ಹಾವೇರಿ: ಇಲ್ಲಿಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಿತು.
ಸೋಮವಾರ ಬೆಳಿಗ್ಗೆ ಪುರಸಿದ್ಧೇಶ್ವರ ದೇವಸ್ಥಾನದಿಂದ ಹೊರಟ ಗುಗ್ಗಳದ ಮೆರವಣಿಗೆ ನಗರದ ವಿವಿಧ ರಸ್ತೆಗಳಲ್ಲಿ ಸಾಗಿತು. ಬಳಿಕ, ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುಗ್ಗಳ ಮೆರವಣಿಗೆ ಸಮಾಪ‍್ತಗೊಂಡಿತು.
ಜಾತ್ರೆಯ ವಿಶೇಷತೆಯಲ್ಲಿ ಒಂದಾದ ಅಗ್ನಿಕುಂಡ ಹಾಯುವ ಸಂಪ್ರದಾಯವೂ ನಡೆಯಿತು. ದೇವಸ್ಥಾನ ಎದುರಿನ ಜಾಗದಲ್ಲಿ ಅಗ್ನಿಕುಂಡ ಹೊತ್ತಿಸಲು ವ್ಯವಸ್ಥೆ ಮಾಡಲಾಗಿತ್ತು. ಮಳೆ ಇದ್ದ ಕಾರಣಕ್ಕೆ, ದೊಡ್ಡ ಪ್ರಮಾಣದ ಅಗ್ನಿಕುಂಡ ಸಿದ್ಧಪಡಿಸಲು ಅಡ್ಡಿ ಉಂಟಾಯಿತು. ಹೀಗಾಗಿ, ದೇವಸ್ಥಾನದ ಆವರಣದಲ್ಲಿಯೇ ಸಣ್ಣ ಪ್ರಮಾಣದಲ್ಲಿ ಅಗ್ನಿಕುಂಡ ವ್ಯವಸ್ಥೆ ಮಾಡಲಾಯಿತು. ಅದೇ ಸ್ಥಳದಲ್ಲಿ ಅಗ್ನಿಕುಂಡ ಹಾಯುವ ಕಾರ್ಯಕ್ರಮ ಜರುಗಿತು.
ವೀರಭದ್ರೇಶ್ವರ ದೇವರ ರಥೋತ್ಸವ ಸೋಮವಾರ ಸಂಜೆ ಅದ್ಧೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದಿದ್ದರು. ಹೂವುಗಳಿಂದ ಅಲಂಕರಿಸಿದ್ದ ರಥೋತ್ಸವದಲ್ಲಿ ಪಾಲ್ಗೊಂಡರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.
ಅರ್ಥಪೂರ್ಣ ಆಚರಣೆ: ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನ ಕಮಿಟಿಯವರು, ವೀರಭದ್ರೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಯೋಜಿಸಿದ್ದರು. ಅ. 18ರಂದು ವೀರಭದ್ರ ದೇವರಿಗೆ ಕಂಕಣಧಾರಣ ಕಾರ್ಯಕ್ರಮವೂ ಅರ್ಥಪೂರ್ಣವಾಗಿ ನಡೆಯಿತು. ಅ. 19ರಂದು ಅನ್ನಸಂತರ್ಪಣೆ ಹಾಗೂ ವೀರಭದ್ರ ದೇವರ ಹೂವಿನ ತೇರು ಎಳೆಯಲಾಯಿತು.