ADVERTISEMENT

ಹಾವೇರಿ: ಸೌಲಭ್ಯ ವಂಚಿತ ‘ಶ್ರಮಜೀವಿ’ಗಳು

ಮಾರುಕಟ್ಟೆಯ ಭಾರ ಹೊರುವ ಹಮಾಲಿ ಕಾರ್ಮಿಕರು | ಪರವಾನಗಿ ಇದ್ದರೂ ಸಿಗದ ಸೌಲಭ್ಯಗಳು | ದುಡಿಮೆ ನಂಬಿ ಬದುಕು: ಕೆಲಸ ಸಿಕ್ಕರಷ್ಟೇ ಮನೆಮಂದಿಗೆ ಊಟ

ಸಂತೋಷ ಜಿಗಳಿಕೊಪ್ಪ
Published 15 ಸೆಪ್ಟೆಂಬರ್ 2025, 2:59 IST
Last Updated 15 ಸೆಪ್ಟೆಂಬರ್ 2025, 2:59 IST
ಹಾವೇರಿಯ ಮಾರುಕಟ್ಟೆಯಲ್ಲಿ ಸಿಮೆಂಟ್ ಚೀಲಗಳನ್ನು ಹೊತ್ತೊಯ್ದು ಹಮಾಲಿ ಕಾರ್ಮಿಕರು
ಹಾವೇರಿಯ ಮಾರುಕಟ್ಟೆಯಲ್ಲಿ ಸಿಮೆಂಟ್ ಚೀಲಗಳನ್ನು ಹೊತ್ತೊಯ್ದು ಹಮಾಲಿ ಕಾರ್ಮಿಕರು   

ಹಾವೇರಿ: ಮರಿ ಕಲ್ಯಾಣ ಖ್ಯಾತಿಯ ಹಾವೇರಿಯಲ್ಲಿ ವಿಶ್ವಗುರು ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವದಂತೆ ದುಡಿಮೆ ನಂಬಿ ಬದುಕು ಕಟ್ಟಿಕೊಂಡಿರುವ ನೂರಾರು ಹಮಾಲಿಗಳು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ, ವ್ಯಾಪಾರ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಕೃಷಿ ಉತ್ಪನ್ನ, ಕಿರಾಣಿ, ಕಾಳು, ಕಟ್ಟಡ ನಿರ್ಮಾಣ ಸಾಮಗ್ರಿ, ಅಗತ್ಯ ವಸ್ತುಗಳ ಪೂರೈಕೆ–ಸಾಗಣೆ ನಿತ್ಯವೂ ನಡೆಯುತ್ತದೆ.

ವಾಹನಗಳಲ್ಲಿ ಬರುವ ಹಾಗೂ ಬೇರೆಡೆ ಸಾಗಿಸುವ ವಸ್ತುಗಳನ್ನು ಹಮಾಲಿಗಳು, ಲೋಡಿಂಗ್–ಅನ್‌ಲೋಡಿಂಗ್‌ ಮಾಡುತ್ತಿದ್ದಾರೆ. ಜೊತೆಗೆ, ವ್ಯಾಪಾರಿಗಳ ಗೋದಾಮು ಹಾಗೂ ಅಂಗಡಿಗಳಲ್ಲಿ ಭಾರ ಹೊರುವ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ADVERTISEMENT

ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಾವೇರಿಯಲ್ಲಿ ವಾಸಿಸುವ ಬಹುಪಾಲು ಮಂದಿ ರೈತರೇ ಆಗಿದ್ದಾರೆ. ಮುಂಗಾರು ಹಾಗೂ ಹಿಂಗಾರಿನಲ್ಲಿ ಕೃಷಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಇಂಥ ಉತ್ಪನ್ನಗಳ ಲೋಡಿಂಗ್–ಅನ್‌ಲೋಡಿಂಗ್‌ನಲ್ಲೂ ಹಮಾಲಿಗಳು ಭಾಗಿಯಾಗುತ್ತಾರೆ.

ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಸವಣೂರು ಸೇರಿದಂತೆ ಹಲವೆಡೆ ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. ಅಲ್ಲಿಯೂ ಹಮಾಲಿಗಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 400 ಮಂದಿ ಪರವಾನಗಿ ಪಡೆದ ಹಮಾಲಿಗಳಿದ್ದಾರೆ. ಆದರೆ, ಸರ್ಕಾರದಿಂದ ಸಿಗಬೇಕಾದ ಯಾವುದೇ ಸೌಲಭ್ಯಗಳೂ ಅವರಿಗೆ ಸಿಗುತ್ತಿಲ್ಲವೆಂಬ ಆರೋಪವಿದೆ.

ಸುಮಾರು 20–30 ವರ್ಷದಿಂದ ಕೆಲಸ ಮಾಡುತ್ತಿರುವ ಬಹುತೇಕ ಹಮಾಲಿಗಳಿಗೆ, ಸರ್ಕಾರದಿಂದ ಯಾವೆಲ್ಲ ಸೌಲಭ್ಯಗಳಿವೆ ಎಂಬ ಮಾಹಿತಿಯೂ ಇಲ್ಲ. ಅಕ್ಷರಸ್ಥರು ಹಾಗೂ ಸಂಘಟನೆಯ ಬಲ ಇರುವವರು ಮಾತ್ರ, ಕಚೇರಿಯಿಂದ ಕಚೇರಿಗೆ ಅಲೆದಾಡಿ ತಮ್ಮವರಿಗಷ್ಟೇ ಸೌಲಭ್ಯ ದೊರಕಿಸುತ್ತಾರೆ. ಬಹುತೇಕ ಹಮಾಲಿಗಳಿಗೆ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿಲ್ಲ.

ಎಪಿಎಂಸಿ ಕಾಯಕ ನಿಧಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿದ್ದರೂ, ಅವು ಅರ್ಹ ಹಮಾಲಿಗಳನ್ನು ತಲುಪುತ್ತಿಲ್ಲ. ಅನಕ್ಷರತೆ, ಬಡತನ ಹಾಗೂ ಹಿಂಜರಿಕೆ ಕಾರಣದಿಂದ ಹಮಾಲಿಗಳು ಇದ್ಯಾವುದನ್ನೂ ಪ್ರಶ್ನೆ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಬಹುತೇಕ ಕಾರ್ಮಿಕರು, ದಿನಕ್ಕೆ ₹300ರಿಂದ ₹ 500 ಸಿಕ್ಕರೆ ಸಾಕೆಂದು ಜೀವನ ನಡೆಸುತ್ತಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ವಿವಿಧ ದುಡಿಯುವ ವರ್ಗದವರ ಕಲ್ಯಾಣಕ್ಕಾಗಿ ಸರ್ಕಾರ, ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ ಸ್ಥಾಪಿಸಿದೆ. ಆದರೆ, ಅಸಂಘಟಿತ ವಲಯದಲ್ಲಿರುವ ಹಮಾಲಿಗಳ ಕಲ್ಯಾಣಕ್ಕೆ ಮಾತ್ರ ಯಾವುದೇ ಮಂಡಳಿಯಿಲ್ಲ. ಚಾಲ್ತಿಯಲ್ಲಿರುವ ಮಂಡಳಿಗೆ ಸೇರ್ಪಡೆ ಮಾಡುವ ಕೆಲಸವೂ ಸರ್ಕಾರದಿಂದ ಆಗುತ್ತಿಲ್ಲವೆಂದು ಹಮಾಲಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಹಾವೇರಿ ಮಾರುಕಟ್ಟೆಯಲ್ಲಿ ಕೆಲಸದ ನಿರೀಕ್ಷೆಯಲ್ಲಿ ಹಮಾಲಿ ಕಾರ್ಮಿಕರು ಕುಳಿತಿದ್ದರು

‘ನಮಗೆ ಓದಲು–ಬರೆಯಲು ಬರುವುದಿಲ್ಲ. ರಟ್ಟೆಯನ್ನು ನಂಬಿ ಕೆಲಸ ಮಾಡುತ್ತ ಬದುಕು ಕಟ್ಟಿಕೊಂಡಿದ್ದೇವೆ. ಹಾವೇರಿ ಜಿಲ್ಲೆಯಲ್ಲಿ ನಮ್ಮಂಥ ನೂರಾರು ಹಮಾಲಿಗಳು, ಲೋಡಿಂಗ್–ಅನ್‌ಲೋಡಿಂಗ್ ಹಾಗೂ ಇತರೆ ಭಾರ ಸಾಗಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ’ ಎಂದು ಹಾವೇರಿಯ ಹಮಾಲಿಗಳು ಅಸಮಾಧಾನ ಹೊರಹಾಕಿದರು.

‘ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಕಷ್ಟಪಟ್ಟು ಬೆವರು ಸುರಿಸಿ ದುಡಿಯುವ ನಾವು, ಒಮ್ಮೊಮ್ಮೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇರುತ್ತದೆ. ಈ ಸಮಾಜದಲ್ಲಿ ಕಷ್ಟಪಟ್ಟವರಿಗೆ ತೊಂದರೆ ಹೆಚ್ಚು ಎಂಬುದು ನಮಗೆ ಅರಿವಾಗಿದೆ’ ಎಂದು ಅಳಲು ತೋಡಿಕೊಂಡರು.

ಹಾವೇರಿ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರು ಲಾರಿಗೆ ಸರಕು ತುಂಬಿಸುವ ಕಾರ್ಯದಲ್ಲಿ ನಿರತರಾಗಿದ್ದರು
ಹಾವೇರಿ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರೊಬ್ಬರು ಸರಕು ಹೊತ್ತು ಸಾಗಿಸಿದರು ಪ್ರಜಾವಾಣಿ ಚಿತ್ರಗಳು / ಮಾಲತೇಶ ಇಚ್ಚಂಗಿ
ಜಿಲ್ಲೆಯಲ್ಲಿ ಹಮಾಲಿಗಳ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಸರ್ಕಾರದಲ್ಲಿಲ್ಲ. ಕೂಡಲೇ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಸಂಗ್ರಹಿಸಿ ಹಮಾಲಿಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು
ಬಸವರಾಜ ಪೂಜಾರ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ
20 ವರ್ಷದಿಂದ ಪರವಾನಗಿ ಪಡೆದು ಹಮಾಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರದಿಂದ ಇದುವರೆಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ದುಡಿಮೆ ನಂಬಿರುವ ನಮಗೆ ದಿನದ ಕೂಲಿಯೇ ಆಧಾರವಾಗಿದೆ
ಇಮಾಮ್‌ ಜಾಫರ್ ಹಮಾಲಿ
6 ವರ್ಷದಿಂದ ಹಮಾಲಿ ಮಾಡುತ್ತಿದ್ದೇನೆ. ದಿನವೂ ಕೆಲಸ ಸಿಗುವುದಿಲ್ಲ. ಊರಲ್ಲಿ ಕೃಷಿ ಕೆಲಸ ಸಿಕ್ಕರೆ ಮಾಡುತ್ತೇನೆ. ಇಲ್ಲದಿದ್ದರೆ ಹಾವೇರಿ ಬಂದು ಕೆಲಸಕ್ಕಾಗಿ ಅಲೆದಾಡುತ್ತೇನೆ
ದೊಡ್ಡಬಸಪ್ಪ ಉಳ್ಳಾಗಡ್ಡಿ ವರದಹಳ್ಳಿ
‘ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಿ’
‘ಹಮಾಲಿ ಕಾರ್ಮಿಕರ ಹಿತರಕ್ಷಣೆಗಾಗಿ ಸಿಐಟಿಯು‌ ವತಿಯಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲೇ ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿ ರಚಿಸಬೇಕು ಎಂಬುದು ನಮ್ಮ ಹೋರಾಟದ ಪ್ರಮುಖ ಬೇಡಿಕೆಯಾಗಿದೆ’ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದರು. ‘ಹಮಾಲಿ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳಿವೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸಬೇಕಿದೆ. ಪರವಾಗಿ ಇರುವ ಹಮಾಲಿ ಕಾರ್ಮಿಕರಿಗೆ ಶವ ಸಂಸ್ಕಾರಕ್ಕೆ ₹ 25 ಸಾವಿರ ನೀಡಲಾಗುತ್ತದೆ. ₹5 ಲಕ್ಷ ಮರಣ ಪರಿಹಾರ ನೀಡಲು ಅವಕಾಶವಿದೆ. ₹1 ಲಕ್ಷದವರೆಗೂ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವಿದೆ’ ಎಂದರು. ‘ಎಪಿಎಂಸಿ ಸೇರಿದಂತೆ ಬಜಾರ್ ತರಕಾರಿ ಮಾರುಕಟ್ಟೆ ಅಂಗಡಿಗಳಲ್ಲಿ ದುಡಿಯುತ್ತಿರುವ ಹಮಾಲಿ ಕಾರ್ಮಿಕರಿಗೆ ಪರವಾನಗಿ ನೀಡಬೇಕು. ವಸತಿ ವಂಚಿತರಿಗೆ ಸೂರು ಒದಗಿಸಬೇಕು. ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣ ಮೀಸಲಿಡಬೇಕು’ ಎಂದು ಅವರು ಒತ್ತಾಯಿಸಿದರು. 

ಪರವಾನಗಿ ನವೀಕರಣಕ್ಕೆ ಹಿಂದೇಟು

‘ಹಾವೇರಿಯ ಎಪಿಎಂಸಿ ಮಾರುಕಟ್ಟೆಗಳಲ್ಲಿ ಹಲವಾರು ವರ್ಷಗಳಿಂದ ನೂರಾರು ಹಮಾಲಿಗಳು  ಕೆಲಸ ಮಾಡುತ್ತಿದ್ದಾರೆ. ದಿನದ ಕೂಲಿ ಮಾತ್ರ ಕೈ ಸೇರುತ್ತಿದೆ. ಪರವಾನಗಿ ಇದ್ದರೂ ಪ್ರಯೋಜನವಿಲ್ಲ. ಹೀಗಾಗಿ ನವೀಕರಣ ಮಾಡಿಸುವುದನ್ನೇ ಕೈ ಬಿಟ್ಟಿದ್ದೇವೆ’ ಎಂದು ಹಾವೇರಿಯ ಹಮಾಲಿಯೊಬ್ಬರು ಹೇಳಿದರು. ‘ಪ್ರತಿ ವರ್ಷ ₹100 ಕೊಟ್ಟು ಹಮಾಲಿ ಕಾರ್ಡ್ ನವೀಕರಣ ಮಾಡುತ್ತಿದ್ದೆವು. ಎಪಿಎಂಸಿಗಳಲ್ಲಿ ಹಮಾಲಿ ಸ್ನೇಹಿ ವಾತಾವರಣವಿಲ್ಲ. ಕೆಲಸ ನೀಡಲು ಸಹ ಕೆಲವರು ಹಣ ಕೇಳುತ್ತಾರೆ. ಹೀಗಾಗಿ ಎಪಿಎಂಸಿ ಪರವಾನಗಿ ಇರುವ ಹಮಾಲಿಗಳು ಸಹ ಹೊರಗಡೆ ಮಾರುಕಟ್ಟೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಕ್ಕಷ್ಟು ಹಣದಲ್ಲೇ ಬದುಕು ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

ವ್ಯಾಪಾರಿಗಳಿಂದಲೂ ತಾತ್ಸಾರ

‘ಹಮಾಲಿ ಇಲ್ಲದಿದ್ದರೆ ವಸ್ತುಗಳ ಸಾಗಣೆ ಅಸಾಧ್ಯ. ಆದರೆ ಹಮಾಲಿ ಎಂಬ ಕಾರಣಕ್ಕೆ ವ್ಯಾಪಾರಿಗಳು ತಾತ್ಸಾರದಿಂದ ನೋಡುತ್ತಾರೆ. ಕೆಲಸ ಮಾಡಿದ್ದಕ್ಕೆ ಚೀಟಿ ನೀಡುವಂತೆ ಕೇಳಿದರೂ ಕೊಡುವುದಿಲ್ಲ’ ಎಂದು ಹಮಾಲಿಯೊಬ್ಬರು ದೂರಿದರು. ‘ಹಮಾಲಿ ಚೀಟಿ ಸಿಕ್ಕರೆ ಅದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು. ಆದರೆ ಕೆಲ ವ್ಯಾಪಾರಿಗಳು ಚೀಟಿ ಕೊಡುವುದಿಲ್ಲ. ‘ಬೇಕಾದರೆ ಕೆಲಸ ಮಾಡು ಇಲ್ಲದಿದ್ದರೆ ಹೊರಟು ಹೋಗು’ ಎಂದು ಉಡಾಫೆ ಉತ್ತರ ನೀಡುತ್ತಾರೆ’ ಎಂದರು. ‘ಪರವಾನಗಿ ಇರುವವರ ಜೊತೆಯಲ್ಲಿ ಇತರರು ಸಹ ಹಮಾಲಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಕೆಲಸ ಇಲ್ಲದ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಿಂದ ಬಂದು ಲೋಡಿಂಗ್–ಅನ್‌ಲೋಡಿಂಗ್ ಮಾಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟರೂ ದಿನಕ್ಕೆ ₹500 ದುಡಿಯುವುದು ಕಷ್ಟವಾಗಿದೆ. ಒಮ್ಮೊಮ್ಮೆ ಕೆಲಸವಿಲ್ಲದೇ ಬರಿಗೈಲಿ ಮನೆಗೆ ಹೋಗಿದ್ದೇವೆ’ ಎಂದು ಹೇಳಿದರು.

ಕನಿಷ್ಠ ವೇತನಕ್ಕೆ ಆಗ್ರಹ
‘ಹಮಾಲಿ ಕೆಲಸದಿಂದ ಬರುವ ಹಣದಿಂದಲೇ ಮನೆಯ ಖರ್ಚು–ವೆಚ್ಚ ನಿಭಾಯಿಸಬೇಕಿದೆ. ಇಂದಿನ ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ  ಹಮಾಲಿಗಳಿಗೆ ಕನಿಷ್ಠ ವೇತನ ನಿಗದಿಪಡಿಸಲು ಸರ್ಕಾರ ಮುಂದಾಗಬೇಕು’ ಎಂದು ಹಮಾಲಿಗಳು ಒತ್ತಾಯಿಸಿದರು. ‘ಹಮಾಲಿ ಮಾಡುವ ಪ್ರತಿಯೊಬ್ಬರಿಗೆ ಎಪಿಎಂಸಿಯವರು ಹಾಗೂ ವ್ಯಾಪಾರಿಗಳು ಕಡ್ಡಾಯವಾಗಿ ಕೆಲಸದ ಚೀಟಿ ನೀಡಬೇಕು. ಅದೇ ಚೀಟಿ ಆಧರಿಸಿ ಕನಿಷ್ಠ ವೇತನ ನೀಡಬೇಕು. ಕೆಲಸದ ಭದ್ರತೆ ಇಲ್ಲದೆ ಹಮಾಲಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಮಾಲಿಗಳು ಅಪಘಾತ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರಿಗೆ ಯಾವುದೇ ಚಿಕಿತ್ಸೆ ಸೌಲಭ್ಯ ಸಿಗುತ್ತಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.