ADVERTISEMENT

ಹಾವೇರಿ: ಹಾನಗಲ್ ಕ್ಷೇತ್ರದಲ್ಲಿ ‘ಸ್ವಾಭಿಮಾನ’ದ ಕಹಳೆ

ಮುಂದಿನ ರಾಜಕೀಯ ಬೆಳವಣಿಗೆಗೆ ವೇದಿಕೆ : ‘ತಾಲ್ಲೂಕು ಸ್ವಾಭಿಮಾನಿಗಳ ಒಕ್ಕೂಟ’ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 21:55 IST
Last Updated 2 ಅಕ್ಟೋಬರ್ 2022, 21:55 IST
ಹಾನಗಲ್‌ನಲ್ಲಿ ಭಾನುವಾರ ವಿವಿಧ ಪಕ್ಷಗಳ ಮುಖಂಡರು ಸೇರಿಕೊಂಡು ಗಾಂಧಿ ಜಯಂತಿ ಆಚರಿಸಿದರು. ಇದೇ ವೇಳೆ ಸ್ವಾಭಿಮಾನಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು.
ಹಾನಗಲ್‌ನಲ್ಲಿ ಭಾನುವಾರ ವಿವಿಧ ಪಕ್ಷಗಳ ಮುಖಂಡರು ಸೇರಿಕೊಂಡು ಗಾಂಧಿ ಜಯಂತಿ ಆಚರಿಸಿದರು. ಇದೇ ವೇಳೆ ಸ್ವಾಭಿಮಾನಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು.   

ಹಾನಗಲ್ (ಹಾವೇರಿ ಜಿಲ್ಲೆ): ಶಾಸಕ ಸಿ.ಎಂ.ಉದಾಸಿ ನಿಧನದ ಹಿನ್ನೆಲೆಯಲ್ಲಿ ಕಳೆದ ವರ್ಷ ನಡೆದಿದ್ದ ಉಪ ಚುನಾವಣೆಯಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳು ಕ್ಷೇತ್ರದ ಹೊರಗಿನ ಅಭ್ಯರ್ಥಿಗಳಿಗೆ ಮಣೆಹಾಕಿದ್ದವು. ಇದು ತಾಲ್ಲೂಕಿನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂಬ ಒಳಬೇಗುದಿಯಲ್ಲಿ ಸ್ಥಳೀಯ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಆಮ್ಆದ್ಮಿ ಪಾರ್ಟಿಯ ಪ್ರಮುಖ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿ ‘ತಾಲ್ಲೂಕು ಸ್ವಾಭಿಮಾನಿಗಳ ಒಕ್ಕೂಟ’ ವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.

ಭಾನುವಾರ ಇಲ್ಲಿನ ಬಾಬು ಜಗಜೀವನ್‌ರಾಮ್ ಭವನದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಈ ಒಕ್ಕೂಟವನ್ನು ಘೋಷಿಸಲಾಯಿತು. ಮಾಜಿ ಸಚಿವ, ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಭಿಮಾನದ ಕಹಳೆ ಮೊಳಗಿತು. ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ಅಕ್ಕಿಆಲೂರ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವಿವಿಧ ಪಕ್ಷಗಳ ಮುಖಂಡರು ಒಂದಾಗಿರುವುದು ಮುಂದಿನ ರಾಜ ಕೀಯ ಬೆಳವಣಿಗೆಗಳಿಗೆ ವೇದಿಕೆಯಾಗುವ ಲಕ್ಷಣಗಳಿವೆ ಎಂದೇ ಹೇಳಲಾಗುತ್ತಿದೆ.

ADVERTISEMENT

ಮನೋಹರ ತಹಸೀಲ್ದಾರ್ ಮಾತನಾಡಿ, ‘ಈಗ ನಾವು ಸಿಂಹಾವ ಲೋಕನದ ಹಾದಿಯಲ್ಲಿದ್ದೇವೆ. ಸ್ವಾಭಿ ಮಾನದ ಕಿಚ್ಚು ಹೆಚ್ಚಬೇಕು’ ಎಂದರು.

ಕಾಂಗ್ರೆಸ್‌ನ ಪ್ರಕಾಶಗೌಡ ಪಾಟೀಲ ಮಾತನಾಡಿ, ‘ಹಾನಗಲ್ ತಾಲ್ಲೂಕಿನ ಇತಿಹಾಸಕ್ಕೆ ಸ್ವಾಭಿಮಾನದ ಕಳೆ ಕಟ್ಟಬೇಕಾಗಿದೆ. ಒಟ್ಟಾಗಿ ನಮ್ಮತನ ಉಳಿಸಿಕೊಳ್ಳಲು ಕಂಕಣ ಬದ್ಧರಾಗಬೇಕು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾರೂ ಸಹಿಸಿಕೊಳ್ಳಬಾರದು’ ಎಂದರು.

ಬಿಜೆಪಿ ಮುಖಂಡ ಬಸವರಾಜ ಹಾದಿಮನಿ ಮಾತನಾಡಿ,‘ತಾಲ್ಲೂಕಿನ ಅಭಿವೃದ್ಧಿಯ ಉದ್ದೇಶ ಇಟ್ಟುಕೊಂಡು ಸ್ವಾಭಿಮಾನಿಗಳ ಒಕ್ಕೂಟವನ್ನು ಬೆಂಬಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.