ADVERTISEMENT

ಹಾನಗಲ್: ಗೌಡಗೆರೆ ಕೆರೆಗಿಲ್ಲ ತಡೆಗೋಡೆ

ಗ್ರಾಮಕ್ಕೆ ನುಗ್ಗುವ ನೀರು, ಮನವಿಗೆ ಸಿಗದ ಸ್ಪಂದನೆ

ಮಾರುತಿ ಪೇಟಕರ
Published 11 ಅಕ್ಟೋಬರ್ 2023, 4:20 IST
Last Updated 11 ಅಕ್ಟೋಬರ್ 2023, 4:20 IST
ಹಾನಗಲ್ ತಾಲ್ಲೂಕಿನ ಹಿರೇಕಣಗಿ ಗ್ರಾಮಕ್ಕೆ ಮಳೆಗಾಲದ ಸಮಯದಲ್ಲಿ ಜಲಸಂಕಷ್ಟ ಉಂಟುಮಾಡುವ ಗೌಡಗೆರೆ ಕೆರೆಗೆ ತಡೆಗೋಡೆ ನಿರ್ಮಾಣ ಅಗತ್ಯವಾಗಿದೆ.
ಹಾನಗಲ್ ತಾಲ್ಲೂಕಿನ ಹಿರೇಕಣಗಿ ಗ್ರಾಮಕ್ಕೆ ಮಳೆಗಾಲದ ಸಮಯದಲ್ಲಿ ಜಲಸಂಕಷ್ಟ ಉಂಟುಮಾಡುವ ಗೌಡಗೆರೆ ಕೆರೆಗೆ ತಡೆಗೋಡೆ ನಿರ್ಮಾಣ ಅಗತ್ಯವಾಗಿದೆ.   

ಹಾನಗಲ್: ಮಳೆಗಾಲದಲ್ಲಿ ನಿರಂತರವಾಗಿ ಮಳೆ ಸುರಿದರೆ ಅಥವಾ ಅಕಾಲಿಕವಾಗಿ ಅಧಿಕ ಮಳೆಯಾದರೆ ತಾಲ್ಲೂಕಿನ ಹಿರೇಕಣಗಿ ಗ್ರಾಮ ಜಲದಿಗ್ಭಂಧನಕ್ಕೆ ಒಳಗಾಗುತ್ತದೆ. ಗ್ರಾಮದ ಗೌಡಗೆರೆ ಕೆರೆ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ.

ಹಿರೇಕಣಗಿ ಮಲೆನಾಡಿಗೆ ಹೊಂದಿಕೊಂಡ ಗ್ರಾಮ. ಸಹಜವಾಗಿ ಮಳೆಗಾಲದಲ್ಲಿ ಇಲ್ಲಿ ಮಳೆ ಅಧಿಕ. ಗೌಡಗೆರೆ ಕೆರೆ ಗ್ರಾಮದ ಸನಿಹದಲ್ಲಿಯೇ ಇದೆ.

ಇತ್ತೀಚಿನ ವರ್ಷಗಳ ಅಧಿಕ ಮಳೆಗೆ ಈ ಕೆರೆ ಭರ್ತಿಯಾಗುತ್ತಿದೆ. ಕೋಡಿ ಮೂಲಕ ನೀರು ಹರಿದು ಹೋದರೂ, ನೀರಿನ ಒತ್ತಡಕ್ಕೆ ಗ್ರಾಮದ ರಸ್ತೆಗೆ ಹೊಂದಿಕೊಂಡ ಕೆರೆಯ ಒಡ್ಡು ಒಡೆದುಕೊಳ್ಳುತ್ತದೆ. ಹೀಗಾಗಿ ಗ್ರಾಮದಲ್ಲಿ ಕೆರೆ ನೀರು ನುಗ್ಗುತ್ತದೆ. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಸಂಬಂಧಿತ ಇಲಾಖೆಗಳಿಗೆ ಮನವಿ ಮಾಡುತ್ತಕೇ ಬಂದಿದ್ದಾರೆ. ಆದರೆ ಪರಿಹಾರ ಈ ತನಕ ಸಿಕ್ಕಿಲ್ಲ.

ADVERTISEMENT

ಸ್ಥಳೀಯ ಗ್ರಾಮ ಪಂಚಾಯ್ತಿ ವತಿಯಿಂದ ನರೇಗಾ ಅಡಿಯಲ್ಲಿ ಕೆರೆರೆ ಸಂಬಂಧಪಟ್ಟಂತೆ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಇದು ತಾತ್ಕಾಲಿಕ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಕೆರೆ ಕೋಡಿ ಸ್ವಚ್ಛಗೊಳಿಸಿ, ಅಲ್ಲಿದ್ದ ಬಸಿಗಾಲುವೆಗಳನ್ನು ದುರಸ್ತಿ ಮಾಡಲಾಗಿದ್ದು, ಪಿಡಬ್ಲ್ಯುಡಿ ಸಹಕಾರದಿಂದ ಕೆರೆ ಒಡ್ಡು ದುರಸ್ತಿ, ಅಲ್ಲಿದ್ದ ಚರಂಡಿ ವಿಸ್ತರಣೆ ಮತ್ತಿತರ ಕಾಮಗಾರಿಗಳನ್ನು ಮಾಡಲಾಗಿದೆ. ಮುಖ್ಯವಾಗಿ ಕೆರೆಗೆ ತಡೆಗೋಡೆ ನಿರ್ಮಾಣ ಅತ್ಯಗತ್ಯ ಎಂಬುದು ಗ್ರಾಮಸ್ಥರ ವಾದ.

ನಲ್ಲಿ ನೀರು: ‘ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡು ಮನೆ ಮನೆಗೆ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಗ್ರಾಮಕ್ಕೆ ಒಂದೇ ಮೇಲ್ಮಟ್ಟದ ಜಲಾಗಾರವಿದೆ. ಅಂದಾಜು ಸಾವಿರ ಜನಸಂಖ್ಯೆಯ ಈ ಗ್ರಾಮಕ್ಕೆ ಮತ್ತೊಂದು ಮೇಲ್ಮಟ್ಟದ ಜಲಾಗಾರದ ಅವಶ್ಯಕತೆ ಇದೆ’ ಎಂಬುದು ಗ್ರಾಮಸ್ಥ ಸುರೇಶ ದೊಡ್ಡಕುರುಬರ ಅಭಿಪ್ರಾಯ.

‘ಗ್ರಾಮದ ಕುರುಬಗೇರಿ ಓಣಿಯ ರಸ್ತೆ ಮಳೆಗಾಲದಲ್ಲಿ ಕೆಸರುಗದ್ದೆಯಾಗುತ್ತದೆ. ಚರಂಡಿ ವ್ಯವಸ್ಥೆಯೂ ಇಲ್ಲ. ಈ ಭಾಗದಲ್ಲಿ ಕಾಂಕ್ರಿಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಬೇಕು’ ಎಂದು ಗ್ರಾಮಸ್ಥ ಪ್ರಶಾಂತ ಕಾಮನಹಳ್ಳಿ ಒತ್ತಾಯಿಸಿದರು.

ಹಾನಗಲ್ ತಾಲ್ಲೂಕಿನ ಹಿರೇಕಣಗಿ ಗ್ರಾಮದ ಕುರುಬಗೇರಿ ಓಣಿಯ ರಸ್ತೆ ಸುಧಾರಣೆಗೊಂಡಿಲ್ಲ. ಕಾಂಕ್ರಿಟ್‌ ರಸ್ತೆ ನಿರ್ಮಿಸಬೇಕು ಎಂದು ನಿವಾಸಿಗಳು ಆಗ್ರಹಿಸುತ್ತಾರೆ.

‘ತಡೆಗೋಡೆ ನಿರ್ಮಾಣಕ್ಕೆ ಅನುದಾನವಿಲ್ಲ’

‘ಹಿರೇಕಣಗಿ ಗ್ರಾಮದ ಬಹುತೇಕ ಓಣಿಗಳಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣಗೊಂಡಿವೆ. ಚರಂಡಿ ವ್ಯವಸ್ಥೆ ಒದಗಿಸಲಾಗಿದೆ. ಮೇಲ್ಮಟ್ಟದ ಜಲಾಗಾರ ಇತ್ತೀಚೆಗೆ ದುರಸ್ತಿ ಮಾಡಿಸಲಾಗಿದೆ. ಕೆರೆ ನೀರು ಗ್ರಾಮಕ್ಕೆ ನುಗ್ಗದಂತೆ ಕಾಮಗಾರಿ ಮಾಡಲಾಗಿದೆ. ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಅನುದಾನ ನಮ್ಮಲ್ಲಿ ಲಭ್ಯವಿಲ್ಲ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರ್‌.ಬಿ.ಮಿಠಾಯಿಗಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.