ADVERTISEMENT

ಹಾನಗಲ್‌ ಉಪಚುನಾವಣೆ: ಅಭ್ಯರ್ಥಿಗಳ ಹಣೆಬರಹ ನಿರ್ಧಾರ ಇಂದು

ಸುಗಮ ಮತದಾನಕ್ಕೆ 263 ಮತಗಟ್ಟೆ ಸ್ಥಾಪನೆ: 1155 ಸಿಬ್ಬಂದಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 19:30 IST
Last Updated 29 ಅಕ್ಟೋಬರ್ 2021, 19:30 IST
ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವಿವಿಧ ಮತಗಟ್ಟೆಗಳಿಗೆ ಶುಕ್ರವಾರ ಬಸ್‌ಗಳಲ್ಲಿ ತೆರಳಲು ಅಣಿಯಾಗಿರುವ ಚುನಾವಣಾ ನಿಯೋಜಿತ ಸಿಬ್ಬಂದಿ 
ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವಿವಿಧ ಮತಗಟ್ಟೆಗಳಿಗೆ ಶುಕ್ರವಾರ ಬಸ್‌ಗಳಲ್ಲಿ ತೆರಳಲು ಅಣಿಯಾಗಿರುವ ಚುನಾವಣಾ ನಿಯೋಜಿತ ಸಿಬ್ಬಂದಿ    

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಅ.30ರಂದು ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದ್ದು, ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಹಾನಗಲ್ ಕುಮಾರೇಶ್ವರ ಹಾಗೂ ನ್ಯೂ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಮಸ್ಟರಿಂಗ್ ಕಾರ್ಯಕ್ರಮದ ಚಟುವಟಿಕೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು.ಮತದಾನ ಕೇಂದ್ರಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದೆ ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಸುಗಮ ಮತದಾನಕ್ಕಾಗಿ 239 ಮೂಲ ಹಾಗೂ 24 ಹೆಚ್ಚುವರಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ ರ‍್ಯಾಂಪ್‌, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ತಲಾ 263 ಬಿಯು, ಸಿಯು ಹಾಗೂ ವಿವಿ ಪ್ಯಾಟ್‍ಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ನಾಲ್ಕು ಜನರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ 263 ಮತಗಟ್ಟೆಗಳಿಗೆ 1155 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ADVERTISEMENT

ಒಂದು ‘ಅಂಗವಿಕಲಸ್ನೇಹಿ’ ಮತಗಟ್ಟೆ (ಸಂಖ್ಯೆ-98) ಹಾಗೂ ಎರಡು ‘ಸಖಿ’ ಮತಗಟ್ಟೆಗಳನ್ನು (ಸಂಖ್ಯೆ 97 ಮತ್ತು 122) ಸ್ಥಾಪಿಸಲಾಗಿದೆ. ಕ್ಷೇತ್ರದಲ್ಲಿ 33 ಸೂಕ್ಷ್ಮ, 3 ದುರ್ಬಲ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೆ 21 ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ. 121 ಮತಗಟ್ಟೆಗಳಲ್ಲಿ ‘ವೆಬ್ ಕಾಸ್ಟಿಂಗ್’ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲಾ ಕಂಟ್ರೋಲ್ ರೂಂ ಹಾಗೂ ಸಿಇಒ ಕಚೇರಿ, ಹಾಗೂ ಆರ್.ಒ. ಕಚೇರಿಯಿಂದ ಮತದಾನವನ್ನು ‘ವೆಬ್ ಕಾಸ್ಟಿಂಗ್’ ಮೂಲಕ ವೀಕ್ಷಣೆ ಮೂಲಕ ನಿಗಾವಹಿಸಲಾಗುತ್ತದೆ ಎಂದರು.

ರಾಜಕೀಯ ಪೋಸ್ಟರ್‌, ಬ್ಯಾನರ್, ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುವಂತಿಲ್ಲ. ಮತದಾರರಿಗೆ ಪಕ್ಷದ ಚಿಹ್ನೆ, ಹೆಸರು ಇರುವ ಮತದಾರರ ಚೀಟಿ ನೀಡುವಂತಿಲ್ಲ. ಮತಗಟ್ಟೆ ವ್ಯಾಪ್ತಿಯಲ್ಲಿ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದರು.

ಮತದಾನ ಪ್ರಕ್ರಿಯೆಗೆ 610 ಪೊಲೀಸ್ ಸಿಬ್ಬಂದಿ, ನಾಲ್ಕು ಡಿಎಸ್‍ಪಿ, 11 ಸಿಪಿಐ, 29 ಪಿಎಸ್‍ಐ, 85 ಎಎಸ್‍ಐ, 481 ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಕಾನ್‌ಸ್ಟೆಬಲ್‌ಗಳು, 30 ಜನ ಮಹಿಳಾ ಸಿಬ್ಬಂದಿ, 90 ಸಿಆರ್‌ಪಿ ಸಿಬ್ಬಂದಿ, ಒಂದು ಸಿಐಎಸ್‍ಎಫ್ 90 ಸಿಬ್ಬಂದಿ, ಆರು ಪ್ಲಾಟೂನ್‍ಗಳನ್ನು ಒಳಗೊಂಡ ಕೆಎಸ್‍ಆರ್‌ಪಿ ಸಿಬ್ಬಂದಿ ಹಾಗೂ ಸೂಕ್ಷ್ಮ ಮತಗಟ್ಟೆಗಳಿಗೆ ಅರೆಸೇನಾ ಪಡೆ ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌, ಸವಣೂರ ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ್‌ ಹಾಗೂ ಸಹಾಯಕ ಚುನಾವಣಾಧಿಕಾರಿ ಎರಿಸ್ವಾಮಿ ಇದ್ದರು.

ಮತದಾರರ ವಿವರ
1,05,525
: ಪುರುಷ ಮತದಾರರು
98,953: ಮಹಿಳಾ ಮತದಾರರು
03:ಇತರ ಮತದಾರರು
2,04,481: ಒಟ್ಟು ಮತದಾರರು

‘ಮತದಾರರಿಗೆ ಡ್ರಾಪ್‌ ಕೊಡುವಂತಿಲ್ಲ’
ಮತಗಟ್ಟೆಗೆ ಮತದಾರರನ್ನು ವಾಹನದಲ್ಲಿ ಕರೆದುಕೊಂಡು ಬರುವುದು ಹಾಗೂ ಮನೆಗೆ ವಾಹನದಲ್ಲಿ ಡ್ರಾಪ್ ಮಾಡುವುದನ್ನು ನಿರ್ಬಂಧಿಸಲಾಗಿದೆ. ಮತಗಟ್ಟೆಯ 100 ಮೀಟರ್ ಅಂತರದೊಳಗೆ ಪ್ರಚಾರ ಮಾಡುವಂತಿಲ್ಲ. 200 ಮೀಟರ್ ವ್ಯಾಪ್ತಿಯ ಹೊರಗೆ ರಾಜಕೀಯ ಪಕ್ಷದ ಚುನಾವಣೆ ಬೂತ್ ಸ್ಥಾಪಿಸಬಹುದು. ಮತಗಟ್ಟೆಯ 100 ಮೀಟರ್ ವ್ಯಾಪ್ತಿಯೊಳಗೆ ಮೊಬೈಲ್ ಫೋನ್, ಕಾರ್ಡ್‌ಲೆಸ್‌ ಫೋನ್ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.