ADVERTISEMENT

ಗುತ್ತಲ | ವೈದ್ಯರ ಕೊರತೆ: ಸೂಕ್ತ ಚಿಕಿತ್ಸೆಗೆ ಪರದಾಟ

ಗುತ್ತಲ ಆಸ್ಪತ್ರೆಯಲ್ಲಿ ಸೌಕರ್ಯಗಳ ಕೊರತೆ

ದುರಗಪ್ಪ ಪಿ.ಕೆಂಗನಿಂಗಪ್ಪನವರ
Published 26 ಜುಲೈ 2024, 4:42 IST
Last Updated 26 ಜುಲೈ 2024, 4:42 IST
ಗುತ್ತಲ ಸಮುದಾಯ ಆಸ್ಪತ್ರೆಯಲ್ಲಿ ರಕ್ತ ಮತ್ತು ಕಫ ಪರೀಕ್ಷೆಗೆ ಸರದಿಯಲ್ಲಿ ನಿಂತಿರುವ ಜನರು
ಗುತ್ತಲ ಸಮುದಾಯ ಆಸ್ಪತ್ರೆಯಲ್ಲಿ ರಕ್ತ ಮತ್ತು ಕಫ ಪರೀಕ್ಷೆಗೆ ಸರದಿಯಲ್ಲಿ ನಿಂತಿರುವ ಜನರು   

ಗುತ್ತಲ: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರವು ಹಲವು ಸೌಕರ್ಯಗಳಿಂದ ವಂಚಿತವಾಗಿದ್ದು, ವೈದ್ಯರ ಕೊರತೆಯಿಂದ ಚಿಕಿತ್ಸೆ ಪಡೆಯಲು ಜನರು ಪರದಾಡುತ್ತಿದ್ದಾರೆ. 

ಶಿರಹಟ್ಟಿ, ಲಕ್ಷ್ಮೇಶ್ವರ, ಹಡಗಲಿ, ರಾಣೆಬೆನ್ನೂರ ತಾಲ್ಲೂಕಿನ ಗಡಿ ಗ್ರಾಮಗಳನ್ನು ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಗಳ ಜನರು, ಗುತ್ತಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ಆದರೆ, ಅವರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೆಂಬ ಆರೋಪವಿದೆ. ಇದೇ ಕಾರಣಕ್ಕೆ ಹಲವರು, ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಐವರು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸಬೇಕಾದ ಆಸ್ಪತ್ರೆಯಲ್ಲಿ ಕೇವಲ 3 ಜನ ವೈದ್ಯರಿದ್ದಾರೆ. ಇಬ್ಬರು ವೈದ್ಯಾಧಿಕಾರಿಗಳ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. ಸೊಂಟ ಮತ್ತು ಕಾಲುನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ವ್ಹೀಲ್‌ಚೇರ್‌ ತಂದುಕೊಡಲು ಕೆಲ ಸಿಬ್ಬಂದಿ ಹಿಂದೇಟು ಹಾಕುತ್ತಿರುವ ಆರೋಪಗಳಿವೆ.

ADVERTISEMENT

ರಕ್ತ ಮತ್ತು ಕಫ ಪರೀಕ್ಷೆ ಮಾಡಿಕೊಳ್ಳಲು ಪ್ರತಿದಿನ 100ಕ್ಕೂ ಹೆಚ್ಚು ಜನರು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. 

ಈ ಹಿಂದೆ ಹೆರಿಗೆಗಾಗಿ ಮಹಿಳೆಯರು, ಗುತ್ತಲ ಆಸ್ಪತ್ರೆಗೆ ಬಂದು ಹೋಗುತ್ತಿದ್ದರು. ಈಗ ವೈದ್ಯರ ಕೊರತೆ ಹಾಗೂ ನಾನಾ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ಬರುವ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಅವರೆಲ್ಲರೂ ಹೆರಿಗೆಗಾಗಿ ದೂರದ ಹಾವೇರಿ ಹಾಗೂ ಬೇರೆ ಕಡೆ ಹೋಗುತ್ತಿದ್ದಾರೆ.

‘ಗುತ್ತಲ ಆಸ್ಪತ್ರೆಗೆಯಲ್ಲಿ ಹೆರಿಗೆ ಚಿಕಿತ್ಸೆ ಸಮರ್ಪಕವಾಗಿಲ್ಲ. ಸೌಕರ್ಯವಿಲ್ಲವೆಂದು ಹೇಳಿ ಸಿಬ್ಬಂದಿಯೇ ಬೇರೆ ಬೇರೆ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ’ ಎಂದು ತಿಮ್ಮಾಪೂರ ತಾಂಡಾದ ಹಾಲವ್ವ ಲಮಾಣಿ ಹೇಳಿದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಸನದ ಕೊರತೆ ಇದೆ. ಹೊರ ರೋಗಿಗಳು ಕಾರಿಡಾರ್ ಮತ್ತು ಹೊರಗಡೆ ನೆಲದ ಮೇಲೆ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ.

ಆಸ್ಪತ್ರೆಯ ಮುಂಭಾಗದಲ್ಲಿ ಎಗ್‌ರೈಸ್ ಅಂಗಡಿ, ಕೋಳಿ ಮಾಂಸ ಮಾರಾಟ ಅಂಗಡಿ ಸೇರಿದಂತೆ ಹಲವು ಅಂಗಡಿಗಳಿವೆ. ಅಂಗಡಿಗಳ ತ್ಯಾಜ್ಯದಿಂದ ಆಸ್ಪತ್ರೆಯಲ್ಲಿ ದುರ್ನಾತ ಬರುತ್ತಿದೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು, ಅಂಗಡಿಗಳನ್ನು ತೆರವು ಮಾಡುವಂತೆ ಹಲವು ಬಾರಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅಂಗಡಿ ತೆರವು ಮಾಡಲು ಪಟ್ಟಣ ಪಂಚಾಯತಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಸಿಬ್ಬಂದಿ ದೂರಿದರು.

ಅಡ್ಡಾದಿಡ್ಡಿ ವಾಹನ ನಿಲುಗಡೆ: ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಆಸ್ಪತ್ರೆ ಪಕ್ಕವೇ ಬಸ್‌ ನಿಲ್ದಾಣವಿದೆ. ಬೇರೆ ಬೇರೆ ಊರುಗಳಿಗೆ ಹೋಗುವ ಜನರು, ಆಸ್ಪತ್ರೆಯ ಆವರಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ಜನರು ಹಾಗೂ ರೋಗಿಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ. ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.

ಆಸ್ಪತ್ರೆ ಎದುರಿಗಿರುವ ಕೋಳಿ ಮಾಂಸ ಮಾರಾಟ ಅಂಗಡಿ ತೆರವಿಗೆ ಹಲವು ಬಾರಿ ಸೂಚಿಸಲಾಗಿದೆ. ಖಾಸಗಿ ಸ್ಥಳದಲ್ಲಿ ಇರುವುದರಿಂದ ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲ ಅಂಗಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು

-ದೇವಾನಂದ ದೊಡ್ಡಮನಿ ಪ.ಪಂ ಮುಖ್ಯಾಧಿಕಾರಿ

ತಾಲ್ಲೂಕು ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಗುತ್ತಲ ಆಸ್ಪತ್ರೆಯಲ್ಲಿ ದೊರೆಯುವಂತಾಗಬೇಕು. ಅಪಘಾತ ವಿಷ ಕುಡಿದವರಿಗೆ ಮತ್ತು ಗರ್ಭಣಿಯರಿಗೆ ತುರ್ತು ಚಿಕಿತ್ಸೆ ಸಿಗುವಂತೆ ಸರ್ಕಾರ ಗಮನ ಹರಿಸಬೇಕು. ಸ್ಕ್ಯಾನಿಂಗ್ ಮಿಷನ್ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಬೇಕು

-ಜಾವೀದ ಹಾಲಗಿ, ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.