ADVERTISEMENT

ಗುಡ್ಡದಮಾದಾಪುರ: 3 ಸಾವಿರ ಎಕರೆ ಅರಣ್ಯಕ್ಕೆ ಗ್ರಾಮಸ್ಥರೇ ಕಾವಲು

ರಟ್ಟೀಹಳ್ಳಿ ತಾಲ್ಲೂಕಿನ ಗುಡ್ಡದಮಾದಾಪುರ ಗ್ರಾಮಸ್ಥರ ಕಾಯಕ: ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯ

​ಪ್ರಜಾವಾಣಿ ವಾರ್ತೆ
Published 27 ಮೇ 2025, 4:42 IST
Last Updated 27 ಮೇ 2025, 4:42 IST

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಡ್ಡದಮಾದಾಪುರ ಬಳಿ ಹಸಿರಿನಿಂದ ಕೊಂಗೊಳಿಸಿದ ಅರಣ್ಯ ಪ್ರದೇಶ

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಡ್ಡದಮಾದಾಪುರ ಬಳಿ ಹಸಿರಿನಿಂದ ಕೊಂಗೊಳಿಸಿದ ಅರಣ್ಯ ಪ್ರದೇಶ

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಡ್ಡದಮಾದಾಪುರದ ಗ್ರಾಮಸ್ಥರು 3,000 ಎಕರೆ ಅರಣ್ಯ ಪ್ರದೇಶಕ್ಕೆ ಕಾವಲು ಕಾಯುತ್ತಿದ್ದು, ಅವರ ಕಾಯಕದಿಂದ ಅರಣ್ಯ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತಿದೆ.

ADVERTISEMENT

ಪರಿಸರ ಕಾಳಜಿ ಹೊಂದಿರುವ ಗ್ರಾಮಸ್ಥರು, ಅರಣ್ಯ ರಕ್ಷಣೆಗಾಗಿ ಪಣ ತೊಟ್ಟಿರುವುದು ಇತರರಿಗೆ ಮಾದರಿಯಾಗಿದೆ. ಕೆಲ ವರ್ಷಗಳ ಹಿಂದೆ ಅರಣ್ಯ ಭೂಮಿಗಳಲ್ಲಿದ್ದ ಗಿಡಗಳನ್ನು ಕಡಿಸಿದ್ದ ರಾಜ್ಯ ಸರ್ಕಾರ, ಹರಿಹರದ ಬಿರ್ಲಾ ಕಂಪನಿಯವರಿಗೆ ರೆಯನ್ ಬಟ್ಟೆ ನೂಲು ತೆಗೆಯುವ ಕಚ್ಚಾ ಮಾಲು ಪೂರೈಸಿತ್ತು. ಇದಾದ ನಂತರ ಹೋರಾಟಕ್ಕೆ ಇಳಿದಿದ್ದ ಗ್ರಾಮಸ್ಥರು, ತಮ್ಮೂರಿನ ಅರಣ್ಯ ಪ್ರದೇಶದ ರಕ್ಷಕರಾಗಿ ನಿಂತುಕೊಂಡರು.

ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿದ್ದ ಗಿಡಗಳನ್ನು ಉರುವಲು ಉದ್ದೇಶಕ್ಕಾಗಿ ಕೆಲವರು ಕಡಿಯುತ್ತಿದ್ದರು. ಜಾನುವಾರುಗಳಿಗೆ ಉತ್ತಮ ಮೇವು ಸಿಗುವುದೆಂದು ತಿಳಿದು ಹಲವರು, ಬೆಂಕಿ ಹಚ್ಚುತ್ತಿದ್ದರು. ಪ್ರಾಣಿಗಳನ್ನು ಬೇಟೆಯಾಡುವುದು, ಕಟ್ಟಿಗೆ ಕಳ್ಳ ಸಾಗಣೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ‘ಕಾಡು ಉಳಿದರೆ, ನಾಡು ಉಳಿಯುತ್ತದೆ’ ಎಂದು ತಿಳಿದ ಗ್ರಾಮಸ್ಥರು,
ಅರಣ್ಯ ರಕ್ಷಣೆಗೆ ಒತ್ತು ನೀಡಲಾರಂಭಿಸಿದ್ದರು. ಇದರ ಪರಿಣಾಮವಾಗಿ ಅರಣ್ಯ ಪ್ರದೇಶವು ಸಮೃದ್ಧವಾಗಿದೆ.

ಅರಣ್ಯ ರಕ್ಷಣೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶಪ್ಪ ಕಾಗಿನೆಲ್ಲಿ, ‘ಅರಣ್ಯ ಸಂಪತ್ತು ಉಳಿಸಿ–ಬೆಳೆಸುವ ಕೆಲಸ ಮಾಡುತ್ತಿದ್ದೇವೆ. ಅರಣ್ಯ ರಕ್ಷಣೆ ಎಂದರೆ, ಕೇವಲ ನರ್ಸರಿ ಬೆಳೆಸಿ ಸುಮ್ಮನಾಗುವುದಲ್ಲ. ಸಸಿಗಳನ್ನು ಹಚ್ಚಿ ಬಿಟ್ಟರೆ ಸಾಲದು, ಅವುಗಳನ್ನು ನಿರಂತರವಾಗಿ ರಕ್ಷಿಸುವುದೂ ಮುಖ್ಯ. ನಮ್ಮೂರಿನ ಜನರೆಲ್ಲರೂ ಸೇರಿ ಅರಣ್ಯ ಪ್ರದೇಶ ರಕ್ಷಿಸುತ್ತಿದ್ದು, ಮುಂಬರುವ ದಿನಗಳಲ್ಲೂ ಅರಣ್ಯಕ್ಕೆ ಯಾವುದೇ ಧಕ್ಕೆಯಾಗಲು ಬಿಡುವುದಿಲ್ಲ’ ಎಂದರು.

‘ಜೀಪ್‌ನಲ್ಲಿ ಗ್ರಾಮಸ್ಥರ ಪಹರೆ; ಕಾಡು ನಾಶಕ್ಕೆ ಲಗಾಮು’

‘22 ವರ್ಷಗಳ ಹಿಂದೆ ಗುಡ್ಡದಮಾದಾಪುರ ಗ್ರಾಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಗ್ರಾಮ ಅರಣ್ಯ ಸಮಿತಿ ರಚಿಸಲಾಯಿತು. ಅರಣ್ಯ ರಕ್ಷಣೆಗೆ ಪಣ ತೊಟ್ಟಿದ್ದ ಕರಿಬಸಪ್ಪ ಕಾಗಿನೆಲ್ಲಿ ಹಾಗೂ ಪರಮೇಶಪ್ಪ ಕಾಗಿನೆಲ್ಲಿ, ಒಂದು ಮಹೇಂದ್ರ ಜೀಪ್ ಕೊಡಿಸಿದರು. ಅದರಲ್ಲೇ ಗ್ರಾಮಸ್ಥರು, ಅರಣ್ಯದಲ್ಲಿ ಗಸ್ತು ತಿರುಗಲಾರಂಭಿಸಿದರು. ಅರಣ್ಯ ನಾಶ, ಕಳ್ಳ ಸಾಗಣೆ, ಅರಣ್ಯ ಒತ್ತುವರಿ, ನೀಲಗಿರಿ ನೆಡುತೋಪು, ಗಣಿಗಾರಿಕೆ, ಉರುವಲು ಕಟ್ಟಿಗೆ, ನಿರಂತರ ಕಾಡನ್ನು ನಾಶ ಮಾಡುವ ಕೆಲಸಕ್ಕೆ ಲಗಾಮು ಬಿದ್ದಿತು’ ಎಂದು ಗ್ರಾಮಸ್ಥರು ತಿಳಿಸಿದರು.

‘ಗ್ರಾಮದಲ್ಲಿ ಕ್ರಮೇಣ ಅರಣ್ಯ ರಕ್ಷಣೆಯ ತಿಳಿವಳಿಕೆ ಹೆಚ್ಚಿತು. ಅರಣ್ಯ ರಕ್ಷಣೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಯಿತು. ಅವರ ಜೊತೆಯಲ್ಲಿಯೇ ‘ಸಿದ್ದೇಶ್ವರ ಗ್ರಾಮ ಅರಣ್ಯ ಸಮಿತಿ’ ಸದಸ್ಯರ ಸಹಕಾರದಿಂದ ಅರಣ್ಯ ರಕ್ಷಣೆ ಕಾಯಕ ಮುಂದುವರಿದಿದೆ. ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಸೇರಿ 86 ತಳಿಯ ಗಿಡಗಳು ಹಾಗೂ ಔಷಧ ಸಸ್ಯಗಳು ದಟ್ಟವಾಗಿ ಬೆಳೆದಿವೆ. ಅರಣ್ಯದಲ್ಲಿ ಕರಡಿಗಳು ವಾಸಿಸುತ್ತಿದ್ದು, ಅಲ್ಲಲ್ಲಿ ಗುಹೆಗಳಿವೆ. ಚಿರತೆ, ಕಾಡುಹಂದಿ, ನವಿಲು, ಚಿಗರಿ, ಕಾಡು ಕೋಳಿ ಸೇರಿದಂತೆ ವಿವಿಧ ಪ್ರಾಣಿ–ಪಕ್ಷಿ ಸಂಕುಲವೂ ಅರಣ್ಯದಲ್ಲಿದೆ’ ಎಂದು ಮಾಹಿತಿ ನೀಡಿದರು.

ನಾವು ಪರಿಸರ ನಾಶ ತಡೆಗಟ್ಟುತ್ತಿದ್ದು, ಇದರಿಂದ ತಾಪಮಾನ ಏರಿಕೆ ತಡೆಯಲು ಸಾಧ್ಯ. ಅರಣ್ಯ ರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕು.
- ಕರಿಬಸಪ್ಪ ಕಾಗಿನೆಲ್ಲಿ, ಅಧ್ಯಕ್ಷ, ಸಿದ್ದೇಶ್ವರ ಗ್ರಾಮ ಅರಣ್ಯ ಸಮಿತಿ, ಗುಡ್ಡದಮಾದಾಪುರ
ಅರಣ್ಯ ರಕ್ಷಿಸುವ ಗುಡ್ಡದಮಾದಾಪುರ ಜನರು ಇತರರಿಗೆ ಮಾದರಿಯಾಗಿದ್ದಾರೆ. ಪ್ರತಿ ಗ್ರಾಮದಲ್ಲೂ ಅರಣ್ಯ ರಕ್ಷಣೆ ಕೆಲಸವಾಗಬೇಕು.
- ಎಸ್.ಡಿ. ಬಳಿಗಾರ, ಮುಖ್ಯಸ್ಥ, ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.