ಸಿ ಶಿಕ್ಷಕರ ಹಾಗೂ ಪದವೀಧರರ ಘಟಕದ ನಿಕಟಪೂರ್ವ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕುಬೇರಪ್ಪ, ತಮಗೆ ಟಿಕೆಟ್ ನೀಡುವಂತೆ ಪೈಪೋಟಿ ಸಹ ನಡೆಸುತ್ತಿದ್ದಾರೆ.
ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ನ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿರುವ ಬಸವರಾಜ ಗುರಿಕಾರ ಅವರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಹೆಚ್ಚಿನ ಮತ ಪಡೆದಿದ್ದ ಅವರು, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದರೆ ಗೆಲುವು ತಮ್ಮದಾಗುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹಲವು ವರಿಷ್ಠದ ಜೊತೆ ಸಂಪರ್ಕದಲ್ಲಿರುವ ಅವರು, ಶಿಕ್ಷಕರ ಸಂಘಟನೆ ಹಾಗೂ ಪಕ್ಷದ ಸಂಘಟನೆ ಮುಂದಿಟ್ಟುಕೊಂಡು ಟಿಕೆಟ್‌ಗೆ ಬೇಡಿಕೆ ಇರಿಸಿದ್ದಾರೆ.
ಕೆಪಿಸಿಸಿ ಪದವೀಧರರ ಘಟಕದ ರಾಜ್ಯ ಕಾರ್ಯದರ್ಶಿಯೂ ಆಗಿರುವ ಹಾವೇರಿಯ ರಾಘವೇಂದ್ರ ಬಾಸೂರು ಸಹ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹಲವು ತಿಂಗಳ ಹಿಂದೆಯೇ ಉದ್ಯೋಗ ಮೇಳ, ಶಿಕ್ಷಕರಿಗೆ ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳ ಮೂಲಕ ಪ್ರಚಾರ ಶುರು ಮಾಡಿದ್ದಾರೆ.
18 ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕರು: ನಾಲ್ಕು ಜಿಲ್ಲೆಗಳ 30 ತಾಲ್ಲೂಕುಗಳ ಪೈಕಿ 18 ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಶಾಸಕರ ಬೆಂಬಲದಿಂದ ಗೆಲುವು ಸಾಧಿಸಬಹುದು ಎಂಬುದು ಕಾಂಗ್ರೆಸ್ ಆಕಾಂಕ್ಷಿಗಳ ಲೆಕ್ಕಾಚಾರವಾಗಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ 70,300 ಮತದಾರರಿದ್ದರು. ಆದರೆ, ಈ ಬಾರಿ ಅಕ್ಟೋಬರ್ 24ರವರೆಗೆ ಕೇವಲ 2600 ಮಂದಿ ಮತದಾರರು ನೋಂದಣಿ ಮಾಡಿಸಿದ್ದಾರೆ. ನ. 6ರೊಳಗೆ ನೋಂದಣಿ ಮಾಡಿಸಲು ಅವಕಾಶವಿದೆ. ನೋಂದಣಿ ಅಭಿಯಾನವನ್ನೂ ಚುರುಕಿನಿಂದ ನಡೆಸಲು ಬಿಜೆಪಿ–ಕಾಂಗ್ರೆಸ್ ಎರಡೂ ಪಕ್ಷದವರು ತೀರ್ಮಾನಿಸಿದ್ದಾರೆ. ಇದರ ನಡುವೆಯೇ ಪಕ್ಷೇತರ ಅಭ್ಯರ್ಥಿಗಳು ಸಹ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.
ಪದವೀಧರರ ಪಶ್ಚಿಮ ಮತಕ್ಷೇತ್ರ ವ್ಯಾಪ್ತಿಯ 18 ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ. ವರಿಷ್ಠರು ತೀರ್ಮಾನಿಸಿದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತೇವೆ-ಸಂಜೀವಕುಮಾರ ನೀರಲಗಿ, ಕಾಂಗ್ರೆಸ್ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.